‘ರಾವ್ ಬಹುದ್ದೂರ್ ನಿಟ್ಟೆ ಮಹಾಲಿಂಗ ಅಡ್ಯಂತಾಯ’ ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಈ ಕೃತಿಯನ್ನು ಯಾಜಿ. ಡಾ.ಎಚ್. ದಿವಾಕರ್ ಭಟ್ ರಚಿಸಿದ್ದಾರೆ. ಈ ಮಾಲಿಕೆಯ ಸಂಪಾದಕರಾಗಿದ್ದ ಡಾ.ಬಿ. ಜನಾರ್ದನ ಭಟ್ ತಮ್ಮ ಸಂಪಾದಕೀಯ ನುಡಿಗಳಲ್ಲಿ ಈ ಕೃತಿಯ ಕುರಿತು ಬರೆದಿದ್ದಾರೆ. ಒಂದು ಪ್ರದೇಶದ ಬದುಕು ಸುಸಂಸ್ಕೃತವೆಸಿಕೊಳ್ಳಬೇಕಾದರೆ ಅಲ್ಲಿನ ಪ್ರತಿಭಾವಂತ ಪ್ರಜೆಗಳು ವಿವಿಧ ಕ್ಷೇತ್ರಗಳಲ್ಲಿ ಸಮಾಜದ ಒಳಿತಿಗಾಗಿ ದುಡಿಯಬೇಕಾಗುತ್ತದೆ. ಹೊಟ್ಟೆಯೇ ಕೇಂದ್ರವಾಗಿದೆ ನರನ ಜೀವಿತಕ್ಕೆ ಎಂಬಂತಹ ಪರಿಸ್ಥಿತಿ ಇದ್ದಾಗ ಇಂತಹ ಸಂಸ್ಕೃತಿ ಬೆಳೆಯಲಾರದು. ಗ್ರೀಕ್ ಚಿಂತಕ ಲಾಂಜೈನಸ್ ನ ವಿಚಾರಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ರಾಜ ಪ್ರಭುತ್ವದಡಿ ಸ್ವಾತಂತ್ರ್ಯ ಇಲ್ಲದ ಕಾರಣ ಪ್ರತಿಭೆ ಮುರುಟಿ ಹೋಗುತ್ತದೆ. ಪ್ರಜಾ ಪ್ರಭುತ್ವದಲ್ಲಿ ಸೃಷ್ಟಿಕಾರ್ಯ ಪ್ರಗತಿಪಥದಲ್ಲಿ ಸಾಗುತ್ತದೆ ಎನ್ನುವ ಮಾತುಗಳನ್ನು ಒಪ್ಪದೆ ಅವನು ಜನರ ನೈತಿಕ ಅಧಃಪತನದಲ್ಲಿ ಪ್ರತಿಭೆಯ ಅವನತಿ ಮತ್ತು ದುರ್ಗತಿಗೆ ಕಾರಣವನ್ನು ಗುರುತಿಸುತ್ತಾನೆ. ಧನಲೋಭ, ಭ್ರಷ್ಟಾಚಾರ, ಸುಖಲೋಲುಪತೆ, ಸ್ವಾರ್ಧಗಳ ಪರಿಣಾಮವಾಗಿ ಹುಟ್ಟಿಕೊಳ್ಳುವ ನಿರ್ಲಜ್ಜ ಮನೋವೃತ್ತಿ, ಆದರ್ಶ ವಿಮುಖತೆ ಇವುಗಳಿಂದಾಗಿ ಆತ್ಮಶಕ್ತಿ ಕುಗ್ಗಿಸಿಕೊಂಡ ಒಂದು ಜನಾಂಗದಲ್ಲಿ ಸಂಸ್ಕೃತಿ ದೊಡ್ಡದಾಗಿ ಬೆಳೆಯಲಾರದು ಎನ್ನುವುದು ಅವನ ಅಭಿಪ್ರಾಯ. ನಮ್ಮ ನಾಡಿನಲ್ಲಿ ಹಾಗಾಗದ ಹಾಗೆ ಸದಾ ಎಚ್ಚರವಾಗಿರಬೇಕಾದುದು ಅಗತ್ಯ. ಜನರಲ್ಲಿ ಆದರ್ಶಗಳನ್ನು ಬಿತ್ತಬೇಕಾದುದೂ ಅಗತ್ಯ. ಇಂತಹ ಮಹತ್ಕಾರ್ಯಕ್ಕೆ ಕಾಂತಾವರ ಕನ್ನಡ ಸಂಘ ತನ್ನ ಕಿಂಚಿತ್ ಕಾಣಿಕೆ ಸಲ್ಲಿಸುತ್ತಲೇ ಬಂದಿದೆ. ನಾಡಿಗೆ ನಮಸ್ಕಾರ ಪುಸ್ತಕ ಮಾಲೆ ಅಂತಹ ಒಂದು ಕಾಣಿಕೆ ಎನ್ನುತ್ತಾರೆ. ಬಿ.ಜನಾರ್ದನ ಭಟ್. ಈ ಕೃತಿಯಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದ ಶ್ರೇಷ್ಟ ವಿದ್ವಾಂಸ ನಿಟ್ಟೆ ಮಹಾಲಿಂಗ ಅಡ್ಯಂತಾಯ ಅವರ ಬದುಕಿನ ವಿವಿಧ ಮಜಲುಗಳ ವಿವರಣೆಗಳಿವೆ.
©2024 Book Brahma Private Limited.