ಅರ್ಜೆಂಟೈನಾದ ಬರಹಗಾರ, ಚಿಂತಕ ಜಾರ್ಜ್ ಬೋರ್ಹೆಸ್ ನ ಬದುಕು, ಬರಹಗಳ ಕುರಿತಾದ ಪುಸ್ತಕ.
ಮನುಕುಲದ ಆದಿಯಿಂದ ಬೆಳೆದುಬಂದ ಜ್ಞಾನ, ವಿಜ್ಞಾನ, ತತ್ವಜ್ಞಾನ, ಸಾಹಿತ್ಯ ಸಂಸ್ಕೃತಿಗಳ ಜೊತೆ ದೇವದೂತರ ವಹಿಗಳನ್ನೂ, ಭವಿಷ್ಯದ ಕಾಲಜ್ಞಾನವನ್ನೂ ಒಳಗೊಂಡ ಎಲ್ಲಾ ಭಾಷೆಗಳ, ಎಲ್ಲಾ ಕಾಲದ ಗ್ರಂಥಗಳ ಸಂಗ್ರಹಾಲಯವೊಂದನ್ನು ಸ್ಥಾಪಿಸುವ ಕನಸುಕಂಡಿದ್ದ ಅರ್ಜೈಂಟೈನಾದ ಉದ್ಧಾಮ ಲೇಖಕ ಜಾರ್ಜಾ ಲೂಯಿ ಬೋರ್ಹೇಸ್ ಸ್ವತಃ ತನ್ನ ದೇಶದ ರಾಷ್ಟ್ರೀಯ ಗ್ರಂಥಾಲಯದ ಮುಖ್ಯ ಗ್ರಂಥಪಾಲಕನಾಗಿದ್ದು ಆಕಸ್ಮಿಕವಾಗಿರಲಾರದು.
ತತ್ವಜ್ಞಾನಿ ಬೋರ್ಹೆಸ್ ಗೆ ಭಾಷೆ ಒಂದು ಬಂಧನ, ಆದರೆ ಲೇಖಕ ಬೋರ್ಹೆಸ್ ಗೆ ಭಾಷೆಯ ಅಭಿವ್ಯಕ್ತಿಯಲ್ಲೇ ಬಿಡುಗಡೆ. ಭಾಷೆಯ ಮಿತಿ ಹಾಗೂ ಭಾಷೆಗೆ ಮಾತ್ರ ಇರುವ ಬಹುಕಥನ, ಬಹುವಚನಗಳ ಸಾಧ್ಯತೆಗಳನ್ನು ಒಟ್ಟೊಟ್ಟಿಗೆ ಕಾಣಿಸಲು ಬೋರ್ಹೆಸ್ ತನ್ನ ಬರವಣಿಗೆಯಲ್ಲಿ ಅಳವಡಿಸಿಕೊಂಡ ತಂತ್ರಗಳು ಬೆರಗು ಹುಟ್ಟಿಸುತ್ತವೆ.ಆತನ ಒಂದೊಂದು ವಾಕ್ಯವೂ ಅನಿರೀಕ್ಷಿತ, ಒಮ್ಮೊಮ್ಮೆ ಆಘಾತ ಕೂಡ.
ಬೋರ್ಹೆಸ್ ಯಾಕೆ ಮುಖ್ಯನಾಗುತ್ತಾನೆ ಎನ್ನುವುದಕ್ಕೆ ಮುಖ್ಯ ಕಾರಣ ಅವನು ಸಾಹಿತ್ಯವನ್ನು ಮಾತ್ರ ಮುಖ್ಯವಾಗಿ ಗ್ರಹಿಸದೆ ಇತರೆ ಜ್ಞಾನಶಿಸ್ತುಗಳಾದ ಚರಿತ್ರೆ, ತತ್ವಜ್ಞಾನ, ಅಂತ್ರೋಪಾಲಜಿ, ಧರ್ಮ, ಸಮಾಜಶಾಸ್ತ್ರ ಮುಂತಾದವುಗಳು ಸಾಹಿತ್ಯದೊಡನೆ ಹೊಂದಿರುವ ಸಂಬಂಧದ ಕುರಿತು ತನ್ನ ಕೃತಿಗಳಲ್ಲಿ ಶೋಧಿಸುವುದು. ಬೋರ್ಹೆಸ್ ಯಾವುದು ಸಾಹಿತ್ಯ ಮತ್ತು ಸಾಹಿತ್ಯವಲ್ಲ ಎಂಬುದನ್ನು ನೇರವಾಗಿ ಹೇಳದಿದ್ದರೂ ಅದನ್ನು ತನ್ನ ಬರಹಗಳಲ್ಲಿ ನಿಖರವಾಗಿ ತೋರಿಸಿಕೊಡುತ್ತಾನೆ. ಯಾವುದೇ ವಿಚಾರವನ್ನಾಗಲಿ ಸಾಹಿತ್ಯದಲ್ಲಿ ಹೇಗೆ ತರಬೇಕು ಎನ್ನುವ ಜಾಣ್ಮೆ ಆತನಿಗಿದೆ. ಆ ಕಾರಣಕ್ಕೆ ಈ ಕೃತಿ ಮುಖ್ಯವೆನಿಸುತ್ತದೆ.
©2024 Book Brahma Private Limited.