ರಂಗಭೂಮಿ ಹಾಗೂ ಚಲನಚಿತ್ರ ನಿರ್ದೇಶಕ ಸದಾನಂದ ಸುವರ್ಣ ಅವರ ಜೀವನ-ಸಾಧನೆಯನ್ನು ದಾಖಲಿಸುವ ಕೃತಿ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯವರಾದ ಸದಾನಂದ ಸುವರ್ಣ ಅವರು ಮುಂಬಯಿಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದವರು. ಮುಂಬಯಿ ರಾತ್ರಿ ಹೈಸ್ಕೂಲ್ ನಲ್ಲಿ ಅಧ್ಯಾಪಕರಾಗಿ ಐದು ವರ್ಷ ಕೆಲಸ ಮಾಡಿದ ಅವರು ನಂತರ ಮೂರು ದಶಕಗಳ ಕಾಲ ಮುಂಬಯಿಯಲ್ಲಿ ಸ್ವಂತ ಬಣ್ಣದ ವ್ಯಾಪಾರಿಯಾಗಿದ್ದರು. ನಾಟಕ ರಚನೆ, ನಟನೆ, ನಿರ್ದೇಶನದಲ್ಲಿ ಐದು ದಶಕಗಳ ಕಾಲ ಶ್ರಮಿಸಿದ ಅವರು ಮುಂಬಯಿಯಲ್ಲಿ ಕನ್ನಡ ರಂಗಭೂಮಿ ಜೀವಂತವಾಗಿ ಇಟ್ಟವರು. ನಾಟಕಗಳಲ್ಲದೆ ಸಣ್ಣಕತೆ, ಕಾದಂಬರಿ ಕೂಡ ಪ್ರಕಟಿಸಿದ್ದಾರೆ. ಗಿರೀಶ ಕಾಸರವಳ್ಳಿ ನಿರ್ದೇಶನದ ಘಟಶ್ರಾದ್ಧ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು ತಬರನ ಕತೆ, ಮನೆ, ಕ್ರೌರ್ಯ ಚಿತ್ರಗಳ ನಿರ್ವಾಹಕ ನಿರ್ಮಾಪಕರಾಗಿದ್ದರು. ಈ ಎಲ್ಲ ಚಿತ್ರಗಳಿಗೂ ರಾಷ್ಟ್ರ ಪ್ರಶಸ್ತಿಸಂದಿವೆ. 1989ರಲ್ಲಿ ತೇಜಸ್ವಿ ಅವರ ಸಣ್ಣಕತೆ ಆಧರಿಸಿದ ’ಕುಬಿ ಮತ್ತು ಇಯಾಲ’ ಚಲನಚಿತ್ರ ಅವರ ನಿರ್ದೇಶನದ ಮೊದಲ ಚಿತ್ರ. ಅದಕ್ಕೆ ಅತ್ಯುತ್ತಮ ಚಿತ್ರ ಹಾಗೂ ಉತ್ತಮ ನಿರ್ದೇಶಕ ಹಾಗೂ ಉತ್ತಮ ಕತೆ ಪ್ರಶಸ್ತಿ ಪಡೆದಿದೆ. ಗುಡ್ಡದ ಭೂತ ಅವರ ನಿರ್ದೇಶನದ ಜನಪ್ರಿಯ ಕಿರುತೆರೆಯ ಧಾರಾವಾಹಿ. ಶಿವರಾಮ ಕಾರಂತ, ಶ್ರೀನಾರಾಯಣ ಗುರು, ತುಳುನಾಡು ಒಂದು ಇಣುಕುನೋಟ ಸಾಕ್ಷ್ಯಚಿತ್ರ ನಿರ್ದೇಶಿಸಿದ್ದಾರೆ. ಸದಾನಂದ ಸುವರ್ಣ ಅವರ ಜೀವನ-ಸಾಧನೆಯನ್ನು ಲೇಖಕಿ ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ.
ಉತ್ತರ ಕನ್ನಡ ಮೂಲದ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ಅವರು ಜನಿಸಿದ್ದು ದಕ್ಷಿಣ ಕನ್ನಡದ ಅಡ್ಯನಡ್ಕದಲ್ಲಿ. ಅಡ್ಯನಡ್ಕ, ಪುತ್ತೂರುಗಳಲ್ಲಿ ಪ್ರಾಥಮಿಕ, ಪ್ರೌಢ, ಕಾಲೇಜು ವಿದ್ಯಾಭ್ಯಾಸ ಪೂರೈಸಿರುವ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದರು. 'ಮಾಸ್ತಿಯವರ ಕತೆಗಳಲ್ಲಿ ಸ್ತ್ರೀ ಪ್ರತಿನಿಧೀಕರಣ' ಎಂಬ ಮಹಾಪ್ರಬಂಧ ರಚಿಸಿ ಹಂಪಿ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 'ಪರಾಮರ್ಶೆ' ಎಂಬ ವಿಮರ್ಶಾ ಸಂಕಲನ ಪ್ರಕಟಿಸಿರುವ ಅವರು 'ವಿಜಯ ಕರ್ನಾಟಕ' ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. 12-05-2020 ರಂದು ಸೀತಾಲಕ್ಷ್ಮಿ ಅವರು ನಿಧನರಾದರು. ...
READ MORE