ಸಂಗೀತವು ಜೀವದ ಕಲೆ. ಈ ಕಲೆಯು ಬಾಹ್ಯದ ಸಾಂತ್ವನವೂ ಹೌದು; ಆಂತರಿಕ ಬದುಕಿನ ಜೀವಚೈತನ್ಯವೂ ಹೌದು. ಇದರ ರಹಸ್ಯ ತಿಳಿದು ಬಾಳಿದವರು ನಮ್ಮ ದಕ್ಷಿಣ ಭಾರತದ ತಾಯಂದಿರಾದ ಶ್ರೀಮತಿ ಎಂ.ಎಸ್. ಸುಬ್ಬುಲಕ್ಷ್ಮಿ, ಶ್ರೀಮತಿ ಡಿ.ಕೆ. ಪಟ್ಟಮ್ಮಾಳ್ ಮತ್ತು ಶ್ರೀಮತಿ ಎಂ.ಎಲ್. ವಸಂತಕುಮಾರಿ, ಈ ಮೂವರು ಕರ್ನಾಟಕ ಸಂಗೀತದ ಚಿರಂತನ ಸಂಗೀತ ದೇವತೆಗಳು, ಡಾ. ಜಗದೀಶ ಕೊಪ್ಪ ಅವರು ಎಂ.ಎಲ್.ವಿ. ಅವರ ಬದುಕನ್ನೂ, ಸಂಗೀತದ ಬದುಕನ್ನೂ ಹೃದಯ ಮುಟ್ಟುವಂತೆ ಇಲ್ಲಿ ಚಿತ್ರಿಸಿದ್ದಾರೆ. ಎಂ.ಎಲ್.ವಿ ಅವರ ಬದುಕಿನ ಬವಣೆಯನ್ನೂ ಜತೆಗೆ ಸಂಗೀತ ಪ್ರಚಾರ-ಪ್ರಸಾರಕ್ಕಾಗಿ ಆಯುರ್ಮಾನದ ಉದ್ದಕ್ಕು ಸವೆಸಿದ ಹಾದಿಯನ್ನೂ ಕರುಳುಮಿಡಿಯುವಂತೆ ಅಕ್ಷರಗಳಲ್ಲಿ ನುಡಿದಿದ್ದಾರೆ; ನುಡಿಸಿದ್ದಾರೆ. - ಡಾ. ಜಗದೀಶ ಕೊಪ್ಪ ಅವರು ಚರಿತ್ರೆ, ಸಾಮಾಜಿಕ ಜೀವನ, ಪತ್ರಿಕೋದ್ಯಮ, ಆರ್ಥಿಕ ಚಿಂತನೆ, ಅನುವಾದ ಮುಂತಾದ ಕ್ಷೇತ್ರಗಳಲ್ಲಿ ಸಾಧಿಸಿರುವ ಸಿದ್ದಿ ಮತ್ತು ಸಾಧನೆಗಳನ್ನು ಕನ್ನಡನಾಡು ಈಗಾಗಲೇ ಕೊಂಡಾಡಿದೆ.
ಅವರು ಬೆಂಗಳೂರು ನಾಗರತ್ನಮ್ಮ ಮತ್ತು ಎಂ.ಎಸ್. ಸುಬ್ಬುಲಕ್ಷ್ಮಿ ಜೀವನ ಚರಿತ್ರೆಗಳನ್ನು ಬರೆದ ನಂತರ ಇದೀಗ ಸಂಗೀತ ಕಲಾನಿಧಿ ಡಾ. ಎಂ.ಎಲ್.ವಿ ಅವರ ಜೀವನಸಂಗೀತದ ಸಮಸ್ತ ಮಗ್ಗುಲುಗಳನ್ನು ನಮ್ಮೆದುರು ತಂದಿರಿಸಿದ್ದಾರೆ. ಅವರು ಇದಕ್ಕಾಗಿ ಪಟ್ಟಿರುವ ಶ್ರಮ-ಶೋಧನೆಗಳು ನಮ್ಮ ಕಣ್ಣನ್ನು ತೇವಿಸುತ್ತವೆ. ಎಂ.ಎಲ್.ವಿ ಅವರ ರುದ್ರ ಬದುಕಿನ ಹಂತಹಂತಗಳನ್ನು ನಮ್ಮ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತ ಹೃದಯವನ್ನು ಆದ್ರಗೊಳಿಸಿಬಿಟ್ಟಿದ್ದಾರೆ ಎನ್ನುತ್ತಾರೆ ಹಿರಿಯ ಲೇಖಕ ಮಲ್ಲೇಪುರಂ ಜಿ. ವೆಂಕಟೇಶ್ ಅವರು.
©2024 Book Brahma Private Limited.