‘ಎಲ್. ಗುಂಡಪ್ಪ’ ಸಿವಿಜಿ ಪಬ್ಲಿಕೇಷನ್ಸ್ ನ ಮಕ್ಕಳ ಸಾಹಿತ್ಯ ನಿರ್ಮಾಪಕರು ಮಾಲೆಯಲ್ಲಿ ಪ್ರಕಟವಾದ ಕೃತಿ. ಲೇಖಕ ಬೆ.ಗೋ. ರಮೇಶ್ ಈ ಕೃತಿಯನ್ನು ರಚಿಸಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಶ್ರೀ ಎಲ್ ಗುಂಡಪ್ಪ ಅವರು ಬಹುದೊಡ್ಡ ವಿದ್ವಾಂಸರು. ಪ್ರಮುಖವಾಗಿ ಭಾಷಾಂತರಕಾರರು. ಇವರಷ್ಟು ಪ್ರಾಚೀನ ತಮಿಳು ಸಾಹಿತ್ಯವನ್ನು ಕನ್ನಡದಲ್ಲಿ ಕೊಟ್ಟವರು ಇಲ್ಲವೆಂದೇ ಹೇಳಬೇಕು. ಮಕ್ಕಳ ಸಾಹಿತ್ಯವನ್ನೂ ಇವರು ರಚಿಸಿದರು. ಇಂಥವರನ್ನು ಕುರಿತು ಬರೆಯುವುದೆಂದರೆ ತುಂಬ ಅಭಿಮಾನದ ಸಂಗತಿಯಾಗುತ್ತದೆ’ ಎನ್ನುತ್ತಾರೆ ಲೇಖಕ ಬೆ.ಗೋ.ರಮೇಶ್. ಅದರಲ್ಲಿಯೂ ಇವರನ್ನು ಇವರ ಜೀವಿತ ಕಾಲದಲ್ಲಿ ಒಮ್ಮೆ ನೋಡಿ ಮಾತನಾಡಿಸಿದ್ದೆನಾಗಿ ಹಾಗೂ ಅವರ ಉಪನ್ಯಾಸ ಕೇಳಿದ್ದೆನಾಗಿ ಶ್ರೀ. ಎ.ಕೆ. ರಾಮೇಶ್ವರ ಅವರು ಇವರ ಕುರಿತು ಪುಸ್ತಕ ರಚಿಸಿಕೊಡಿ ಎಂದು ಪತ್ರ ಬರೆದಾಗ ಕೂಡಲೇ ಒಪ್ಪಿದೆ. ನಾನು ಚಿಕ್ಕವನಿದ್ದಾಗ ಗುಂಡಪ್ಪ ಅವರ 'ತಾಯಿ' ಹಾಗೂ 'ಚಟಾಕಿ' ಈ ಮಕ್ಕಳ ಪದ್ಯಗಳನ್ನು ಬಾಯಿ ಪಾಠ ಮಾಡಿಕೊಂಡಿದ್ದೆ. ದೀಪಾವಳಿ ಹಬ್ಬ ಬಂದಾಗಲೆಲ್ಲ 'ಚಟಾಕಿ' ಪದ್ಯ ಹಾಡಿಕೊಂಡೇ ಪಟಾಕಿ ಸಿಡಿಸುತ್ತಿದ್ದೆ. ಈ ಪದ್ಯಗಳು ಅಂಥ ಪ್ರಭಾವ ಬೀರಿದ್ದವು ಎನ್ನುತ್ತಾರೆ.
ಶ್ರೀ ಗುಂಡಪ್ಪ ಅವರು ಎಲೆಮರೆಯ ಹೂವಿನಂತೆ, ಯಾವ ಸದ್ದು ಗದ್ದಲವೂ ಮಾಡದ ಸಾಹಿತ್ಯದ ಕೆಲಸ ಮಾಡಿದವರು. ಯಾವ ಪ್ರತಿಫಲಾಪೇಕ್ಷೆಯಿಂದಲೂ ಇವರು ಬರೆಯಹೋಗಲಿಲ್ಲ. ಅಂತಹ ಸಾಧಕರ ಕುರಿತು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಈ ಕೃತಿ ರಚಿತವಾಗಿದೆ.
ಬೆ.ಗೋ. ರಮೇಶ್ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಹನಸಗೆಯಲ್ಲಿ ಆಗಸ್ಟ್ 22 , 1945ರಲ್ಲಿ ಜನಿಸಿದರು. ತಂದೆ ಗೊವಿಂದರಾಜು, ತಾಯಿ ರಾಧಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ನಡೆದದ್ದು ಬೆಂಗಳೂರಿನ ಮಲ್ಲೇಶ್ವರಂ ಶಾಲೆಯಲ್ಲಿ. ಇಂಟರ್‌ಮೀಡಿಯೆಟ್ ಓದಿದ್ದು ಸರಕಾರಿ ಕಾಲೇಜಿನಲ್ಲಿ. ಮುಂದೆ ರಮೇಶರು ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಪಡೆದರು. ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಉದ್ಯೋಗ ನಿರ್ವಹಿಸಿದ ಬೆ. ಗೋ ರಮೇಶರು ಕರ್ನಾಟಕ ಪವರ್ ಕಾರ್ಪೋರೇಷನ್ನಿನಲ್ಲಿ ಸಹಾಯಕ ಎಂಜನಿಯರಾಗಿ, ಸಹಾಯಕ ಎಕ್ಸುಕ್ಯುಟಿವ್ ಎಂಜನಿಯರಾಗಿ, ಎಕ್ಸಿಕ್ಯುಟಿವ್ ಎಂಜನಿಯರಾಗಿ, ರಾಯಚೂರಿನ ಶಾಕೋತ್ಪನ್ನ ವಿದ್ಯುದಾಗಾರದಲ್ಲಿ ಸೇವೆ ಸಲ್ಲಿಸಿ ...
READ MORE