ಕ್ಯೂಬಾದ ರಾಷ್ಟ್ರಾಧ್ಯಕ್ಷರಾಗಿದ್ದ ಫಿಡೆಲ್ ಕ್ಯಾಸ್ಟ್ರೋ ಅವರು ಜಾಗತಿಕ ಮಹತ್ವದ ವ್ಯಕ್ತಿಗಳಲ್ಲಿ ಒಬ್ಬರು. ಸಾಮ್ರಾಜ್ಯಶಾಹಿ ಅಮೆರಿಕಾಕ್ಕೆ ಸಿಂಹಸ್ವಪ್ನವಾಗಿದ್ದ ಕ್ಯಾಸ್ಟ್ರೋ ಅವರ ಜೀವನದ ಸಾಧನೆಗಳನ್ನು ಈ ಪುಸ್ತಕ ಕಟ್ಟಿಕೊಡುತ್ತದೆ. ಖ್ಯಾತ ಲೇಖಕ ಬರಗೂರು ರಾಮಚಂದ್ರಪ್ಪ ಅವರು ’ಕ್ಯಾಸ್ಟ್ರೋ ಬದುಕು ಕನ್ನಡಕ್ಕಷ್ಟೇ ಅಲ್ಲ. ಎಲ್ಲ ಭಾರತೀಯ ಭಾಷೆಗಳಲ್ಲೂ ಬೆಳಕು ಕಂಡರೆ ಆದೊಂದು ಅಭೂತಪೂರ್ವ ಅಗತ್ಯದ ಕೆಲಸವಾಗುತ್ತದೆ. ಕ್ಯಾಸ್ಟ್ರೋ ವಿಚಾರಧಾರೆಯು ಭಾರತದ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವೆಂಬ ನೆಲೆಯಲ್ಲಿ ಈ ಮಾತು ಹೇಳುತ್ತಿದ್ದೇನೆ. ಅಂದು ಜಾಗತಿಕ ಜಮೀನ್ದಾರರಿಗೆ ಸೆಡ್ಡು ಹೊಡೆದು ಸ್ವಾಭಿಮಾನಿ ಸಮತಾ ಸಮಾಜದ ಸವಾಲು ಸ್ವೀಕರಿಸಿ, ಯಶಸ್ಸಿನತ್ತ ಸಾಗಿದ ಕ್ಯಾಸ್ಟ್ರೋ ದಾರಿ ಕಷ್ಟಕರವಾದರೂ ಆನುಕರಣೀಯವಾದುದು. ಜಾಗತಿಕ ಜಮೀನ್ದಾರನಂತೆ ಅಂದು ಮತ್ತು ಇಂದು ಸದಾ ನಡೆದುಕೊಳ್ಳುತ್ತಿರುವ ಅಮೆರಿಕದ ಆರ್ಥಿಕ ನೀತಿಯನ್ನು ಆಮದು ಮಾಡಿಕೊಂಡಿರುವ ಭಾರತಕ್ಕೆ ಕ್ಯಾಸ್ಟ್ರೋ ಕಾಣ್ಕೆಯಿಂದ ಪರ್ಯಾಯದ ಹಾದಿ ಗೊಚರವಾದೀತು. ಸ್ವದೇಶಿಯೆಂದರೆ ನಮ್ಮಲ್ಲಿ ಕೆಲವರು ತಿಳಿದಂತೆ ಧರ್ಮ, ಸಂಸ್ಕೃತಿ ಚಿಂತನೆಯಾಗದೆ, ಅದೊಂದು ಸಾಮಾಜಿಕ, ಆರ್ಥಿಕ ಸ್ವಾವಲಂಬಿ ರಾಜಕೀಯ ಸಿದ್ಧಾಂತವೆಂಬುದನ್ನು ಕ್ಯಾಸ್ಟ್ರೋ ಅವರಿಂದ ಕಲಿಯಬೇಕಾಗಿದೆ. ಆಮೆರಿಕದ ವಿದೇಶಿ ಆರ್ಥಿಕ ಮೂಲಗಳನ್ನು ಧಿಕ್ಕರಿಸಿ, ಸ್ವದೇಶದಲ್ಲಿ ಸರ್ವವನ್ನೂ ಕಟ್ಟಿಕೊಂಡ ಕ್ಯಾಸ್ಟ್ರೋ ಕಷ್ಟದ ಸವಾಲಿನ ಹಾದಿಯಲ್ಲಿ ಜೊತೆಯಾದ ಜನತೆ ಒಂದು ಆದರ್ಶ ಮಾದರಿಯಾಗಿದ್ದಾರೆ. ನಮ್ಮ ದೇಶದ ಜನತೆ ಇನ್ನೇನಲ್ಲದಿದ್ದರೂ ಕ್ಯಾಸ್ಟ್ರೋ ಅವರ ಕ್ರಿಯಾತ್ಮಕ ಚಿಂತನೆಯಿಂದ ಭ್ರಮೆ ಮತ್ತು ವಾಸ್ತವಗಳ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.
©2024 Book Brahma Private Limited.