ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 284ನೇ ಕೃತಿ ’ಜಾರ್ಜ್ ಫೆರ್ನಾಂಡೀಸ್’. ಒಂದು ಪ್ರದೇಶದ ಬದುಕು ಸುಸಂಸ್ಕೃತವೆನಿಸಿಕೊಳ್ಳಬೇಕಾದರೆ ಅಲ್ಲಿನ ಪ್ರತಿಭಾವಂತ ಪ್ರಜೆಗಳು ವಿವಿಧ ಕ್ಷೇತ್ರಗಳಲ್ಲಿ ಸಮಾಜದ ಒಳಿತಿಗಾಗಿ ದುಡಿಯುವ ಅಗತ್ಯವಿದೆ, ಹೀಗೆ ನಾಡಿನ ಸಮಾಜಿಕ ಒಳಿತಿಗೆ ದುಡಿದ ಧೀಮಂತ ನಾಯಕ ಜಾರ್ಜ್ ಫೆರ್ನಾಂಡಿಸ್ಅವರ ಜೀವನ ಬರೆಹದ ಕುರಿತ ಕೃತಿ ಇದು. ಅವರ ಒಟ್ಟಾರೆ ಜೀವನದ ವಿಹಂಗಮ ನೋಟ ಇಲ್ಲಿ ಸಿಗಲಿದೆ. ’ಬಾಲ್ಯದ ನೆನಕೆಗಳು, ಓದು-ಬದುಕು, ರಾಜಕೀಯ ತಿರುವುಗಳು, ಸಾಂಸಾರಿಕ ಹೆಜ್ಜೆ, ಬರೆದ ಕೃತಿಗಳು, ಜೀವಪರ ನಿಲುವು’ಗಳನ್ನು ತಾವು ಕಂಡಂತಹ ಸತ್ಯಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ ಲೇಖಕ ಅಮ್ಮೆಂಬಳ ಆನಂದರು.
ಆರಾಧನಾ ಭಾವಕ್ಕೆ ಸೀಮಿತವಾದ ವ್ಯಕ್ತಿಚಿತ್ರ
ಭಾರತದ ರಾಜಕೀಯ ಸಂದರ್ಭದಲ್ಲಿ ಜಾರ್ಜ್ ಫರ್ನಾಂಡಿಸ್ ಹೆಸರು ಕೇಳಿದಾಕ್ಷಣ ರೋಮಾಂಚನಗೊಳ್ಳದೆ ಇರಲು ಸಾಧ್ಯವಿಲ್ಲ. ದೀರ್ಘ ರೈಲ್ವೇ ಮುಷ್ಕರದ ಸಂಘಟನೆಯ ಮೂಲಕ ದೇಶದ ಆಡಳಿತ ವ್ಯವಸ್ಥೆಯನ್ನೇ ಅಲುಗಾಡಿಸಿದ ಪರಿಣಮಕಾರಿ ಕಾರ್ಮಿಕ ನಾಯಕನಾಗಿ, ಸರ್ವಾಧಿಕಾರದ ತುರ್ತುಪರಿಸ್ಥಿತಿಯ ವಿರುದ್ಧ ಭೂಗತ ಹೋರಾಟ ನಡೆಸಿದ ಧೀಮಂತ ಜನನಾಯಕನಾಗಿ, ಕೊಂಕಣ ರೈಲ್ವೆಯ ರೂವಾರಿಯಾಗಿ, ಸಂಸತ್‌ಸದಸ್ಯನಾಗಿ ಮತ್ತು ಕೇಂದ್ರ ಸಚಿವನಾಗಿ ನಿಜ ಸಮಾಜವಾದಿ ಯಯತ್ವದ ರಾಕಾತಂವನ್ನು ಮೆರೆದ ಜಾರ್ಜ್ ರ ಕನ್ನಡದವರು
ಜನ ಎಂಬುದು ನಮಗೆ ಹೆಚ್ಚಿನ ಹೆಮ್ಮೆಯ ಸಂಗತಿಯಾಗಿದೆ. ಇಂತಹ ಬಹುಮುಖಿ ಆಯಾಮದ ವ್ಯಕ್ತಿತ್ವ ಕುರಿತು ಅವರ ಒಡನಾಡಿಯಾಗಿದ್ದ ಅಮ್ಮೆಂಬಳ ಆನಂದ ಅವರು ರಚಿಸಿರುವ ಈ ಕಿರುಕೃತಿ ಅವರ ಹುಟ್ಟು, ಬಾಲ್ಯ ವಿದ್ಯಾಭ್ಯಾಸದ ಕುರಿತ ವಿವರಗಳಿವೆ. ನಂತರ ಕುಟುಂಬದ ಒತ್ತಾಯದ ಮೇರೆಗೆ ಪಾದ್ರಿಯಾಗಲು ಹೊರಟು ನಂತರ ದ.ಕ.ದ ಈ ಯುವಕ ಆ ಜಾಯಮಾನಕ್ಕೆ ಒಗ್ಗದೆ ಅಲ್ಲಿಂದ ಜಾರ್ಜ್ ಹೊರಬಂದು ಸಮಾಜವಾದಿಗಳ ಆಶ್ರಯ ಪಡೆದು ನಂತರ ಮುಂಬೈಗೆ ತೆರಳಿ ಕಾರ್ಮಿಕ ನಾಯಕರಾಗಿ ಬೆಳೆದು ಮುಂದೆ ದೇಶದ ರಕ್ಷಣಾ ಸಚಿವರಾಗುವವರೆಗೂ ಬೆಳೆದ ಬಗೆಯನ್ನು ಕೃತಿ ಚುಟುಕಾಗಿ ವಿವರಿಸುತ್ತ ಹೋಗುತ್ತದೆ.
ಆಯಾ ಸಂದರ್ಭಗಳಲ್ಲಿ ಜಾರ್ಜ್ ಕುರಿತು ಪ್ರಕಟವಾದ ಪತ್ರಿಕಾ ವರದಿಗಳ ತುಣುಕು, ಜಾರ್ಜ್ ಪತ್ನಿ ಬರೆದ ಲೇಖನ, ಜಾರ್ಜ್ ಸಹೋದರ ಲಾರೆನ್ಸ್ ಫರ್ನಾಂಡಿಸ್ ತುರ್ತು ಪರಿಸ್ಥಿತಿಯಲ್ಲಿ ಅನುಭವಿಸಿದ ಹಿಂಸೆ ಇವೇ ಮೊದಲಾದ ಲೇಖನಗಳನ್ನೂ ಕೃತಿ ಒಳಗೊಂಡಿದೆ. ಆದರೆ ಈ ವ್ಯಕ್ತಿ ಚಿತ್ರ ನಿರೂಪಣೆಯಲ್ಲಿ ' ಲೇಖಕರಲ್ಲಿ ಅವರ ಬಗ್ಗೆ ಇರುವ ಆರಾಧನಾ ಭಾವ ಹೆಚ್ಚು ಪ್ರಭಾವಿಸಿರುವುದು ಎದ್ದು ಕಾಣುತ್ತದೆ. ಈ ಕಾರಣಕ್ಕೆ ಕೇವಲ ವಿವರಗಳಿಗೆ ಸೀಮಿತವಾಗಿ ಯಾವುದೇ ಸಂದರ್ಭದ ಕುರಿತ ವಿಶ್ಲೇಷಣೆ, ಸಂವಾದ ಹುಟ್ಟು ಹಾಕುವತ್ತ ಲೇಖಕರು ಆಸಕ್ತಿ ತೋರಿಸಿಲ್ಲ. ಉದಾ: ಜನತಾದಳ ತ್ಯಜಿಸಿ ಸಮತಾ ಪಕ್ಷ ಸ್ಥಾಪಿಸಿದ ನಂತರ ಜಾರ್ಜ್ ಎನ್ ಡಿಎ ಜೊತೆ ಕೈಜೋಡಿಸಿದ್ದು ಅವರ ರಾಜಕೀಯ ಜೀವನದ ಪ್ರಮುಖ ಸೈದ್ದಾಂತಿಕ ಪಲ್ಲಟ. ಇಲ್ಲಿ ಇದರ ಉಲ್ಲೇಖವಿದೆಯೇ ಹೊರತು ಚರ್ಚೆ ಇಲ್ಲ.
ಸರಿಯಾದ ಅನುಕ್ರಮಣಿಕೆ ಇಲ್ಲದ ಕಾರಣ ವಿವರಗಳು ಅಲ್ಲಲ್ಲಿ ಪುನರಾವರ್ತನೆಗೊಂಡಿವೆ. ಕೆಲವು ಲೇಖನಗಳನ್ನು ಇಂಗ್ಲೀಷ್ ಹಾಗೂ ಕನ್ನಡ ಎರಡರಲ್ಲೂ ಪ್ರಕಟಿಸಿರುವ ಔಚಿತ್ಯ ಗೊತ್ತಾಗದು. ಭಾಷೆ ಸರಳವಾಗಿದೆಯಾದರೂ ಹಲವೆಡೆ ಪತ್ರಿಕಾ ವರದಿಗಳ ಸ್ವರೂಪ ಪಡೆದಿರುವುದರಿಂದ ನಿರೂಪಣೆ ಗಾಢವಾಗಿ ತಟ್ಟುವುದಿಲ್ಲ. ಅದೇನೇ ಇದ್ದರೂ, ಜಾರ್ಜ್ ಎಂದರೆ ಯಾರು ಎಂದು ಕೇಳುವ ಹೊಸ ತಲೆಮಾರಿನವರಿಗಾದರೂ ಈ ಕೃತಿ ಉಪಯುಕ್ತವಾಗುವಂತಿದೆ.
-ಎಂ.ರಾಘವೇಂದ್ರ
ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಜನವರಿ 2020)
©2024 Book Brahma Private Limited.