ಪಂಡಿತ್ ನರಸಿಂಹಲು ವಡವಾಟಿ ಅವರು ಕ್ಲಾರಿಯೋನೇಟ್ ವಾದ್ಯವನ್ನು ನುಡಿಸುವ ಮೂಲಕ ಭಾರತದ ಉದ್ದಗಲಕ್ಕೂ ಚಿರಪರಿಚಿತರಾದವರು. ಅಮೆರಿಕಾದ ಅಂತರರಾಷ್ಟ್ರೀಯ ಕ್ಲಾರಿಯೋನೆಟ್ ಸಂಸ್ಥೆ ಇವರನ್ನು ಭಾರತದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿದೆ. ಲಾಸ್ ಏಂಜಲಿಸ್‌ನಲ್ಲಿ ನಡೆದ 'ಇಂಟರ್ ನ್ಯಾಷನಲ್ ಕ್ಲಾರಿಯೋನೆಟ್ ಫೆಸ್ಟ್-2011'ರ ವಿಶ್ವ ಕ್ಲಾರಿಯೋನೆಟ್ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಇವರದು. ಇವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯವು ಡಿ.ಲಿಟ್. ಪದವಿ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ವಡವಾಟಿಯವರು ಅತ್ಯುತ್ತಮ ಕೆಲಸವನ್ನು ನಿರ್ವಹಿಸುವುದರ ಮೂಲಕ ಸರ್ಕಾರದ ಅಭಿನಂದನೆಗೂ ಪಾತ್ರರಾಗಿದ್ದಾರೆ.ಇಂತಹ ಕಲಾ ಸಾಧಕರ ಧೀಮಂತ ವ್ಯಕ್ತಿತ್ವದ ಸಮಗ್ರ ಅಧ್ಯಯನವನ್ನು ಕೆ.ಯೋಗ ರವೀಶ್ ಭಾರತ್ ಸಂಪಾದಿಸಿದ್ದಾರೆ.