ಯೋಗಿ ವೇಮನ ಕನ್ನಡದ ಸರ್ವಜ್ಞನಂತೆ, ತಮಿಳಿನ ತಿರುವಳ್ಳುವರ್‌ನಂತೆ ತೆಲುಗಿನಲ್ಲಿ ಯೋಗಿ ವೇಮನ. ವೀರಬ್ರಹ್ಮಯ್ಯ, ಕೈವಾರ ನಾರಾಯಣಪ್ಪ, ಶಿಶುನಾಳ ಷರೀಫ ಮುಂತಾದ ದಾರ್ಶನಿಕ ಸಂತರಂತೆ ವೇಮನನೂ ದಾರ್ಶನಿಕ ಸಂತ ಮತ್ತು ಜನಪರ ಕವಿ. ವೇಮನ, ಸಮಾಜ ಜೀವನದ ಉತ್ಕಟ ರಾಗ ರಸಗಳನ್ನು, ನೋವು, ನಿಟ್ಟುಸಿರುಗಳನ್ನು ಅನುಭವಿಸಿ ಅವಧೂತನಾದವನು. ಆಂಧ್ರಪ್ರದೇಶದ ಕೊಂಡವೀಡು ಪ್ರಾಂತ್ಯವನ್ನು ಆಳಿದ ರೆಡ್ಡಿ ಜನಾಂಗದ ಮೂಲಪುರುಷ ದೊಂತುಅಲಿಯರೆಡ್ಡಿ. ಇವನಿಗೆ ಮೂರು ಮಂದಿ ಗಂಡುಮಕ್ಕಳು. ಅವರಲ್ಲಿ ಮೊದಲನೆಯವನು ಪುಲ್ಲಯವೇಮಾರೆಡ್ಡಿ, ಎರಡನೆಯವನು ಅನುಪೋತವೇಮಾರೆಡ್ಡಿ, ಮೂರನೆಯವನು ಅನುವೇಮಾರೆಡ್ಡಿ. ಕಾಲಾಂತರದಲ್ಲಿ ಈ ಅನುವೇಮಾರಡ್ಡಿಗೆ ಒಬ್ಬ ಮಗನಾದ. ಅವನೇ ಕೊಮರಗಿರಿವೇಮಾರೆಡ್ಡಿ ಎಂದು. ಈ ಕೊಮರುಗಿರಿವೇಮಾರೆಡ್ಡಿಗೂ ಅಲಿಯರೆಡ್ಡಿಗಾದಂತೆ ಮೂರು ಜನ ಗಂಡು ಮಕ್ಕಳಾದರು. ಅವರಲ್ಲಿ ಮೊದಲನೆಯವನು ಕೋಮಟಿವೆಂಕಾರೆಡ್ಡಿ, ಎರಡನೆಯವನು ರಾಚವೇಮಾರೆಡ್ಡಿ, ಮೂರನೆಯವನು ವೇಮಾರೆಡ್ಡಿ. ಈ ವೇಮಾರೆಡ್ಡಿಯೇ ಈ ಕೃತಿಯ ಕಥಾನಾಯಕ ವೇಮನ. ದುರದೃಷ್ಟವಂತನಾದ ವೇಮನ ಚಿಕ್ಕಂದಿನಲ್ಲಿಯೇ ತಂದೆ ತಾಯಿಯರನ್ನು ಕಳೆದುಕೊಂಡ. ಏನೂ ಅರಿಯದ ಆ ಎಳೆಯ ವಯಸ್ಸಿನಲ್ಲಿ ಅವನಿಗೆ ಆಶ್ರಯವಾಗಿದ್ದು ಅವನ ಹಿರಿಯ ಅತ್ತಿಗೆ ನರಸಾಂಬೆ. ಅವಳು ವೇಮನನನ್ನು ತನ್ನ ಸ್ವಂತ ಮಗನಂತೆಯೇ ಸಾಕಿ ಸಲುಹಿ ತಾಯಿಯಿಲ್ಲದ ಕೊರಗನ್ನು ನೀಗಿಸಿದಳು (ಕೃತಿಯ ಭಾಗ)
©2024 Book Brahma Private Limited.