ಅಭಿನವ ಮೆಕೆಂಜಿ ಎಚ್.ಎಲ್. ನಾಗೇಗೌಡ ಎಂಬುದು ಲೇಖಕಿ ಹೆಚ್. ಆರ್. ಚೇತನಾ ಅವರು ರಚಿಸಿದ ಜೀವನ ಚರಿತ್ರೆಯ ಕೃತಿ. ಒಕ್ಕಲಿಗ ಸಾಧಕರ ಸರಣಿ ಪುಸ್ತಕ ಇದು. ಕೃತಿಯ ಬೆನ್ನುಡಿಯಲ್ಲಿ ಎಚ್.ಎಲ್. ನಾಗೇಗೌಡರನ್ನು ಮರೆತು ಕರ್ನಾಟಕದಲ್ಲಿ ಜಾನಪದ ಕ್ಷೇತ್ರವನ್ನು ಕಲ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ನಾಗೇಗೌಡರ ಉಸಿರು, ಕನಸು, ಕರ್ಮಕ್ಷೇತ್ರ' ಎಲ್ಲವೂ ಜಾನಪದವಾಗಿತ್ತು. ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿಯ ದೊಡ್ಡಮನೆಯ ದೊಡ್ಡಮಗ ತನ್ನ ತಂದೆಯ ಆಸೆಯಂತೆ ಸರ್ಕಾರದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದರು. ಜನಪದ ಸಾಹಿತ್ಯ, ಕಲೆ, ಕಲಾವಿದರನ್ನು ಕುರಿತು ಅವರಿಗೆ ಅಪಾರ ಪ್ರೀತಿ ಇತ್ತು. ಅವರ ಗಡುಸು ಮುಖ, ಗಡುಸು ಧ್ವನಿಗೆ ಎಂಥವರೂ ಅವರ ಮುಂದೆ ಅಧೀರರಾಗಬೇಕು. ಅವರ ಹೊರನೋಟ ಹಾಗಿತ್ತು. ಆದರೆ, ಅವರು 'ವ್ಯಾಘ್ರಮುಖದ ಗೋವು', ಮೃದು ಹೃದಯ ವಿಧಾನ ಪರಿಷತ್ತಿನ ಸದಸ್ಯ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ, ಕರ್ನಾಟಕ ಜಾನಪದ ಪರಿಷತ್ತಿನ ಸಂಸ್ಥಾಪಕ ಹೀಗೆ ಹಲವು ಜವಾಬ್ದಾರಿಗಳನ್ನು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿದರು. ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೃತಿಗಳನ್ನು ನೀಡಿರುವ ನಾಗೇಗೌಡರು ಕನ್ನಡದ ಮೇರು ಸಾಧಕರಲ್ಲಿ ಒಬ್ಬರು. ಅವರ ಸುದೀರ್ಘ ಬಾಳ ಕತೆಯನ್ನು ಲೇಖಕಿಯು ಈ ಕೃತಿಯಲ್ಲಿ ಸಮರ್ಥವಾಗಿ ಚಿತ್ರಿಸಿದ್ದಾರೆ.
©2024 Book Brahma Private Limited.