ಗಟ್ಟಿದನಿಯ ದಿಟ್ಟ ಕಲಾವಿದೆ ಬೆಂಗಳೂರು ನಾಗರತ್ನಮ್ಮ ಡಾ.ಎನ್.ಜಗದೀಶ್ ಕೊಪ್ಪ ಅವರ ಕೃತಿ. ಸಂಗೀತಲೋಕದ ಸಾಧನೆಯ ಸ್ತೋತ್ರಗಾಯನದಲ್ಲಿ ಕೂಡಾ ಮೊದಲು ಕೇಳುವುದು ಬರೀ ಪುರುಷರ ಕಂಠ. ಸಾಮಾಜಿಕ ಅಡೆತಡೆಗಳನ್ನು ಎದುರಿಸಿ ಸಾಧನೆಯ ಹಾದಿಯಲ್ಲಿ ಹೆಜ್ಜೆಯಿಡುವುದೇ ಹೆಣ್ಣಿನ ಪಾಲಿಗೆ ಒಂದು ಅಗ್ನಿದಿವ್ಯ. ಬೆಂಗಳೂರಿನ ನಾಗರತ್ನಮ್ಮ ಈ ಸವಾಲನ್ನು ಅದ್ಭುತವಾಗಿ ನಿರ್ವಹಿಸಿದ ದಿಟ್ಟಮನದ ಹೋರಾಟಗಾರ್ತಿ. ಘನವಿದ್ವಾಂಸರ ನಡುವೆ ತನ್ನದಲ್ಲದ ನೆಲದಲ್ಲಿ ಪ್ರತಿಭೆ, ಪರಿಶ್ರಮಗಳಿಂದ ಅವರು ಉನ್ನತ ಸ್ಥಾನಮಾನ ಗಳಿಸಿದರು. ತಮಿಳುನಾಡಿನಲ್ಲಿ ಸಂಗೀತದ ಕಛೇರಿಗಳಲ್ಲಿ ಕನ್ನಡದ ಹಾಡುಗಳಿಗೆ ಪ್ರಾಶಸ್ತ್ಯ ನೀಡಿದರು.
ತಿರುವಯ್ಯಾರಿನಲ್ಲಿ ನಾದಬ್ರಹ್ಮ ತ್ಯಾಗರಾಜರ ಆರಾಧನೆಗೆ ಒಂದು ಸರಿಯಾದ ವ್ಯವಸ್ಥೆ ಕಲ್ಪಿಸಿದರು. ಮಹಿಳೆ ಬರೆದ ಶೃಂಗಾರ ಕಾವ್ಯದ ಪ್ರಕಟಣೆ ಮಾಡಿ ಪುರುಷ ಪ್ರತಿರೋಧವನ್ನು ಎದುರಿಸಿದರು. ಬೆಂಗಳೂರಿನ ನಾಗರತ್ನಮ್ಮ ಹೋರಾಟಗಳ ಮೂಲಕವೇ ಮಾಡಿರುವ ಅನಾದೃಶ್ಯ ಸಾಧನೆ, ಭಾರತೀಯ ಮಹಿಳಾ ಚರಿತ್ರೆಯಲ್ಲಿ ಒಂದು ಉಜ್ವಲ ಅಧ್ಯಾಯ. ಜಗದೀಶ್ ಕೊಪ್ಪ ತಮ್ಮ ಸಂಗೀತ ಪ್ರೀತಿ ಮತ್ತು ಸಂಶೋಧನೆಯ ದೃಷ್ಟಿಕೋನದ ನೆಲೆಯಲ್ಲಿ ಬೆಂಗಳೂರಿನ ನಾಗರತ್ನಮ್ಮ ಅವರ ಅಸಾಮಾನ್ಯ ಕಥನವನ್ನು ಇಲ್ಲಿ ಹೃದ್ಯವಾಗಿ ನಿರೂಪಿಸಿದ್ದಾರೆ. ದೇವದಾಸಿ ಮನೆತನದಲ್ಲಿ ಹುಟ್ಟಿದ ಈ ಹೆಣ್ಣುಮಗಳ ಹೋರಾಟದ ಕಥೆ ಹಲವು ಕಾರಣಗಳಿಂದ ಸಾಂಸ್ಕೃತಿಕ ವಿಸ್ಮೃತಿಗೆ ಸರಿದಿದೆ. ಅದನ್ನು ಮತ್ತೆ ಸಮಕಾಲೀನ ಸಂಕಥನಕ್ಕೆ ಸೇರಿಸಬೇಕೆಂಬುದು ಈ ಪುಸ್ತಕದ ರಚನೆ ಮತ್ತು ಪ್ರಕಟಣೆಯ ಹಿಂದಿರುವ ಸದಾಶಯ. ಇದೊಂದು ಜರೂರಾಗಿ ನಿರ್ವಹಿಸಲೇಬೇಕಾಗಿದ್ದ ಸಾಂಸ್ಕೃತಿಕ ಕರ್ತವ್ಯ ಎನ್ನುತ್ತಾರೆ ಲೇಖಕ ಜಗದೀಶ್ ಕೊಪ್ಪ.
©2024 Book Brahma Private Limited.