ಶ್ರೀನಿವಾಸ ಹಾವನೂರ ಅವರು ಸಂಪಾದಿಸಿರುವ ಕೃತಿ ‘ಶ್ರೇಷ್ಠ ಪುಸ್ತಕೋದ್ಯಮಿ: ಮ. ಗೋವಿಂದರಾವ್’ ಸಾಹಿತ್ಯ ಭಂಡಾರ ಪ್ರಕಾಶನದಿಂದ ಪ್ರಕಟವಾಗಿದೆ. ಕೃತಿಯ ಕುರಿತು ಬರೆದಿರುವ ಶ್ರೀನಿವಾಸ ಹಾವನೂರರು ಮಂ. ಗೋವಿಂದರಾಯರು ತೀರಿ ಹೋಗಿ ಕೆಲವು ತಿಂಗಳಾದ ಮೇಲೆ ಅವರ ಬಗ್ಗೆ ಅಥವಾ ಅವರ ನೆನಪು ಉಳಿಯುವಂತೆ ಯಾರಾದರೂ ಸ್ಮರಣ ಗ್ರಂಥವನ್ನು ತರುವವರಿದ್ದಾರೆಯೇ ಎಂದು ಅವರ ಮಗ ರಾಜಾನನ್ನು ವಿಚಾರಿಸಿದೆ. ಹಾಗೇ ಇದುವರೆಗೆ ಯೋಚಿಸಿದುದಿಲ್ಲ. ನೀವೇ ಯಾಕೆ ಆ ಕೆಲಸ ಮಾಡಬಾರದು. ಎಂದು ಕೇಳಿದರು. ಅವರ ಬಗೆಗಿನ ನನ್ನ ಅದರ ಭಾವವನ್ನು ವ್ಯಕ್ತಪಡಿಸಲು ಇದೊಂದು ಅವಕಾಶ ಎಂದು ಬಗೆದು, ಮರುಮಾತಿಲ್ಲದೆ ಒಪ್ಪಿಕೊಂಡೆ. ಅವರ ಸಂಪರ್ಕ ಬಂದವರಿಗೆ ಹಾಗೂ ಅವರ ಸಂಬಂಧಕರಿಗೆ ಪತ್ರ ಬರೆದದ್ದಾಯಿತು. ಯಾರೊಬ್ಬರೂ ನಿಷ್ಕ್ರಿಯರಾಗಿ ಉಳಿಯದೇ ಬರೆದು ಕಳಿಸಿದರು. ಇನ್ನೂ ಕೆಲವರು ಇವರನ್ನು ಕುರಿತು ಈಗಾಗಲೇ ತಾವು ಬರೆದದ್ದನ್ನು ಅವಶ್ಯವಾಗಿ, ಹೇಗೆ ಬೇಕೋ ಹಾಗೇ ಉಪಯೋಗಿಸಿಕೊಳ್ಳಿರಿ ಎಂದು ತಿಳಿಸಿದರು. ಗೋವಿಂದರಾಯರ ಬದುಕು ಹಾಗೂ ಉದ್ಯಮ ಏಕಮುಖವಾದದ್ದು, ಅದರಲ್ಲಿ ಅವರು ತೋರಿದ ಪ್ರಾಮಾಣಿಕತೆ, ಸತ್ಯ ನಿಷ್ಠುರತೆ ಇವು ಸಾಮಾನ್ಯವಾಗಿ ಎಲ್ಲರ ಬರಹಗಳಲ್ಲಿ ಬರಬೇಕಾದದ್ದು ಸಹಜವೇ, ಆದ್ದರಿಂದ ಪುನರುಕ್ತಿಗಳನ್ನು ತೊರೆದು, ವಾಚನೀಯತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ, ಅಲ್ಲಲ್ಲಿ ಕೆಲವು ಭಾಗಗಳನ್ನು ಕೈಬಿಡುವುದು ಅನಿವಾರ್ಯವಾಯಿತು. ಅದಕ್ಕಾಗಿ ಆ ಆ ಲೇಖಕರ ಕ್ಷಮೆ ಕೇಳುವೆ ಎಂದಿದ್ದಾರೆ. ಹಾಗೇ ಕೈಬಿಟ್ಟಿದ್ದರಿಂದ, ಗೋವಿಂದರಾಯರ ಬಗ್ಗೆ ಅವರು ಗಳಿಸಿದ್ದ ಸದ್ಭಾವಕ್ಕೆ ಯಾವುದೇ ರೀತಿಯಲ್ಲಿ ಚ್ಯುತಿಯಾಗದು. ಗೋವಿಂದರಾಯರ ಕಾರ್ಯದ ಮಹತ್ವ, ವಿಶೇಷತೆಗಳು ಸ್ಪಷ್ಟವಾಗಬೇಕಾದರೆ ಪುಸ್ತಕೋದ್ಯಮ ಬೆಳೆದು ಬಂದ ಬಗೆಯನ್ನು ಕೊಡುವುದು ಅವಶ್ಯವೆನಿಸಿತು. ಅದನ್ನು ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕೃತಿಯಲ್ಲಿ ಮ. ಗೋವಿಂದರಾವ್ ಅವರ ನನ್ನ ಆರಂಭ ಜೀವನ, ಒಡನಾಡಿ-ಬಂಧುಗಳು ಕಂಡಂತೆ, ಆತ್ಮೀಯ ನೆನಹುಗಳು, ಬಂಧುಗಳು-ಆತ್ಮೀಯರು ಕಂಡಂತೆ, ಇದು ನನ್ನ ಕಥೆ- ಸಾಹಿತ್ಯ ಭಂಡಾರ, ಶ್ರೀನಿವಾಸ ಹಾವನೂರರ ಪುಸ್ತಕ ವ್ಯವಸಾಯವು ಸಾಗಿಬಂದ ದಾರಿ ಲೇಖನಗಳು ಸಂಕಲನಗೊಂಡಿವೆ.
©2024 Book Brahma Private Limited.