ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕರಾದ ಪ್ರೊ.ಎಂ.ಡಿ. ನಂಜುಂಡಸ್ವಾಮಿ ತಮ್ಮ ಪ್ರಖರ ವಿಚಾರ ಲಹರಿ, ಖಚಿತ ಅಂಕಿ ಅಂಶಗಳ ಭಾಷಣ, ಅದ್ಭುತ ಕನ್ನಡ ಭಾಷಾಬಳಕೆ, ಭಾರತದ ಜಾತಿ ವ್ಯವಸ್ಥೆ ಮತ್ತು ನ್ಯಾಯಾಂಗದ ಬಗೆಗೆ ಗಳಿಸಿದ್ದ ಪಾಂಡಿತ್ಯ, ಆಧುನಿಕ ಜೀವನ ಶೈಲಿಯ ಜೊತೆಗೆ ಲೋಹಿಯಾ ಹಾಗೂ ಗಾಂಧೀವಾದದ ಅಳವಡಿಕೆ ಮುಂತಾದುವುಗಳಿಂದ ಯುವಕ ಯುವತಿಯರನ್ನು ಸಮಾಜವಾದಿ ಆಂದೋಲನಕ್ಕೆ ಸೆಳೆಯುತ್ತಿದ್ದರು. ಸಮಾಜವಾದಿ ಯುವಜನ ಸಭಾದ ಪ್ರಾರಂಭ, ವಿದ್ಯಾರ್ಥಿ, ಕಾರ್ಮಿಕರ ಚಳವಳಿಗಳು, ಜಾತಿವಿನಾಶ ಸಮ್ಮೇಳನ, ಬರಹಗಾರರ ಕಲಾವಿದರ ಒಕ್ಕೂಟ, ಪೆರಿಯಾರ್, ದಲಿತ-ಬಂಡಾಯ ಚಳವಳಿ, ವಿಚಾರವಾದಿ ಕೊವೂರ್ ಆಗಮನ, ತುರ್ತು ಪರಿಸ್ಥಿತಿ, ಕೇಂದ್ರದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ , ಆನಂತರ ಪ್ರಬಲವಾಗಿ ಬೆಳೆದ ರೈತ ಚಳವಳಿ ಇತ್ಯಾದಿ ನೂರಾರು ಚಳವಳಿಗಳ ಜೊತೆಗೆ ಜಯಪ್ರಕಾಶ ನಾರಾಯಣ ಅವರ ಸಂಪೂರ್ಣಕ್ರಾಂತಿ ದೇಶದಾದ್ಯಂತ ಹಬ್ಬಿತು. ಕರ್ನಾಟಕದಲ್ಲಿ ನಾಟಕ ಕ್ಷೇತ್ರದ ‘ಸಮುದಾಯ’, ಹಾವನೂರು ಆಯೋಗ, ಭಾಷಾ ಚಳವಳಿ ಇವೆಲ್ಲವುಗಳ ಪರಿಣಾಮವಾಗಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ರಚನೆ- ಹೀಗೆ ಎಪ್ಪತ್ತರ ದಶಕ ಸಂಕ್ರಮಣ ಕಾಲವಾಗಿತ್ತು. ಇವೆಲ್ಲ ಚಳವಳಿಗಳ ಹಿಂದೆ ಒಂದಲ್ಲ ಒಂದು ರೀತಿಯಲ್ಲಿ ಪ್ರಚೋದಕ ಶಕ್ತಿಯಾಗಿದ್ದವರು. ಕರ್ನಾಟಕದ ಸಮಾಜವಾದಿ ಚಳವಳಿಯ ರೂವಾರಿ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರ ವ್ಯಕ್ತಿ ಚಿತ್ರ ಕುರಿತಾದದ್ದೇ ಈ ಪುಸ್ತಕ.
ವೀರಭದ್ರಪ್ಪ ಬಿಸ್ಲಳ್ಳಿ ಅವರು ಓದುವಾಗಲೇ ವಾರಪತ್ರಿಕೆಯಲ್ಲಿ ಅರೆಕಾಲಿಕ ವರದಿಗಾದರನಾಗಿ ಪತ್ರಿಕೋದ್ಯಮ ವೃತ್ತಿ ಆರಂಭಿಸಿದವರು. ನಂತರ ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಪೂರ್ಣಾವಧಿ ವರದಿಗಾರನಾಗಿ ವೃತ್ತಿ ಜೀವನ ಆರಂಭಿಸಿದರು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕ,ಹಿರಿಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿ, ರಾಜ್ಯಧರ್ಮ ಕನ್ನಡ ದಿನಪತ್ರಿಕೆಯ ಬೆಂಗಳೂರು, ಮೈಸೂರು ಆವೃತ್ತಿಗಳ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ...
READ MORE