‘ಸಂಗೀತಯಾನ’ ಸಂಗೀತ ಕ್ಯಾಸೆಟ್ ಸಂಸ್ಥೆಯ ಎಚ್.ಎಂ. ಮಹೇಶ್ ಅವರ ಜೀವನಗಾಥೆ. ಈ ಕೃತಿಯನ್ನು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಜಯಶ್ರೀ ಅರವಿಂದ್ ರಚಿಸಿದ್ದಾರೆ. ಎಲ್ಲಾ ಮಹಾನ್ ಸಂಗೀತಗಾರರ ದನಿಯೆಲ್ಲ ಮಹೇಶ್ ಅವರ 'ಸಂಗೀತ'ದಲ್ಲಿ ಸುಪ್ತವಾಗಿ, ಬೆಚ್ಚಗೆ ಅವಿತುಕೊಂಡಿವೆ. ಅಕ್ಷರಗಳಂತೆ ದನಿಯೂ ಶಾಶ್ವತ, ಚಿರಂತನ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಸಂಗೀತಗಾರರಂತೆ ಮಹೇಶ್ ಅವರದು ಸಹ ಅಗಾಧ ಸಾಧನೆಯೇ, ಸಂಗೀತ ಕ್ಷೇತ್ರಕ್ಕೆ ಅವರ ಯೋಗದಾನ ಅಪಾರ ಹಾಗೂ ಅಪೂರ್ವ ಸಂಗೀತ ಲೋಕದ ದಿಗ್ಗಜರ ಕಂಠಸಿರಿಯನ್ನು ದೇಶದ ಉದ್ದಗಲಕ್ಕೂ ತಲುಪಿಸಿದ ಹೆಗ್ಗಳಿಕೆ ಅವರದು, ಹೊಸ ಹೊಸ ಗಾಯಕರನ್ನು ಪರಿಚಯಿಸಿ, ಅವರಿಂದ ಹಾಡಿಸಿ ಸಾಹಿತ್ಯ-ಸಂಗೀತಲೋಕವನ್ನು ಶ್ರೀಮಂತಗೊಳಿಸಿದವರು. ನಾಲೈದು ದಶಕಗಳ ಕಾಲ ಚೆನ್ನೈಯಲ್ಲಿ ನೆಲೆಸಿದ್ದರೂ ಕನ್ನಡದ ಸೇವೆ ಮಾಡಿದ ಅಪರೂಪದ ವ್ಯಕ್ತಿ, ಮೃದು ಸ್ವಭಾವ, ಆಪ್ತತೆ, ನಿಷ್ಕಲ್ಮಶ ನಗು, ಸರಳ ಸಜ್ಜನಿಕೆ ಮೂರ್ತಿವೆತ್ತ ವ್ಯಕ್ತಿತ್ವ. ಇದು ಕನ್ನಡದ ಅಪೂರ್ವ ಸಾಧಕ ಹಾಗೂ ಅಪರೂಪ ಜೀವಿಯ ಜೀವನಕತೆ. ನಾನು ಅವರ ಸ್ನೇಹ, ಒಡನಾಟದ ಫಲಾನುಭವಿ. ಅವರ ಬದುಕು ನನಗೆ ಪ್ರೇರಣಾದಾಯಕ, ಅಂಥ ಅನುಭವ ನಿಮ್ಮದೂ ಆಗಲಿ. ಇಲ್ಲಿ ನಿಮಗೆ ಒಬ್ಬ ವ್ಯಕ್ತಿಯಷ್ಟೇ ಅಲ್ಲ, ಒಂದು ಸಂಸ್ಕೃತಿಗೆ ಭಿನ್ನ ಆಯಾಮಕೊಟ್ಟ ಅನೇಕ ಒಳಸುಳಿಗಳ ಪರಿಚಯವಾಗುತ್ತದೆ.
©2024 Book Brahma Private Limited.