ದಕ್ಷಿಣ ಅಮೆರಿಕ ಕಂಡ ಅಸೀಮ ಹೋರಾಟಗಾರ ಅರ್ನೆಸ್ಟೊ ಚೆಗವಾರ. ತನ್ನ ದೇಶದಿಂದ ಮತ್ತೊಂದು ದೇಶಕ್ಕೆ ಹೋಗಿ ಅಲ್ಲಿ ಕ್ರಾಂತಿಯ ಕಹಳೆ ಮೊಳಗಿಸುವ ಆತ ಈಗಲೂ ಯುವಜನರ ಪಾಲಿನ ಕಣ್ಮಣಿ. ಚೆ ಹೋರಾಟದ ಫಲವಾಗಿಯೇ ಕ್ಯೂಬಾ ದುರಾಡಳಿತದಿಂದ ಹೊರಬಂದು ಫೀಡಲ್ ಕ್ಯಾಸ್ಟ್ರೋ ಅವರನ್ನು ತನ್ನ ನಾಯಕನನ್ನಾಗಿ ಸ್ವೀಕರಿಸಿತು.
ಚೆಗವಾರ ಕುರಿತಂತೆ ಸಾಕಷ್ಟು ಪುಸ್ತಕಗಳು ಬಂದಿವೆ. ಸಿನಿಮಾಗಳನ್ನೂ ರೂಪಿಸಲಾಗಿದೆ. ಆದರೆ ಚೆಗವಾರನ ಗೆಳೆಯನಂತೆಯೇ ಇದ್ದ ಕ್ಯಾಸ್ಟ್ರೋ ಆ ಮಹಾನ್ ಕ್ರಾಂತಿಕಾರಿಯನ್ನು ಬಣ್ಣಿಸಿರುವ ಕಾರಣಕ್ಕೆ ಡೇವಿಡ್ ಡಚ್‌ಮನ್ ಸಂಪಾದಿಸಿರುವ ಈ ಕೃತಿಗೆ ಎಲ್ಲಕ್ಕಿಂತಲೂ ಹೆಚ್ಚಿನ ತೂಕ ಇದೆ ಎನ್ನಿಸುತ್ತದೆ. ಚೆ ಬದುಕು ಕನ್ನಡ ನೆಲದಲ್ಲೂ ಹಬ್ಬಲಿ ಎಂಬ ಉದ್ದೇಶದಿಂದ ನಾ. ದಿವಾಕರ ಕೃತಿಯನ್ನು ಅನುವಾದಿಸಿದ್ದಾರೆ.
ನನ್ನ ಗತಜೀವನವನ್ನು ನೆನಪಿಸಿಕೊಳ್ಳುವಾಗ, ಕ್ರಾಂತಿಯ ಉದ್ದೇಶಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾನು ಸಾಕಷ್ಟು ಶ್ರದ್ಧೆ, ಪ್ರಾಮಾಣಿಕತೆ ಮತ್ತು ಅರ್ಪಣಾ ಮನೋಭಾವದಿಂದ ನನ್ನ ಕಾರ್ಯ ನಿರ್ವಹಿಸಿರುವುದನ್ನು ಪ್ರಮಾಣೀಕರಿಸುತ್ತೇನೆ. ನನ್ನ ಒಂದೇ ಒಂದು ವೈಫಲ್ಯವೆಂದರೆ ಸಿಯೆರಾ ಮೇಸ್ಟಾದಲ್ಲಿದ್ದಾಗ ಪ್ರಾರಂಭಿಕ ಹಂತದಿಂದಲೇ ನಾನು ನಿಮ್ಮ ಸಂಪೂರ್ಣ ವಿಶ್ವಾಸ ಗಳಿಸಲಾಗದಿದ್ದುದು, ಮತ್ತು ನಿಮ್ಮೊಳಗಿನ ಓರ್ವ ಕ್ರಾಂತಿಕಾರಿಯ, ನಾಯಕತ್ವದ ಗುಣ ಲಕ್ಷಣಗಳನ್ನು ಶೀಘ್ರವಾಗಿ ಅರಿಯದೆ ಹೋದದ್ದು. ನಾನು ಉಜ್ವಲವಾದ ದಿನಗಳನ್ನು ಕಳೆದಿದ್ದೇನೆ. ನಿಮ್ಮ ಸಾಂಗತ್ಯದಲ್ಲಿದ್ದ ಸಂದರ್ಭದಲ್ಲಿ ಸಂಭವಿಸಿದ ಕ್ಯಾರಿಬಿಯನ್ ಕ್ಷಿಪಣಿ ಬಿಕ್ಕಟ್ಟಿನ ಸನ್ನಿವೇಶದಲ್ಲಿ ನನ್ನ ದೇಶದ ಜನರೊಡನೆ ಬೆರೆತಿದ್ದ ಹೆಮ್ಮೆ ನನಗಿದೆ. ಆ ದಿನಗಳಲ್ಲಿ ನಿಮ್ಮನ್ನು ಮೀರಿದ ಒಬ್ಬ ರಾಜತಂತ್ರಜ್ಞನನ್ನು ಕಾಣುವುದು ಅಸಾಧ್ಯವೇ ಆಗಿತ್ತು. ನಾನು ಯಾವುದೇ ಅನಿಶ್ಚಿತತೆ ಇಲ್ಲದೆ ನಿಮ್ಮನ್ನು ಹಿಂಬಾಲಿಸಿದ್ದನ್ನು, ನಿಮ್ಮ ಆಲೋಚನಾ ಲಹರಿಯೊಂದಿಗೆ ಗುರುತಿಸಿಕೊಂಡಿದ್ದನ್ನು, ಅಪಾಯಗಳನ್ನು, ತತ್ವಗಳನ್ನು ನಿಮ್ಮಂತೆಯೇ ಗ್ರಹಿಸಿದ್ದುದನ್ನು ಹೆಮ್ಮೆಯಿಂದ ನೆನೆಯುತ್ತೇನೆ. ನನ್ನ ಪ್ರಾಮಾಣಿಕ ಪ್ರಯತ್ನಗಳು ಅನ್ಯ ದೇಶಗಳಲ್ಲಿ ಅವಶ್ಯವಾಗಿ ಬೇಕಾಗಿದೆ. ಕ್ಯೂಬಾ ದೇಶಕ್ಕೆ ನಾಯಕತ್ವ ನೀಡುವ ಜವಾಬ್ದಾರಿ ನಿಮ್ಮ ಮೇಲಿರುವುದರಿಂದ ಈ ಹೊಣೆಗಾರಿಕೆಯನ್ನು ನೀವು ಹೊರಲಾರಿರಿ, ಆದರೆ ನಾನು ಆ ಕೆಲಸ ಮಾಡಬಲ್ಲೆ. ಹಾಗಾಗಿ ನಾವಿಬ್ಬರೂ ಪರಸ್ಪರ ದೂರವಾಗುವ ಕಾಲ ಸನ್ನಿಹಿತವಾಗಿದೆ.
ಎರಡೂ ವರ್ಗಗಳ ನಡುವಿನ ಸುದೀರ್ಘ ಸಂಘರ್ಷವೇ ಮನುಕುಲದ ಇತಿಹಾಸದ ಸೂಕ್ಷ್ಮತೆಗಳನ್ನು ಹೊರಗೆಡಹುತ್ತದೆ. ಯಾವುದೇ ಕಾಲಘಟ್ಟದಲ್ಲೂ ಮಾನವ ಸಮಾಜದಲ್ಲಿ ವ್ಯಕ್ತವಾಗುವ ಈ ಸಂಘರ್ಷದ ಮೂಲಕವೇ ಮನುಕುಲ ತನ್ನ ಉಳಿವಿಗೆ ಹೊಸ ಆಯಾಮಗಳನ್ನೂ ಕಂಡುಕೊಳ್ಳುತ್ತಾ ಬಂದಿದೆ. ಹಾಗಾಗಿಯೇ ಇತಿಹಾಸದ ಪ್ರತಿಯೊಂದು ಕಾಲಘಟ್ಟದಲ್ಲೂ ಈ ಎರಡು ವರ್ಗಗಳ ನಡುವೆ ಘರ್ಷಣೆ ನಡೆಯುತ್ತಲೇ ಬಂದಿದೆ. ಜಾಗತಿಕ ಇತಿಹಾಸದಲ್ಲಿ ಮಾನವ ಸಮಾಜ ತನ್ನ ದಾಸ್ಯದ ಸಂಕೋಲೆಗಳನ್ನು ಕಳಚಿ ತನ್ನದೇ ಆದ ಸ್ವಂತಿಕೆಯನ್ನೂ, ಅಸ್ಮಿತೆಯನ್ನೂ ರಕ್ಷಿಸಿಕೊಳ್ಳಲು ಅನೇಕ ಮಾರ್ಗಗಳನ್ನು ಅನುಸರಿಸಿದೆ. ಗುಲಾಮಗಿರಿಯ ವಿರುದ್ದ ಹೋರಾಟ, ಊಳಿಗಮಾನ್ಯ ವ್ಯವಸ್ಥೆಯ ನಿರ್ಮೂಲನೆ, ಧರ್ಮಾಧಾರಿತ ಪ್ರಭುತ್ವದ ನಿರಾಕರಣೆ, ಸಾಮ್ರಾಜ್ಯಶಾಹಿಗೆ ಪ್ರತಿರೋಧ ಹೀಗೆ ಹಲವು ವಿಧಾನಗಳಲ್ಲಿ ಮನುಕುಲ ಇತಿಹಾಸದ ಹಾದಿಯನ್ನು ಕ್ರಮಿಸಿದೆ.
- ಫೀಡೆಲ್ ಕ್ಯಾಸ್ಟ್ರೋ
ಚೆ ಕ್ರಾಂತಿಯ ಸಹಜೀವನ ಕೃತಿಯಿಂದ
©2024 Book Brahma Private Limited.