‘ದಿವಾನ್ ಪೂರ್ಣಯ್ಯ’ (ಮೈಸೂರು ರಾಜ್ಯದ ಮೊದಲ ದಿವಾನರು) ಲೇಖಕ ಎಂ.ಎನ್. ಸುಂದರ ರಾಜ್ ಅವರು ರಚಿಸಿರುವ ದಿವಾನ್ ಪೂರ್ಣಯ್ಯ ಅವರ ಜೀವನ ಚರಿತ್ರೆ. ‘ಕನ್ನಡದಲ್ಲಿ ದಿವಾನ್ ಪೂರ್ಣಯ್ಯನವರನ್ನು ಕುರಿತ ಹಾಗೂ ಒಂದು ಸ್ವತಂತ್ರವಾದ, ಮಧ್ಯಮಗಾತ್ರದ ಪುಸ್ತಕ ಎಂ.ಎನ್.ಸುಂದರ ರಾಜ್ ಅವರಿಂದ ರಚಿತವಾಗಿ ಪ್ರಕಟವಾಗುತ್ತಿರುವುದು ಒಂದು ಸಮಾಧಾನದ, ಸಂತೋಷದ ವಿಷಯ. ಇದಕ್ಕೆ ಹಲವು ಆಕರಗಳಿಂದ ವಿಷಯವನ್ನು ಹುಡುಕಿ ತಡಕಿ ತೆಗೆದು, ಸಾರಾಸಾರ ವಿಮರ್ಶೆ ಮಾಡಿ, ಒಂದು ಸೂತ್ರದಲ್ಲಿ ಅಡಕಗೊಳ್ಳುವ ಹಾಗೆ ಅವರು ಬರವಣಿಗೆ ಮಾಡಿದ್ದಾರೆ’ ಎನ್ನುತ್ತಾರೆ ಹಿರಿಯ ಸಂಶೋಧಕ ಟಿ.ವಿ. ವೆಂಕಟಾಚಲ ಶಾಸ್ತ್ರಿ.
ಲೇಖಕ ಎಂ.ಎನ್. ಸುಂದರ ರಾಜ್ ಅವರು ಈ ಪುಸ್ತಕದ ಕುರಿತು ಬರೆಯುತ್ತಾ ‘ಮೈಸೂರಿನ ಇತಿಹಾಸದ ಬಗ್ಗೆ ಮೊದಲಿನಿಂದಲೂ ನಾನು ಆಸಕ್ತಿ ಬೆಳೆಸಿಕೊಂಡಿದ್ದೆ. ಈ ಸಂಬಂಧ ಓದಿದ ಅನೇಕ ಪುಸ್ತಕಗಳಲ್ಲಿ ಅಲ್ಲಿ ಇಲ್ಲಿ ದಿವಾನ್ ಪೂರ್ಣಯ್ಯನವರ ಬಗ್ಗೆ ಓದುತ್ತಿದ್ದೆ. ನಲವತ್ತು ವರ್ಷ ವಿವಿಧ ಆಡಳಿತಗಾರರ ಜೊತೆ ಆಡಳಿತದಲ್ಲಿ ಪಾಲ್ಗೊಂಡು ಸೇವೆಸಲ್ಲಿಸಿದ ವ್ಯಕ್ತಿಯ ಬಗ್ಗೆ ಒಂದು ಪರಿಪೂರ್ಣವಾದ ಕೃತಿ ಇಲ್ಲದಿರುವುದು ನನಗೆ ಪೂರ್ಣಯ್ಯನವರ ಬಗ್ಗೆ ಬರೆಯಲು ಪ್ರೇರಣೆ ನೀಡಿತು’ ಎನ್ನುತ್ತಾರೆ. ಹಾಗೇ ‘ಅವರ ಜೀವನ ವೃತ್ತಾಂತದ ಬಗ್ಗೆ ಕೆದಕಿದಷ್ಟೂ, ಹುಡುಕಿದಷ್ಟೂ ವಿಚಾರ ವೈವಿಧ್ಯಗಳು ಕಂಡು ಬಂತು. ಕೆಲವು ಐತಿಹಾಸಿಕ ಸತ್ಯವೆನಿಸಿದರೆ, ಕೆಲವು ಕೇವಲ ಊಹಾಪೋಹಗಳು. ಆದ್ದರಿಂದ ಜಳ್ಳೆನ್ನೆಲ್ಲಾ ತೂರಿ ಗಟ್ಟಿಕಾಳು ಪಡೆವಂತೆ ವಸ್ತುನಿಷ್ಠ ವಿಷಯಗಳನ್ನು ಮಾತ್ರ ಸೋಸಿ ಬರೆಯಲಾಗಿದೆ. ಹಾಗಂತ ಇದೊಂದು ಸಮಗ್ರ ಕೃತಿಯೆಂದು ನಾನು ಭಾವಿಸಿಲ್ಲ. ಒಟ್ಟಾರೆ ಪೂರ್ಣಯ್ಯನವರ ಜೀವನ ಮತ್ತು ಸಾಧನೆಗಳ ಮೇಲೆ ಕ್ಷ ಕಿರಣ ಬೀರಬಲ್ಲ ಒಂದು ಪ್ರಯತ್ನ ಮಾತ್ರ ಎಂಬ ನಂಬಿಕೆ ನನ್ನದು. ಇದರಲ್ಲಿಯೂ ಕೆಲ ದೋಷಗಳು ಇರಬಹುದು. ಅದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ ಎಂದು ಓದುಗರು ತಿಳಿಯಬೇಕೆಂಬ ಕಳಕಳಿ ನನ್ನದು. ಪೂರ್ಣಯ್ಯನವರ ವಿಚಾರವಾಗಿ ತಿಳಿಯಲು ಸಾಕಷ್ಟು ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ವಿದ್ವಾಂಸರ ಸಲಹೆ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ. ಒಟ್ಟಾರೆ ದಿವಾನ್ ಪೂರ್ಣಯ್ಯ ಅವರ ಆಡಳಿತ ವೈಖರಿ, ಬದುಕಿನ ಕುರಿತ ಮಹತ್ವದ ಮಾಹಿತಿಗಳು ಈ ಕೃತಿಯಲ್ಲಿವೆ.
‘ದಿವಾನ್ ಪೂರ್ಣಯ್ಯ’ ಕೃತಿಯ ಕುರಿತು ಎಂ.ಎನ್. ಸುಂದರರಾಜ್ ನುಡಿಗಳು.
©2024 Book Brahma Private Limited.