‘ಶ್ಯಾಮರಾವ್ ವಿಠ್ಠಲ ಕೈಕಿಣಿ’ ಜೀವನ ಮತ್ತು ಕಾರ್ಯ ಕೃತಿಯನ್ನು ಹಿರಿಯ ಸಾಹಿತಿ ಗೌರೀಶ ಕಾಯ್ಕಿಣಿ ಅವರು ಸಂಪಾದಿಸಿದ್ದಾರೆ. ಈ ಕೃತಿಗೆ ರಂ.ಶ್ರೀ ಮುಗಳಿ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಕನ್ನಡದ ಕೆಲಸವನ್ನು ಎಲೆ ಮರೆಯ ಕಾಯಿಯಂತೆ ನಿಂತು ಮಾಡಿದ ಮಹನೀಯರು ಅನೇಕರುಂಟು. ಅದರಲ್ಲಿ ಕೆಲವರು ಜೀವನೋಪಾಯಕ್ಕಾಗಿ ಬೇರೆ ಬೇರೆ ವೃತ್ತಿಗಳನ್ನು ಕೈಕೊಂಡರೂ ನಾಡು ನುಡಿಗಳ ಸೇವೆಯನ್ನು ಆಡಂಬರ ಪ್ರತಿಷ್ಠೆಗಳನ್ನು ಬಯಸದೆ ಅಂತಶ್ಯಕ್ತಿಯಿಂದ ಸಲ್ಲಿಸಿದವರಲ್ಲಿ ಶ್ಯಾಮರಾವ್ ಕೈಕಿಣಿಯವರು ಒಬ್ಬರು. ತಮ್ಮ ಬದುಕು ಕನ್ನಡಕ್ಕಾಗಿ ಎಂದು ಮೀಸಲಿರಿಸದಿದ್ದರೂ, ಅವರ ಸೇವೆಯನ್ನು ಒಂದು ಕರ್ತವ್ಯ ಕರ್ಮದಂತೆ ನೆರವೇರಿಸಿದವರು ಅವರು. ಕನ್ನಡ, ಕನ್ನಡಿಗ ಎಂಬ ಹೆಸರೇ ಕೇಳಬಾರದ ಕಾಲದಲ್ಲಿ ಮುಂಬಯಿಯಂಥ ಮರಾಠಿ ಇಂಗ್ಲಿಷ್ ಭಾಷೆಗಳ ಪ್ರಬಲ ಪ್ರಭಾವಗಳ ದಾಳಿಯ ಮಧ್ಯೆ ಕನ್ನಡದ ಪ್ರತಿಷ್ಠೆಯನ್ನು ಹೆಚ್ಚಿಸಿ ಅದಕ್ಕೆ ಯೋಗ್ಯ ಸ್ಥಾನವನ್ನೂ ಕಲ್ಪಿಸಿಕೊಟ್ಟವರು ಶ್ಯಾಮರಾಯರು. ಬಹುಸಾಹಸದಿಂದ ವಿಷಯ ಸಂಗ್ರಹಮಾಡಿ ಶ್ಯಾಮರಾವ್ ಜೀವನ ಚರಿತ್ರೆಯನ್ನು ಶ್ರೀಗೌರೀಶ ಕಾಯ್ಕಿಣಿಯವರು ಪರಿಷತ್ತಿಗಾಗಿ ಬರೆದುಕೊಟ್ಟು ತುಂಬ ಉಪಕಾರ ಮಾಡಿದ್ದಾರೆ. ಗ್ರಂಥಕರ್ತರ ಮುನ್ನುಡಿ ಜೀವನ ಚರಿತ್ರೆಯ ಅಂಶಗಳನ್ನು ಶೇಖರಿಸುವುದಕ್ಕೆ ಅವರು ಕೈಕೊಂಡ ಒಂದು ಸಾಹಸ ಚಿತ್ರದ ವಿವರಣೆಯಾಗಿದೆ ಎಂದು ರಂ.ಶ್ರೀ. ಮುಗಳಿ ಅವರು ತಿಳಿಸಿದ್ದಾರೆ.
ಸಾಹಿತಿ ಗೌರೀಶ್ ಕಾಯ್ಕಿಣಿ ಅವರು 1912 ಸೆಪ್ಟೆಂಬರ್ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು. ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು. ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು. ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...
READ MORE