ದೊರೆಸ್ವಾಮಿ ಅವರು ಯಾವುದೇ ಯುವ ಜೀವಗಳನ್ನು ನಾಚಿಸುವಂತೆ, ಬೇರೆ ಬೇರೆ ಸಾಮಾಜಿಕ ಚಳವಳಿಗಳಲ್ಲಿ ಇನ್ನೂ ತೊಡಗಿಸಿಕೊಂಡಿದ್ದಾರೆ . ಸ್ವಾತಂತ್ರ ಹೋರಾಟದಲ್ಲಿ ಪಾಲುಗೊಂಡಿರುವ ಈ ಜೀವದ ಪಾಲಿಗೆ ನಾಡಿನ ಸ್ವಾತಂತ್ರ ಇನ್ನೂ ಪೂರ್ಣಗೊಂಡಿಲ್ಲ. ಆ ಕಾರಣಕ್ಕಾಗಿ ಭೂಮಿಗಾಗಿ, ಆದಿವಾಸಿಗಳಿಗಾಗಿ ಸದಾ ಮಿಡಿಯುತ್ತಾ, ಎಲ್ಲ ಹೋರಾಟಗಳಲ್ಲೂ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಹೋರಾಟ, ಬದುಕಿನ ಕುರಿತಂತೆ ಕೆ. ಎಸ್. ನಾಗರಾಜ್ ಅವರು 'ದಣಿವಿಲ್ಲದ ಹೋರಾಟಗಾರ-ಎಚ್. ಎಸ್. ದೊರೆಸ್ವಾಮಿ' ಕೃತಿಯನ್ನು ಬರೆದಿದ್ದಾರೆ. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಜೈಲುವಾಸವನ್ನು ಇವರು ಅನುಭವಿಸಿದ್ದ ದೊರೆಸ್ವಾಮಿ 1942ರ ಕ್ವಿಟ್ ಇಂಡಿಯಾ ಚಳವಳಿಯಿಂದ ಆರಂಭಿಸಿದ ಹೋರಾಟಕ್ಕೆ ಇನ್ನೂ ವಿಶ್ರಾಂತಿ ಸಿಕ್ಕಿಲ್ಲ ಎನ್ನುವುದನ್ನು ಈ ಕೃತಿ ಸರಳವಾಗಿ ಸಂಕ್ಷಿಪ್ತವಾಗಿ ಹೇಳುತ್ತದೆ. ವಿನೋಬಾ ಭಾವೆಯವರ ಭೂ ದಾನ ಚಳವಳಿ, ಕರ್ನಾಟಕ ಏಕೀಕರಣ ಚಳವಳಿ, ಕನ್ನಡ ಮಾತೃಭಾಷೆಯಾಗಬೇಕು ಎನ್ನುವ ನಿಟ್ಟಿನಲ್ಲಿ ನಡೆದ ವಿವಿಧ ಚಳವಳಿಗಳಲ್ಲಿ ಇವರು ಗುರುತಿಸಿಕೊಂಡಿದ್ದಾರೆ. ಆದುದರಿಂದಲೇ, ದೊರೆಸ್ವಾಮಿಯ ಹೋರಾಟವನ್ನು ಸ್ವಾತಂತ್ರ ಪೂರ್ವ ಮತ್ತು ಆನಂತರ ಎಂದು ಗುರುತಿಸಬಹುದು.
©2024 Book Brahma Private Limited.