ರಾಳೆಗಣಸಿದ್ಧಿ ಎಂಬ ಕುಗ್ರಾಮವನ್ನು ಆದರ್ಶಗ್ರಾಮಿಸಿದ ಕೀರ್ತಿ ಹಿರಿಯ ಸಮಾಜಸೇವಕ ಅಣ್ಣಾ ಹಜಾರೆಯವರಿಗೆ ಸಲ್ಲುತ್ತದೆ. ಊರಿನ ಯುವಕರು ವ್ಯಸನಾಧೀನರಾಗಿದ್ದು ಕಂಡು ಯುವಕರು ಹೀಗೆ ದಾರಿ ತಪ್ಪಿದರೆ ದೇಶವೇ ಹಾಳಾಗುತ್ತದೆ ಎಂಬುದನ್ನು ಮನಗಂಡು ಅಣ್ಣಾ ಹಜಾರೆ ಮೌಲ್ಯಶಿಕ್ಷಣ ನೀಡಲು ಪ್ರಾರಂಭಿಸಿದರು. ಸೈನ್ಯದಲ್ಲಿ ಸೇವೆ ಸಲ್ಲಿಸಿ ಬಂದಿದ್ದ ಅಣ್ಣಾ ಹಜಾರೆ ಅತ್ಯಂತ ನಿಸ್ವಾರ್ಥ ಭಾವನೆಯಿಂದ ಊರಿನ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸಿದರು. ಅವರ ಶ್ರಮದಿಂದಾಗಿ ನೀರಿಗೆ ಹಾಹಾಕಾರವಿದ್ದ ಊರಲ್ಲಿ ವರ್ಷವಿಡಿ ನೀರು ಹರಿಯುವಂತಾಯಿತು. ಮಕ್ಕಳು ಆರೋಗ್ಯವಂತ ಹಾಗೂ ಸುಶಿಕ್ಷಿತರಾದರು. ದೇಶದ ಮೊದಲ ವ್ಯಸನಮುಕ್ತ ಗ್ರಾಮವಾಗಿ ರಾಳೆಗಣಸಿದ್ಧಿ ಖ್ಯಾತಿ ಪಡೆಯಿತು. ಮನೆ ಗೆದ್ದು ಮಾರು ಗೆಲ್ಲು ಎಂಬಂತೆ ಅಣ್ಣಾ ಊರಿನ ವಿಕಾಸದ ನಂತರ ದೇಶದ ಎದುರಿನ ಮುಖ್ಯ ಸಮಸ್ಯೆಯಾಗಿದ್ದ ಭ್ರಷ್ಟಚಾರ ನಿರ್ಮೂಲನೆಯ ಕಾರ್ಯ ಕೈಗೆತ್ತಿಕೊಂಡು ಈ ನಿಟ್ಟಿನಲ್ಲಿ ಹಲವಾರು ಕಾನೂನುಗಳನ್ನು ರೂಪಿಸಲು ಆಂದೋಲನ ಹೋರಾಟ ಮಾಡಿದರು, ದೇಶಕ್ಕೆ ಮೊದಲ ಜನಲೋಕಪಾಲ ದೊರಕಿಸಿಕೊಡುವಲ್ಲಿ ಅಣ್ಣಾ ಹಜಾರೆಯವರ ಪಾತ್ರ ಬಹುಮುಖ್ಯ. ಹೀಗೆ ಇಷ್ಟೆಲ್ಲ ಕಾರ್ಯಗಳನ್ನು ಮಾಡಿದ ಹಜಾರೆಯವರ ಬದುಕು, ಸಮಾಜ ಸೇವೆ, ಹೋರಾಟ, ಆಂದೋಲನ, ಬರಹ, ಪ್ರಶಸ್ತಿ ಪುರಸ್ಕಾರ ಸೇರಿದಂತೆ ಸಮಗ್ರ ಮಾಹಿತಿ ಈ ಕೃತಿಯಲ್ಲಿದೆ.
©2024 Book Brahma Private Limited.