ಆರನೇ ವಯಸ್ಸಿನಲ್ಲಿಯೇ ಕ್ಯಾಮರಾ ಹಿಡಿದ ಹುಡುಗ ಏಳು ದಶಕಗಳ ಕಾಲ ಅದರೊಂದಿಗೆ ಒಡನಾಟ ನಡೆಸಿ ಅನನ್ಯ ಸಾಧನೆ ಮಾಡಿದ ಕತೆಯಿದು. ಪೊಲೀಸ್ ಫೋಟೋಗ್ರಾಫರ್ ಆಗಿದ್ದ ತಂದೆಯ ಕೈಯಲ್ಲಿದ್ದ ಕುತೂಹಲ ಹುಟ್ಟಿಸಿದ ಕ್ಯಾಮರಾ ಹಿಡಿದಾಗ ಮುಂತಕಾಗೆ ಆರು ವರ್ಷ. ಅಲ್ಲಿಂದ ಪ್ರಾರಂಭವಾದ ಕ್ಯಾಮರಾದ ಜೊತೆಗೆ ನಂಟು ಅವರನ್ನು ಬಹುದೂರದ ವರೆಗೆ ಕರೆದೊಯ್ಯಿತು. ಜಗತ್ತಿನ ಅತಿದೊಡ್ಡ ನೆಗೆಟಿವ್ ಹೊಂದಿರುವುದಾಗಿ ಹೇಳುತ್ತಿದ್ದ ಮುಂತಕಾ ಅವರ ಸ್ಟಿಲ್ ಫೋಟೋಗ್ರಫಿಯಲ್ಲಿ ಮೂವಿ ಟೆಕ್ನಿಕ್ ಬಳಸುತ್ತಿದ್ದ ಅಸಾಧಾರಣ ತಂತ್ರಜ್ಞಾನಿ.
ವಿವಿಧ ಬಗೆಯ ಕ್ಯಾಮರಾಗಳನ್ನು ಬಿಚ್ಚಿ ಒಂದರ ಭಾಗವನ್ನು ಮತ್ತೊಂದಕ್ಕೆ ಜೋಡಿಸಿ ಅತ್ಯುತ್ತಮ ಫಲಿತಾಂಶ ಪಡೆಯಲು ಮುಂತಕಾ ಹೆಣಗಾಡುತ್ತಿದ್ದರು. ಫೋಟೋಗ್ರಫಿಯ ಬೆಳವಣಿಗೆಯ ಜೊತೆಯಲ್ಲಿ ಬೆಳೆಯುತ್ತ ಹೋದ ಮುಂತಕಾ ಕೆಲಕಾಲ ಮುಂಬೈಗೆ ಹೋಗಿ ಬಾಲಿವುಡ್ ನಲ್ಲಿ ಕೆಲಸ ಮಾಡಲು ಯತ್ನಿಸಿದರು. ಡಾರ್ಕ್‌ರೂಮ್ ನ ಕತ್ತಲು ಮತ್ತು ಅಲ್ಲಿನ ಹುಡುಗಿಯರು ಅಲ್ಲಿಂದ ದೂರ ಸರಿಯುವಂತೆ ಮಾಡಿತು. ಛಾಯಾಗ್ರಹಣವನ್ನೇ ಉಸಿರಾಗಿಸಿಕೊಂಡಿದ್ದ ಮುಂತಕಾ ಅವರು ಚೌಕಟ್ಟಿನಾಚೆಗೆ ಹರಡುವ ಚೌಕಟ್ಟಿಲ್ಲದ ಚಿತ್ರಗಳನ್ನ ಕ್ಲಿಕ್ಕಿಸಿದ ಸಾಹಸಿ.
ಮುಂತಕಾ ಅವರ ಬದುಕು- ಛಾಯಾಗ್ರಹಣ ಲೋಕದಲ್ಲಿ ಸಾಧನೆಯನ್ನು ಪತ್ರಕರ್ತ ದೇವು ಪತ್ತಾರ ಅವರು ಈ ಕೃತಿಯಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ತೆರೆಯ ಮರೆಯಲ್ಲಿಯೇ ಉಳಿದ ಮಹಾನ್ ವ್ಯಕ್ತಿಯನ್ನು ಪರಿಚಯಿಸುವ ಕೃತಿಯಿದು.
©2024 Book Brahma Private Limited.