‘ವರದರಾಜ ಹುಯಿಲಗೋಳ’ ಸಿವಿಜಿ ಪಬ್ಲಿಕೇಷನ್ಸ್ ನ ‘ಮಕ್ಕಳ ಸಾಹಿತ್ಯ ನಿರ್ಮಾಪಕರು’ ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಲೇಖಕರಾದ ರಾಮಚಂದ್ರ ವಿ. ಪಾಟೀಲರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಕ್ರಿ.ಶ. 1978-79ರಲ್ಲಿ ನಾನು ರನ್ನನ ಮುದುವೊಳಲಿನಿಂದ ವರ್ಗವಾಗಿ, ಧಾರವಾಡದ ಪ್ರತಿಷ್ಟಿತ ಸರಕಾರಿ ಟ್ರೇನಿಂಗ್ ಕಾಲೇಜಿಗೆ (DIET) ಬಂದಾಗ ಮಾರ್ಕೆಟ್ ಮಧ್ಯದ ಮರಧರಪ್ಯಾವು ಕುಡಿವ ನೀರಿನ ವ್ಯವಸ್ಥೆಯನ್ನು ಡಾ.ದ.ರಾ.ಬೇಂದ್ರೆಯವರು ಉದ್ಘಾಟಿಸಿ ವಿಷ್ಣುವಿನ ವಿರಾಟರೂಪದ ತೆರದಿ ಭಾಷಣ ಮಾಡುವುದನ್ನು ಬಾಯಿತೆರೆದು ನಿಂತು ನೋಡಿದೆ, ಆಲಿಸಿದೆ.
ಡಾ. ಬೇಂದ್ರೆಯವರನ್ನು ನಾನು ನೋಡಿದ್ದು ಅದೇ ಮೊದಲು. ಹೆಸರು ಸಾಕಷ್ಟು ಕೇಳಿಯಾಗಿತ್ತು. ಅವರ ಕೃತಿಗಳನ್ನು ಓದಿಯೂ ಆಗಿತ್ತು. ಎತ್ತರದ ವೇದಿಕೆಯ ಮೇಲೆ ನಿಂತು ಮಾತಾಡುತ್ತಿದ್ದ ಆ ತೆಳು ದೇಹದ, ಮಗುವನದ, ಮುಗ್ಧ ಮುಖದ ಬೇಂದ್ರೆ ನನಗೆ ದೇವಲೋಕದ ಗಂಧರ್ವರಂತೆ ಕಂಡರು. ಆಗ ಅಲ್ಲಿ ಅವರ ಎಡ ಬಲ ಓಡಾಡುವವರಲ್ಲಿ ಡಾ. ವರದರಾಜ ಹುಯಿಲಗೋಳ ಅವರನ್ನು ಕಂಡ ನೆನಪು. ಅದಾಗಲೇ ಅವರು ಪ್ರಬುದ್ಧ ಲೇಖಕರಾಗಿ, ಆದರ್ಶ ಶಿಕ್ಷಕರಾಗಿ, ಕನ್ನಡ ನಾಡು-ನುಡಿ-ಸಾಹಿತ್ಯದ ಕಾಳಜಿಯುಳ್ಳವರಾಗಿ ಪ್ರಸಿದ್ಧರಾಗಿದ್ದರು. ಡಾ. ವರದರಾಜ ಹುಯಿಲಗೋಳ ಅವರು ಆಲೂರು ವೆಂಕಟರಾವ್ ವರ್ತುಳದ (ಜುಬ್ಲಿ ಸರ್ಕಲ್) ಹತ್ತಿರ ಇರುವ ಕರ್ನಾಟಕ ಇತಿಹಾಸ ಸಂಶೋಧನ ಮಂಡಳಿ ಕಟ್ಟಡದ (ಡಾ.ಆರ್.ಎಸ್. ಪಂಚಮುಖಿ ಸ್ಥಾಪಿತ) ಒಳ ಹೊರಗೆ ಆಗಾಗ ಕಾಣಿಸುತ್ತಿದ್ದರು. ಸಾಕಷ್ಟು ಸಲ ನಮ್ಮ ಟ್ರೈನಿಂಗ್ ಕಾಲೇಜಿಗೂ ಬರುತ್ತಿದ್ದರು. ಇಂಗ್ಲೀಷನಲ್ಲಿರುವ ಗೆಜೆಟಿಯರ ಸಂಪುಟಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಬಹು ಜವಾಬ್ದಾರಿಯುತ ಕಾರ್ಯ ಅವರ ಹೆಗಲ ಮೇಲಿತ್ತು. ಅವರು ಒಂದು ದಿನ ಧಾರವಾಡದಲ್ಲಿರುವ ಹೈಸ್ಕೂಲು-ಟ್ರೈನಿಂಗ್ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಭಾಷಾ ಶಿಕ್ಷಕರನ್ನು ಕರೆದು, ಅನುವಾದದ ಕುರಿತು ಚರ್ಚಿಸಿದರು. ತಾವು ಅನುಭವದ ಆಗರವಾಗಿದ್ದರೂ, ಅವರ ಮುಂದೆ ಬಹು ಸಣ್ಣವರಾದ ನಮ್ಮ ಸಲಹೆ ಕೇಳಿದ್ದು ಅವರ ಸೌಜನ್ಯವೇ ಹೊರತು ನಮ್ಮ ಅರ್ಹತೆಯಲ್ಲ.
ಹಿಡಿದ ಕಾರ್ಯವನ್ನು ಸರ್ವತೋಮುಖವಾಗಿ ಪರಿಶೀಲಿಸಿ, ಚರ್ಚಿಸಿ, ಒಂದು ನಿರ್ಣಯಕ್ಕೆ ಬಂದ ನಂತರವೇ ಕಾರ್ಯೋನ್ಮುಖರಾಗುವುದು ಡಾ.ಹುಯಿಲಗೋಳ ಅವರ ಜಾಯಮಾನ. ಇಂತಹ ಡಾ. ವರದರಾಜ ಹುಯಿಲಗೋಳ ಅವರ ಕುರಿತು. ಮಕ್ಕಳಿಗಾಗಿ ಬರೆಯಬೇಕೆನಿಸಿದಾಗ ಅವರ ಕುರಿತು ಮಾಹಿತಿ ಸಂಗ್ರಹಿಸಲು ಪರದಾಡುತ್ತಿರುವಾಗ, ರೆಂಟೆ ಹೊಡೆದಾಗ ಮುತ್ತು, ರತ್ನಗಳೇ ದೊರೆತಂತೆ, ಡಾ.ಮಂದಾಕಿಣಿ ಪುರೋಹಿತ ಹಾಗೂ ಸಂಗಮೇಶ ಹೊಳೇಚಿ ಸಂಪಾದಿಸಿ, 1990 ರಲ್ಲಿ ಪ್ರಕಟಿಸಿದ ಮಂದಾರ ಗ್ರಂಥ ನನಗೆ ದೊರೆಯಿತು. ನಾನು ಮತ್ತೆಲ್ಲೂ ಹುಡುಕ ಹೋಗಲಿಲ್ಲ, ಅದರಲ್ಲಿ ಎಲ್ಲವೂ ಇತ್ತು. ಅದನ್ನು ನನಗೆ ಒದಗಿಸಿದವರು ಮಿತ್ರ ನಿಂಗಣ್ಣಕುಂಟೆಯವರು. ವರದರಾಜ ಹುಯಿಲಗೋಳ ಅವರಂಥಹ ಅಪರೂಪದ ವ್ಯಕ್ತಿಯ ಜೀವನ ಮತ್ತು ಸಾಧನೆಯ ಸರ್ವತೋಮುಖಗಳ ಪರಿಚಯ ಮಕ್ಕಳಿಗೆ ಆಗಲೆಂದು ಈ ಪ್ರಯತ್ನ ಮಾಡಲಾಗಿದೆ ಎಂದು ಲೇಖಕ ರಾಮಚಂದ್ರ ವಿ.ಪಾಟೀಲ ತಿಳಿಸಿದ್ದಾರೆ.
©2024 Book Brahma Private Limited.