ಪ್ರತಿಬಿಂಬ ವಿನುತಾ ಹಂಚಿನಮನಿ ಅವರ ಕೃತಿಯಾಗಿದೆ. ಜೀವನ ಸಂಜೆಯಲ್ಲಿ, ನಡೆದು ಬಂದ ದಾರಿಯನ್ನೊಮ್ಮೆ ಅವಲೋಕಿಸಿದರೆ ಕೆಲವೊಮ್ಮೆ ಪಶ್ಚಾತ್ತಾಪ, ಕೆಲವೊಮ್ಮೆ ಆಶ್ಚರ್ಯ ಮತ್ತೆ ಕೆಲವು ಸಲ ಹೆಮ್ಮೆ ಪಡುವುದು ನಿಜ. ನನ್ನ ಜೀವನದ ಪ್ರತಿಬಿಂಬವನ್ನು ಪ್ರತಿಫಲಿಸುವ ಕನ್ನಡಿ ಈ ಪುಸ್ತಕ. ಎಲ್ಲರಿಗೂ ಅವರವರದೇ ಬಯಕೆಗಳು ಇರುವಂತೆ ನನಗೂ ಹಲವಾರು ಸಣ್ಣ ದೊಡ್ಡ ಗುರಿಗಳಿದ್ದವು. ಸಾಧಿಸುವ ಮಾರ್ಗ ಮಾತ್ರ ನಿಶ್ಚಿತ ಹೋರಾಟದ್ದು ಎಂಬ ಅರಿವಿತ್ತು. ಬಯಸಿದ್ದನ್ನೆಲ್ಲ ಪಡೆದೆ ಅಂತ ಆಗಲಿಲ್ಲ. ಬಯಸದೇ ಇರುವದು ಕೂಡ ಬದುಕು ನನಗೆ ಕೊಟ್ಟಿದೆ, ಅದಕ್ಕಾಗಿ ಕೃತಜ್ಞಳು. ಕಳೆದುಕೊಂಡದ್ದಕ್ಕಿಂತ ಪಡೆದದ್ದೇ ಹೆಚ್ಚು. ಎಲ್ಲರಂತೆ ನನ್ನ ಜೀವನವಿರಲಿಲ್ಲ. ಹುಟ್ಟು, ಬಾಲ್ಯ, ಕಲಿಯುವಿಕೆ, ಯೌವನ, ವಿವಾಹ, ವೃತ್ತಿ ಇವುಗಳಲ್ಲಿ ಒಂದು ರೀತಿಯ ಭಿನ್ನವಾದ ವಿಶಿಷ್ಟತೆ ಇದೆ. ಜೀವನದ ವಿವಿಧ ಘಟ್ಟಗಳು ತಮ್ಮದೇ ಆದ ವಿಶೇಷ ಪರಿಚಯ ಮಾಡಿಸಿದವು ನನಗೆ. ಸುಖದ ಬಾಗಿಲು ತೆರೆದಾಗ ಕಷ್ಟವನ್ನು ಮರೆತಿದ್ದೆ, ದುಃಖ ಆವರಿಸಿದಾಗ ಸುಖವನ್ನು ನೆನಪಿನಲ್ಲಿಟ್ಟುಕೊಂಡಿದ್ದೆ. ಬದುಕು ಪ್ರತಿದ್ವನಿ ಕೂಡ. ನಾವು ಬಿತ್ತಿದ್ದನ್ನೇ ನಾವು ಬೆಳೆದುಕೊಳ್ಳುವಂತೆ ನಾವು ಸಮಾಜಕ್ಕೆ, ಜಗತ್ತಿಗೆ ಕೊಟ್ಟಿದ್ದು ನಮಗೆ ತಿರುಗಿ ಸಿಗುತ್ತದೆ. ನಾವು ಒಳ್ಳೆಯವರಾದರೆ ಜಗತ್ತು ಒಳ್ಳೆಯದು ಅನ್ನುವ ಮಾತು ಸುಳ್ಳಲ್ಲ. ಒಗೆದ ಕಲ್ಲು ಅಲೆ ಸೃಷ್ಟಿಸುವಂತೆ, ನಡೆದ ದಾರಿಯಲ್ಲಿ ಹೆಜ್ಜೆ ಗುರುತು ಮೂಡಿಸಿದಂತೆ ಬದುಕಿನ ಗುರುತು ಅದರ ಪ್ರತಿಬಿಂಬ ಎನ್ನುತ್ತಾರೆ ಲೇಖಕಿ ವಿನುತಾ ಹಂಚಿನಮನಿ.
©2024 Book Brahma Private Limited.