ಪ್ರಸ್ತುತ ದಿನಗಳಲ್ಲಿ ವರ್ತಮಾನದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳನ್ನು ಅತ್ಯಂತ ನಿಷ್ಠುರವಾದಿ ಕಣ್ಣುಗಳಿಂದ ನೋಡುತ್ತಾ ವಿಮರ್ಶಿಸುತ್ತಿರುವವರಲ್ಲಿ ರಾಜಾರಾಂ ತಲ್ಲೂರು ಅವರು ಪ್ರಮುಖರು. ಇದು ಅವರ ವೆಬ್ ಅಂಕಣಗಳ ಸಂಗ್ರಹವಾಗಿದ್ದು,ಚೊಚ್ಚಲ ಕೃತಿಯಾಗಿದೆ. ಇಲ್ಲಿರುವ ಲೇಖನಗಳು ಪುಟ್ಟದಾದರೂ ಅದು ಓದುಗರಲ್ಲಿ ಇನ್ನಷ್ಟು ವಿಸ್ತಾರವಾಗಿ ಬೆಳೆಯುವ ಶಕ್ತಿಯನ್ನು ತನ್ನದಾಗಿಸಿಕೊಂಡಿವೆ. ಈ ಲೇಖನಗಳು ಓದುಗನಲ್ಲಿ ಒಂದು ನಿರ್ದಿಷ್ಟ ಅಭಿಪ್ರಾಯವನ್ನು ತಳೆಯಲು ಒತ್ತಾಯ ಹೇರದೆ, ಒಂದು ಅಭಿಪ್ರಾಯದ ಕಡೆಗೆ ಮುನ್ನಡೆಯಲು ಒಳನೋಟಗಳನ್ನು ಮಾಡಿಕೊಡುತ್ತವೆ. ಅದು ಈ ಕೃತಿಯ ಹೆಗ್ಗಳಿಕೆಯಾಗಿದೆ. ಸಾಧಾರಣವಾಗಿ ಪತ್ರಿಕೆಗಳಲ್ಲಿ ಪ್ರಕಟವಾಗುವ ಅಂಕಣಗಳ ಬಗ್ಗೆಯೇ ಚಿಂತಕರ ಟೀಕೆಗಳಿವೆ. ಅವುಗಳನ್ನು ತೀರಾ ಗಂಭೀರವಾಗಿ ತೆಗೆದುಕೊಳ್ಳಲು ಹಿಂಜರಿಯುವವರೂ ಇದ್ದಾರೆ. ಪುಟಗಳ ಮಿತಿ, ವಾರಗಳ ಮಿತಿ, ಪ್ರಸ್ತುತತೆ ಇವೆಲ್ಲವನ್ನು ದೃಷ್ಟಿಯಲ್ಲಿಟ್ಟುಕೊಂಡು, ಅಂಕಣಕಾರ ಪತ್ರಿಕಾ ಸಂಪಾದಕರ ಕೈಕೋಳದ ಜೊತೆಗೆ ಬರೆಯಬೇಕು ಎನ್ನುವ ಆರೋಪಗಳಿವೆ. ವೆಬ್ ಅಂಕಣಗಳ ಚೌಕಟ್ಟು ಅದಕ್ಕಿಂತಲೂ ಕಿರಿದಾದುದು. ಯಾಕೆಂದರೆ, ದೀರ್ಘವಾದಷ್ಟು ವೆಬ್ಗಳಲ್ಲಿ ಓದುವವರ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುವ ಅಳಲು ವೆಬ್ ಸಂಪಾದಕರದಾಗಿರುತ್ತದೆ. ಅದುದರಿಂದ ಕಿರಿದಾದುದರೊಳ್ ಹಿರಿದನ್ನು ಹೇಳುವ ಲೇಖಕರ ಹುಡುಕಾಟದಲ್ಲಿ ಇರುತ್ತಾರೆ. ತಲ್ಲೂರಿನ ಬರಹಗಳಲ್ಲಿ ಸಂಪಾದಕರಾದ ಮೋಹನ್ ಅವರು ಅಂತಹದೊಂದು ಶಕ್ತಿಯನ್ನು ಗುರುತಿಸಿದ್ದಾರೆ ಮತ್ತು ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿವಲ್ಲಿ ಯಶಸ್ವಿಯಾಗಿದ್ದಾರೆ.
©2024 Book Brahma Private Limited.