ಲೇಖಕ ಹಾಗೂ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಅಂಕಣಗಳ ಬರಹ-ನಿಮ್ಮಷ್ಟು ಸುಖಿ ಯಾರಿಲ್ಲ. ಸ್ವಾಮಿ ಅನಾಮಧೇಯಪೂರ್ಣ ಎಂಬ ಹೆಸರಿನಲ್ಲಿ ಅವರು 'ಬತ್ತದ ತೆನೆ' ಎಂಬ ಅಂಕಣ ಬರೆಯುತ್ತಿದ್ದು, ಆ ಲೇಖನಗಳನ್ನೇ ಇಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಬಹಳ ಸಂದರ್ಭಗಳಲ್ಲಿ ನಾವು ಸುಲಭವಾದ. ಸರಳವಾದ ಸಂಗತಿಗಳನ್ನು ಕ್ಲಿಷ್ಟಮಾಡಿಕೊಂಡು ಪೇಚಾಡುತ್ತೇವೆ. ನಾವು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದೊಂದೇ ಅಲ್ಲ. ಆಹ್ವಾನವನ್ನೂ ಮಾಡುತ್ತೇವೆ. ಸಣ್ಣ ಸಂಗತಿಗಳೇ ನಮಗೆ ಬೃಹದಾಕಾರವಾಗಿ ಕಾಡುತ್ತವೆ. ಅಷ್ಟಕ್ಕೂ, ಜೀವನ ಅಂದ್ರೆ ಇದೇನಾ? ಇಷ್ಟೇನಾ? ನಮ್ಮ ಬದುಕನ್ನು ಸುಂದರವಾಗಿ ಕಳೆಯಲು ನೂರಾರು ಮಾರ್ಗಗಳಿವೆ. ಮಾರ್ಗಗಳು ಅಷ್ಟೆಲ್ಲಾ ಇರಲಿ ಬಿಡಿ. ಆದರೆ ಆ ಸೌಂದರ್ಯವನ್ನು ಬೇರೆಲ್ಲೂ ಅರಸಬೇಕಾಗಿಲ್ಲ. ಅದನ್ನು ಹುಡುಕುವ ಮಾರ್ಗವಿದ್ದರೆ ಒಂದೇ. ನಮ್ಮ ಸುಖವನ್ನು ಸೃಷ್ಟಿಸಿಕೊಳ್ಳಬೆಕಾದವರು ನಾವೇ. ಅದು ನಮ್ಮೊಳಗೇ ಇದೆ. ಅದೇ ನಮಗೆ ಗೊತ್ತಿಲ್ಲ ಅದಕ್ಕಾಗಿ ಎಲ್ಲೆಲ್ಲೋ ಹುಡುಕುತ್ತೇವೆ. ಯಾರನ್ನೋ ಹುಡುಕಿಕೊಂಡು ಹೊಗುತ್ತೇವೆ. ನಮ್ಮನ್ನು ನಾವು ಪದೇಪದೆ ಭೇಟಿ ಮಾಡಿದರೆ, ನಮ್ಮೊಡನೆ ಕುಳಿತು ವಿಚಾರ ವಿನಿಮಯ ಮಾಡಿಕೊಂಡರೆ ಎಲ್ಲವೂ ಸಲೀಸು. ಅದಕ್ಕಾಗಿ ನಾವು ನಮಗೆ ಸಿಗಬೇಕು. ಆಗಲೇ ನಮ್ಮ ಸುಖ ಎಲ್ಲಿದೆಯೆಂಬುದು ತಿಳಿದೀತು. ಈ ಪುಸ್ತಕ ಓದಿದೆ ಬಳಿಕ ನಿಮ್ಮಲ್ಲಿರುವ ಸುಖ, ಸಂತಸ, ನೆಮ್ಮದಿ ನಿಮಗೆ ಸಿಗಲಿ. ಸಿಗುತ್ತದೆಂದು ಆಶಯ ನನ್ನದು. ಯೋಗಿ ದುರ್ಲಭಾಜೀ ಅವರು ಹೇಳುವುದೇನೆಂದರೆ, 'ನಮಗೆ ಬೇಕಿರುವುದು ಜೀವನದ ಕುರಿತಾದ ಸಿದ್ದಾಂತಗಳಲ್ಲ. ಸರಳವಾದ ಜೀವನ ಸೂತ್ರಗಳು. ಒಂದು ಎಳೆ ಸಿಕ್ಕರೆ ದಾರ, ದಾರದಿಂದ ಹಗ್ಗ ಮಾಡಿಕೊಳ್ಳುವ ಜಾಣ್ಮೆಯನ್ನು ಜೀವನವೇ ಕಲಿಸಿಕೊಡುತ್ತದೆ’ ಎಂದು ಕೃತಿಯ ಕುರಿತು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.