ಕನ್ನಡ ಸ್ಪಂದನ

Author : ಮನೋಜ್‌ ಪಾಟೀಲ್

Pages 168

₹ 200.00




Year of Publication: 2012
Published by: ಕನ್ನಡ ಜಾಗೃತಿ ಪುಸ್ತಕ ಮಾಲೆ
Address: ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆ, ಸಿದ್ಧಸಂಸ್ಥಾನಮಠ, ಚಿಂಚಣಿ- 591272, ಚಿಕ್ಕೋಡಿ ತಾಲೂಕು, ಬೆಳಗಾವಿ ಜಿಲ್ಲೆ..
Phone: 08338272265

Synopsys

‘ ಕನ್ನಡ ಸ್ಪಂದನ’ ಕೃತಿಯು ಮನೋಜ್ ಪಾಟೀಲ ಅವರ  ಅಂಕಣ ಬರಹಗಳ ಸಂಕಲನ. ಈ ಕೃತಿಯು ಕನ್ನಡ ಜಾಗೃತಿ ಪುಸ್ತಕ ಮಾಲೆ-31ರ ಕೃತಿಯಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಡಾ. ಬಾಳಣ್ಣ ಸೀಗಿಹಳ್ಳಿ ಅವರು, ‘ಯಾವುದೇ ದೇಶದ ಚರಿತ್ರೆ ಮತ್ತು ಚಾರಿತ್ರ ನಿರ್ಮಾಣದಲ್ಲಿ ಪತ್ರಿಕೆಗಳು ವಹಿಸುವ ಪಾತ್ರ ಅಗ್ರಮಾನ್ಯವಾದುದು. ಮನುಷ್ಯ ಬದುಕಿನ ಎಲ್ಲ ಆಯಾಮಗಳನ್ನು, ಸಂವೇದನೆಗಳನ್ನು, ಚಹರೆಗಳನ್ನು ಅದೆಲ್ಲವುಗಳ ಲಯಗಳನ್ನು ಸರಿಯಾಗಿ ಗ್ರಹಿಸಿ ಭೂತವನ್ನು ವರ್ತಮಾನಕ್ಕೆ ಹಸ್ತಾಂತರಿಸಿಕೊಂಡು ಭವಿಷ್ಯತ್ತಿಗೆ ಸಂಗತಗೊಳಿಸಿ ಸಾಮಾಜಿಕ ಅರಿವನ್ನು ವಿಸ್ತರಿಸುವ ನಿಟ್ಟಿನಲ್ಲಿ ವಿವರಿಸುವ, ವ್ಯಾಖ್ಯಾನಿಸುವ, ಮರು ವ್ಯಾಖ್ಯಾನಿಸುವ ಸಾಮಾಜಿಕ ಜವಾಬ್ದಾರಿ ತಮ್ಮದೆಂದು ಪ್ರಜ್ಞಾವಂತ ಪತ್ರಿಕೆಗಳು ಭಾವಿಸುತ್ತವೆ, ಭಾವಿಸಬೇಕು. ಆದರೆ, ಇದರ ಅರಿವಿದ್ದೂ ತಮ್ಮನ್ನು ಯಾವುದೋ ಹಿತಾಸಕ್ತಿಗೆ ಬಲಿಕೊಟ್ಟುಕೊಂಡು ವಸ್ತುಸ್ಥಿತಿಯನ್ನು ತಮ್ಮ ಮೂಗಿನ ನೇರಕ್ಕೆ ತಿರುಚಿ, ಸಮುದಾಯದ ಬದುಕನ್ನು ವಿಕಾರಗೊಳಿಸುವ ಪತ್ರಿಕೆಗಳೂ ಇಲ್ಲವೆಂದಲ್ಲ. ಇಂಥ ಸನ್ನಿವೇಶವನ್ನು ಸೂಕ್ಷ್ಮವಾಗಿ ಅವಲೋಕಿಸುವ ಎಚ್ಚೆತ್ತ ಮನಸ್ಸುಗಳು ಓದುವ ಆಯ್ಕೆಯನ್ನು ನಿರೂಪಿಸಿ, ಅವುಗಳ ಯೋಗ್ಯತೆಗೆ ತಕ್ಕ ಮನ್ನಣೆ ನೀಡುತ್ತ ಬಂದಿರುವುದು ಅಂದಂದಿನ ವಾಸ್ತವ ಎನ್ನುವದು ಅನುಭವ ಸತ್ಯವಾಗಿದೆ. ಒಂದು ಪತ್ರಿಕೆಯ ಏಳು-ಬೀಳು ಆ ಪತ್ರಿಕೆ ಬಿತ್ತರಿಸುವ 'ಸಾಮಾಜಿಕ ಜವಾಬ್ದಾರಿ' ಮತ್ತು 'ನ್ಯಾಯಿಕ ನಿಲುವು'ಗಳನ್ನೇ ಅವಲಂಬಿಸಿರುತ್ತದೆ. ಚಾರಿತ್ರಿಕ ಪ್ರಜ್ಞೆ ಸಮಕಾಲೀನ ಅರಿವು, ಭವಿಷ್ಯದ ಕಳಕಳಿ ಈ ಮೂರನ್ನೂ ಮೈಗೂಡಿಸಿಕೊಂಡು ತನ್ನ ನಡೆಯನ್ನು ನಿರ್ಧರಿಸಿಕೊಳ್ಳದಿದ್ದರೆ ಅಂಥ ಪತ್ರಿಕೆಗಳಿಗೆ ಕಾಲವೇ ಗತಿಕಾಣಿಸುತ್ತದೆ. ಈ ಎಚ್ಚರದೊಂದಿಗೆ ನಡೆದು ಬಂದ ಕೆಲವೇ ಕೆಲವು ಕನ್ನಡ ಪತ್ರಿಕೆಗಳಲ್ಲಿ ''ಸಂಯುಕ್ತ ಕರ್ನಾಟಕ'' ದಿನಪತ್ರಿಕೆಯೂ ಹೌದು. ಹಾಗೆಂದೇ, ಈ ಪತ್ರಿಕೆಗೆ ಭಾರತೀಯ ಪತ್ರಿಕಾ ಸಂದರ್ಭದಲ್ಲಿ ಇತಿಹಾಸವೂ ಇದೆ, ಪರಂಪರೆಯೂ ಇದೆ. ಇದರ ಹಿಂದೆ ಅನೇಕ ಮಹನೀಯರ ಶ್ರಮ, ಶ್ರದ್ಧೆ, ತ್ಯಾಗ, ಮಹತ್ವಾಕಾಂಕ್ಷೆಗಳ ಜೀವಜಲ ಹರಿದು ಬಂದಿರುವುದು ಈ ಪತ್ರಿಕೆ ಇತಿಹಾಸದ ಒಂದು ಮಹತ್ವದ ಅಧ್ಯಾಯ. ಇತ್ತೀಚಿನ ದಿನಗಳಲ್ಲಿ 'ದಿನ ಪತ್ರಿಕೆಗಳು' ಅಂಕಣ ಬರಹಗಳನ್ನು ಪ್ರಕಟಿಸುವಲ್ಲಿ ಅಘೋಷಿತ ಸ್ಪರ್ಧೆಗಿಳಿದಿರುವಂತೆ ಬಹುಪಾಲು ಸ್ಥಳವನ್ನು ಮೀಸಲಿಡುತ್ತಿರುವುದು ಅಪೇಕ್ಷಣೀಯ ಬೆಳವಣಿಗೆಯಾಗಿದೆ. ಇಂಥ ಬರಹಗಳಿಗಾಗಿಯೇ ಪತ್ರಿಕೆಗಳನ್ನು ಓದುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಪತ್ರಿಕೆಗಳಿಗೂ ಸ್ಪಷ್ಟವಾಗಿ ಅರ್ಥವಾಗಿದೆ. ಸುದ್ದಿಗಳ ಜೊತೆಗೆ ಚಿಂತನಶೀಲ, ಸಮಾಜಮುಖಿ, ಸಂಸ್ಕೃತಿ ಕೇಂದ್ರಿತ ಪ್ರಬುದ್ಧ ಬರಹಗಳನ್ನು ಜನ ಹೆಚ್ಚು ಇಷ್ಟಪಡುತ್ತಾರಷ್ಟೇ ಅಲ್ಲ, ಇಷ್ಟವಾದವುಗಳನ್ನು ಸಂಗ್ರಹಿಸಿಟ್ಟುಕೊಂಡು ಆಕರಗಳಾಗಿ ಬಳಸಿಕೊಳ್ಳುತ್ತಾರೆ. ಈ ಪ್ರವೃತ್ತಿಯನ್ನು ಗುರುತಿಸಿದ ಪತ್ರಿಕೆಗಳು ಅಂಕಣ ಬರಹಗಳಿಗಾಗಿ ಸಂಭಾವನೆ ಕೊಟ್ಟು ಹೆಸರಾಂತ ಸಾಹಿತಿಗಳನ್ನು ಬಳಸಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಂಡಿವೆ’ ಎಂದು ಕೃತಿಯ ಮಹತ್ವವನ್ನೂ ಪ್ರಶಂಸಿಸಿದ್ದಾರೆ. 

 

About the Author

ಮನೋಜ್‌ ಪಾಟೀಲ್

ಸಂಯುಕ್ತ ಕರ್ನಾಟಕ ದಿನಪತ್ರಿಕೆ ಮತ್ತು ಕಸ್ತೂರಿ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಮನೋಜ್‌ ಪಾಟೀಲ್‌ ಅವರು ಸದ್ಯ ಧಾರವಾಡದ ನಿವಾಸಿಯಾಗಿದ್ದಾರೆ. ಹದಿನೈದಕ್ಕೂ ಹೆಚ್ಚು ಪುಸ್ತಕಗಳನ್ನು ಅವರು ಪ್ರಕಟಿಸಿದ್ದಾರೆ. ...

READ MORE

Related Books