‘ಗೌಡ ಪರಂಪರೆ’ 10 ಕುಟುಂಬ 18 ಗೋತ್ರ ಈ ಕೃತಿಯನ್ನು ಪುತ್ತೂರು ಅನಂತರಾಜಗೌಡ ಅವರು ರಚಿಸಿದ್ದಾರೆ. ಈ ಕೃತಿಗೆ ಸಂಶೋಧಕರಾದ ಡಾ.ಹಾ.ತಿ.ಕೃಷ್ಣಗೌಡ ಅವರು ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ತಿಳಿಸುತ್ತಾ.. ‘ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಸಮುದಾಯ ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲ್ಲೂಕಿನ ವಿಟ್ಲ, ಪಾಣೆ ಮಂಗಳೂರು ಹಾಗೂ ಕೊಡಗಿನಲ್ಲಿ ಬಹುಸಂಖ್ಯಾತರಾಗಿ, ಸಾಕಷ್ಟು ಭೂ ಹಿಡುವಳಿ ಹೊಂದಿ ಜೀವಿಸುತ್ತ ಬಂದಿದ್ದಾರೆ. ಇವರು ಮೂಲತಃ ಕೃಷಿಕರು. ಆದರೆ ಈ ಸಮುದಾಯದ ಬೇರುಗಳನ್ನು ಹುಡುಕುತ್ತಾ ಹೋದರೆ ಇವರ ಮೂಲವನ್ನು ಸುಮಾರು ಸಾವಿರದ ಐದುನೂರು ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಬಹುದಾಗಿದೆ ಎ೦ಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಇವರ ಮೂಲದ ಬಗ್ಗೆ ಅನೇಕ ಚರ್ಚೆ, ವಾದಗಳಿದ್ದರೂ ಪ್ರಸ್ತುತ ಕೃತಿಯಲ್ಲಿ ಈ ಸಮುದಾಯದ ಮೂಲವನ್ನು ಗಂಗವಂಶದಲ್ಲಿ ಗುರುತಿಸಲಾಗಿದೆ. ಕಾಲಗರ್ಭದಲ್ಲಿ ಅಡಗಿರುವ, ಸಾಂಕೇತಿಕ ರೂಪದಲ್ಲಿರುವ, ಒಂದು ಸಮುದಾಯದ ಮೂಲ ಚರಿತ್ರೆ, ಸಂಸ್ಕೃತಿ, ಪರಂಪರೆಯನ್ನು ಉತ್ಖನನ ಮಾಡುತ್ತ, ಈಗಿರುವ ಸಂಗತಿಗಳೊಂದಿಗೆ ತಳುಕು ಹಾಕುತ್ತ ಸಂಶೋಧನಾತ್ಮಕವಾಗಿ ನಿರೂಪಿತವಾಗಿರುವ ಈ ಕೃತಿ ಸಂಸ್ಕೃತಿ ಅಧ್ಯಯನದ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ. ಸತ್ಯಾನ್ವೇಷಣೆಯೇ ಮೂಲಧಾತುವಾಗಿರುವ ಇಲ್ಲಿನ ಬರೆವಣಿಗೆ ಹೊಸ ಹೊಸ ಅಂಶಗಳನ್ನು ತುಂಬಿಕೊಂಡಿದ್ದು, ಕುತೂಹಲಕಾರಿಯಾಗಿದ್ದು, ಚರಿತ್ರೆ ಪ್ರಿಯರನ್ನೂ ಸಂಸ್ಕೃತಿ ಪ್ರಿಯರನ್ನೂ ಏಕಕಾಲಕ್ಕೆ ಆಕರ್ಷಿಸುತ್ತದೆ. ಅನಂತರಾಜಗೌಡರು ತಾವು ಆಯ್ಕೆಮಾಡಿಕೊಂಡ ವಿಷಯದ ಮ೦ಡನೆಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಾನು ತಿಳಿದಿದ್ದೇನೆ. ಇಂಥ ವಿಚಾರಗಳ ಬರೆವಣಿಗೆಯನ್ನು ಅವರು ಮುಂದುವರೆಸಲಿ ಎಂದು ಡಾ.ಹಾ.ತಿ.ಕೃಷ್ಣಗೌಡರು ಆರೈಸಿದ್ದಾರೆ.
©2024 Book Brahma Private Limited.