ಪುತ್ತೂರು ಅನಂತರಾಜ ಗೌಡರು ವೃತ್ತಿಯಲ್ಲಿ ತಂತ್ರಜ್ಞರಾಗಿದ್ದು ಬಿ.ಯಚ್.ಇ.ಎಲ್. (ಹೈದರಾಬಾದು) ಮತ್ತು ಮೈಕೊ-ಬಾಷ್ ಬಹುರಾಷ್ಟ್ರೀಯ ಸಂಸ್ಥೆಯಿಂದ Sr. Manager ಆಗಿ ನಿವೃತ್ತಿ ಪಡೆದು, ಈಗ ಬೆಂಗಳೂರಿನಲ್ಲಿ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ದಕ್ಷಿಣ ಕನ್ನಡ, ಕೊಡಗು, ಮಲ್ನಾಡು ಮತ್ತು ಬಯಲು ಸೀಮೆಯ ಗೌಡ ಒಕ್ಕಲಿಗ ಸಮುದಾಯದ ಸಂಸ್ಕೃತಿ, ಪರಂಪರೆ, ಭಾಷೆಗಳ ಅಧ್ಯಯನ ಸ್ಥೂಲ ಮಟ್ಟದಲ್ಲಿ ನಡೆಸಿದ್ದು, ಸುದೀರ್ಘ ಕ್ಷೇತ್ರ ಶೋಧನೆಯಿಂದ, ಈ ಕುರಿತು ಅವರ ಎರಡು ಕೃತಿಗಳು-ಆಂಗ್ಲ ಭಾಷೆಯಲ್ಲಿ 'IN PURSUIT OF OUR ROOTS ಮತ್ತು ಕನ್ನಡದಲ್ಲಿ 'ರಾಜ ಪರಂಪರೆಯ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡರು' ಬಿಡುಗಡೆಯಾಗಿ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿದೆ.
ದಕ್ಷಿಣ ಕನ್ನಡ ಮತ್ತು ಕೊಡಗಿನ ಗೌಡ ಸಮುದಾಯವನ್ನು ಮಲ್ನಾಡು ಹಾಗೂ ಬಯಲು ಸೀಮೆಯ ಗೌಡ-ಒಕ್ಕಲಿಗ ಸಮುದಾಯದೊಂದಿಗೆ ಸಮೀಕರಿಸುವ ಇವರ ಪ್ರಯತ್ನ ಇಂದಿಗೆ ಕೈಗೂಡಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಇವರ ಪ್ರಥಮ ಕೃತಿ ಆಂಗ್ಲ ಭಾಷೆಯಲ್ಲಿ 'IN PURSUIT OF OUR ROOTS ದೆಹಲಿ ಒಕ್ಕಲಿಗ ಸಂಘದಲ್ಲಿ 2015ರಲ್ಲಿ ಬಿಡುಗಡೆಯಾದರೆ, ಎರಡನೇ ಕೃತಿ 'ರಾಜ ಪರಂಪರೆಯ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡರು' ಬೆಂಗಳೂರಿನ ಸಾಹಿತ್ಯ ಪರಿಷತ್ತಿನಲ್ಲಿ ಆದಿಚುಂಚನಗಿರಿಯ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರಿಂದ, ಗಣ್ಯರ ಸಮಕ್ಷಮದಲ್ಲಿ 2017ರಲ್ಲಿ ಬಿಡುಗಡೆಯಾದವು. ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ ಬಹು ಸಂಖ್ಯಾತರು ಮತ್ತು ಪ್ರಭಾವಿ ಸಮುದಾಯದ ಕೊಂಡಿಯನ್ನು ಕರ್ನಾಟಕದ ರಾಜವಂಶಗಳಾದ ಹಾಲೇರಿ, ಕೆಳದಿ, ಚಂಗಾಳ್ವರು, ಚಾಲುಕ್ಯರ, ಹೊಯ್ಸಳರ ಹಾಗೂ ತಲಕಾಡಿನ ಗಂಗರೊಂದಿಗೆ ಶಾಸನ ಮತ್ತಿತರ ಆಧಾರಪೂರ್ವಕವಾಗಿ ಸಾಬೀತು ಪಡಿಸಿರುತ್ತಾರೆ.
1837ರ ಅಮರಸುಳ್ಯ ಸ್ವಾತಂತ್ರ ಸಮರದ ನಂತರ ಬ್ರಿಟಿಷರು ಹಾಗೂ ಅವರ ಅನುಯಾಯಿಗಳ ಕುಮ್ಮಕ್ಕಿನಿಂದ ಸರ್ವಸ್ವವನ್ನೂ ಕಳೆದುಕೊಂಡು ನೂರು ವರ್ಷಗಳ ಕಾಲ ಅವಹೇಳನಕ್ಕೆ ಈಡಾದ, ಕೀಳರಿಮೆಯಿದ್ದ ಯುವ ಜನಾಂಗಕ್ಕೆ ತಮ್ಮವರ ಪೂರ್ವಕಾಲದ ಹಿರಿಮೆಯನ್ನು ತೋರಿಸಿಕೊಟ್ಟು ಆತ್ಮ ನಿರ್ಭರತೆಯನ್ನು ಉಂಟುಮಾಡಲು ಶ್ರಮಿಸಿರುತ್ತಾರೆ. ಕೊಡಗಿನಲ್ಲಿ ಅಳಿವಿನಂಚಿನಲ್ಲಿದ್ದ ಕೆಲವು ವಿದ್ಯಾ ಸಂಸ್ಥೆಗಳನ್ನು ಆದಿಚುಂಚನಗಿರಿ ಸಂಸ್ಥಾನ ಅಧೀನಕ್ಕೆ ತರುವಲ್ಲಿ ಎಲೆಮರೆಯ ಕಾಯಿ ತರ ಶ್ರಮಿಸಿದ ವ್ಯಕ್ತಿ ಇವರು. 2016ರಲ್ಲಿ ಗೌಡರ ನೇತೃತ್ವದಲ್ಲಿ ತಲಕಾವೇರಿ ತೀರ್ಥೋದ್ಭವದ ಅಂಗವಾಗಿ 1000ಕ್ಕೂ ಹೆಚ್ಚು ಕೊಡಗು ಮತ್ತು ಬಯಲು ಸೀಮೆಯ ಗೌಡ ಒಕ್ಕಲಿಗರು ತಮ್ಮ ಪಾರಂಪರಿಕ ಪೋಷಾಕಿನೊಂದಿಗೆ ಭಾಗಮಂಡಲದಿಂದ ತಲಕಾವೇರಿಗೆ ಭಂಡಾರ ಹೋಗುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅವಸ್ಮರಣೀಯ.