ಡಾ. ಎಚ್. ನರಸಿಂಹಯ್ಯ ಅವರು ಭೌತಶಾಸ್ತ್ರದ ಅಧ್ಯಾಪಕರು, ವಿಚಾರವಾದಿ, ಮಾನವತಾವಾದಿ, ಸ್ವಾತಂತ್ಯ್ರ ಹೋರಾಟಗಾರರು. ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ. ಮೌಢ್ಯದ ವಿರುದ್ಧ ಸತತ ಹೋರಾಟವನ್ನು ನಡೆಸಿದವರು. ಬೆಂಗಳೂರು ವಿಜ್ಞಾನ ವೇದಿಕೆ ಸ್ಥಾಪನೆಗೆ ಕಾರಣರಾದವರು. ಜಯನಗರ ನ್ಯಾಷನ್ ಕಾಲೇಜಿನಲ್ಲಿರುವ ಬೆಂಗಳೂರು ಲಲಿತಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದರು. ಅವರ ವಿಶಿಷ್ಟ ಸೇವೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಇವರಿಗೆ ಸಂದಿವೆ. ಮಹಾತ್ಮ ಗಾಂಧೀಜಿಯವರಿಂದ ಪ್ರೇರಿತರಾದ ಇವರು ತಮ್ಮ ವೃತ್ತಿ ಬದುಕಿನುದ್ದಕ್ಕೂ, ಸರಳ ಜೀವನವನ್ನೇ ನಡೆಸಿದವರು. ಇವರ ಸಂಪೂರ್ಣ ಜೀವನ ಚಿತ್ರಣವನ್ನು ಸಂಪಾದಿಸಿರುವ ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಅವರು ಉದಯಭಾನು ಸುವರ್ಣ ಪುಸ್ತಕಮಾಲೆಯಲ್ಲಿ ಹೊರತಂದಿದ್ದಾರೆ.
ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಅವರು ಕ್ರೈಸ್ಟ್ ಕಾಲೇಜಿನ ನಿವೃತ್ತ ಭೌತವಿಜ್ಞಾನ ಪ್ರಾಧ್ಯಾಪಕರು. ಉದಯಭಾನು ಉನ್ನತ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಮತ್ತು ಬೆಂಗಳೂರು ವಿಜ್ಞಾನ ವೇದಿಕೆಯ ಖಜಾಂಚಿಯಾಗಿ ಕೆಲಸ ಮಾಡುತ್ತಿದ್ದಾರೆ. ಖಭೌತ ವಿಜ್ಞಾನ ಇವರ ಆಸಕ್ತ ವಿಷಯವಾಗಿದ್ದು ತಮ್ಮಲ್ಲಿದ್ದ ದೂರದರ್ಶಕವನ್ನು ಕರ್ನಾಟಕದ ಹಳ್ಳಿ-ಹಳ್ಳಿಗಳಿಗೆ ಹೋಗಿ ಜನರಿಗೆ ಆಕಾಶ ವೀಕ್ಷಣೆ ಮಾಡಿಸಿ, ವೈಜ್ಞಾನಿಕ ಅರಿವನ್ನು ಮೂಡಿಸಿದ್ದಾರೆ. ಸಂಕ್ಷಿಪ್ತ ಖಗೋಳ ವಿಜ್ಞಾನ ಚರಿತ್ರೆ, ಕಲಾಂ ಮೇಷ್ಟ್ರು, 20ನೇ ಶತಮಾನದ ಭೌತವಿಜ್ಞಾನ, ಒಲವಿನ ಶಿಲೆ ಅಯಸ್ಕಾಂತ, ಅಂತರಿಕ್ಷ, ಶುಕ್ರಸಂಕ್ರಮ, ಬಿಗ್ ಬ್ಯಾಂಗ್, ಪ್ರಳಯ 2012, ಮುಂತಾದವುಗಳು ಇವರ ಪ್ರಮುಖ ಕೃತಿಗಳು. ...
READ MORE