ಅನುದಿನದ ದಂದುಗ

Author : ವಿನಯಾ ಒಕ್ಕುಂದ

Pages 220

₹ 170.00




Year of Publication: 2017
Published by: ಪ್ರಗತಿ ಪ್ರಕಾಶನ
Address: ಮಹಡಿ, ನಂ. 2046/07-ಕೆ-1, 1ನೇ ಕ್ರಾಸ್‌, ಹೊಸ ಬಂಡಿಕೇರಿ, ಕೆ.ಆ‌ರ್‌. ಮೊಹಲ್ಲಾ, ಮೈಸೂರು-4

Synopsys

ಕವಯಿತ್ರಿ- ಲೇಖಕಿ ವಿನಯಾ ಒಕ್ಕುಂದ ಅವರ ಅಂಕಣ ಬರಹಗಳ ಸಂಕಲನ ’ಅನುದಿನದ ದಂದುಗ’ವು ವೈಚಾರಿಕ ಸ್ಪಷ್ಟತೆ-ಖಚಿತ ನಿಲುವು-ನಿರೂಪಣೆಯಲ್ಲಿನ ತಾಜಾತನ-ಭಾಷೆಯ ಬಳಕೆಯಲ್ಲಿನ ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತದೆ. ಇದೊಂದು ಅಪರೂಪದ ಮತ್ತು ಮಹತ್ವದ ಕೃತಿ. ಜೀವಪರ ನಿಲುವು- ಜನಪರ ಯೋಚನಾಕ್ರಮಗಳೆರಡೂ ಹದವಾಗಿ ಬೆರೆತಿವೆ. ’ಅನುದಿನದ ದಂದುಗ’ದಲ್ಲಿನ ೫೧ ಲೇಖನಗಳು ವಿಷಯ ವೈವಿಧ್ಯದಿಂದ ಗಮನ ಸೆಳೆಯುತ್ತವೆ. ದಿನಪತ್ರಿಕೆಯಲ್ಲಿ ಪ್ರಕಟವಾದ ಅಂಕಣ ಬರಹಗಳಾಗಿರುವುದರಿಂದ ಸಹಜವಾಗಿಯೇ ವರ್ತಮಾನದ ಹಂಗಿಗೂ ಒಳಗಾಗಿವೆ. ಆದರೆ, ಆ ಹಂಗನ್ನು ಲೇಖಕಿಯು ಮೀರುವ ಕ್ರಮವು ವಿಭಿನ್ನವಾಗಿದೆ. ವರ್ತಮಾನದ ಎಳೆಯಿಂದ ಆರಂಭವಾಗುವ ಬರವಣಿಗೆಯು ಕೇವಲ ಅಷ್ಟಕ್ಕೇ ಸೀಮಿತವಾಗುವುದಿಲ್ಲ. ಅದರಿಂದಾಚೆಗೆ ತನ್ನ ಚಾಚುಗಳನ್ನು ಹರಡಿಕೊಳ್ಳುತ್ತದೆ. ಭಾವನಾತ್ಮಕ ಎನ್ನಿಸುವ ಸಂಗತಿಗಳು ವೈಚಾರಿಕ ಸ್ಪಷ್ಟತೆಯೊಂದಿಗೆ ಅನಾವರಣಗೊಳ್ಳುವ ಕ್ರಮ ಮೆಚ್ಚುಗೆಗೆ ಪಾತ್ರವಾಗದೇ ಇರದು.

ಬರಹಗಳಲ್ಲಿ ’ಸ್ತ್ರೀ’ ಕೇಂದ್ರದಲ್ಲಿ ಇರುವವಳಾದರೂ ಅವು ಕೇವಲ ಘೋಷಣೆ- ಸೈದ್ಧಾಂತಿಕ ಶುಷ್ಕತೆಗೆ ಒಳಗಾಗಿಲ್ಲ. ಬಾಲ್ಯದ ನೆನಪುಗಳು- ಅನುಭವದ ಹಿನ್ನೆಲೆಯಲ್ಲಿ ದಾಖಲಿಸುವ ಅಭಿಪ್ರಾಯಗಳು ಓದಿನ ಖುಷಿಗೆ ಕಾರಣವಾಗುತ್ತವೆ. ನವಿರಾದ ಭಾಷೆಯ ಬಳಕೆ ಹಾಗೂ ವಿಷಯವನ್ನು ಪ್ರಸ್ತುತ ಪಡಿಸುವ ವಿಧಾನಗಳು ’ಸಾಹಿತ್ಯೇತರ’ ಸಾಮಾನ್ಯ ಓದುಗನಿಗೂ ಅರ್ಥವಾಗುವ ಹಾಗಿವೆ. ಬರವಣಿಗೆಯು ಬುದ್ಧಿ-ಭಾವಗಳೆರಡನ್ನೂ ಬೆಸೆದಿರುವುದರಿಂದ ಬರೆಹಗಳ ಮಹತ್ವ ಹೆಚ್ಚುವುದಕ್ಕೆ ಕಾರಣವಾಗಿದೆ. ಕಾಳಜಿ-ಕಕ್ಕೂಲಾತಿಗಳು ಹೊರೆಯಾಗಿ ಬಿಡುವ ’ಅಪಾಯ’ ಇದ್ದೇ ಇದೆ. ಹಲವು ಕಡೆಗಳಲ್ಲಿ ಅಪ್ರಜ್ಞಾಪೂರ್ವಕವಾಗಿ ಅದು ಆಗಿದೆ ಕೂಡ. ಅದು ಢಾಳಾಗಿ ಎದ್ದು ಕಾಣುವುದಿಲ್ಲ ಎಂಬುದು ಸಮಾಧಾನಕರ ಅಂಶ. ಕವಿತೆಯ ಭಾವ ಮತ್ತು ಗದ್ಯದ ಲಯಗಳೆರಡನ್ನೂ ಹಿಡಿವ ಪ್ರಯತ್ನವನ್ನು ವಿನಯಾ ಅವರು ಯಶಸ್ವಿಯಾಗಿ ಮಾಡಿದ್ದಾರೆ. ’ಅವಸರ’ದ ಬರಹಗಳ ಮಿತಿಯನ್ನು ಮೀರುವುದಕ್ಕೆ ಬಳಸಿಕೊಳ್ಳುವ ಕಥನ ವಿಧಾನ ಪ್ರಿಯವಾಗದೇ ಇರದು.

About the Author

ವಿನಯಾ ಒಕ್ಕುಂದ
(24 October 1968)

ವಿನಯಾ- ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ, ಕುಮಟಾ ತಾಲೂಕಿನ ನಾಡುಮಾಸ್ಕೇರಿಯಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ 1990ರಲ್ಲಿ ಕನ್ನಡ ಎಂ.ಎ, 1992ರಲ್ಲಿ ಎಂ.ಫಿಲ್. ಹಾಗೂ 1996ರಲ್ಲಿ ಪಿಎಚ್.ಡಿ ಪದವಿ ಪಡೆದಿದ್ದು, ಸವಣೂರು, ನರಗುಂದದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಧ್ಯ ಧಾರವಾಡ ಜಿಲ್ಲೆಯ ಅಳ್ಳಾವರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ವಿನಯಾ ಅವರ ಕವನ ಸಂಕಲನಗಳು: ಬಾಯಾರಿಕೆ, ನೂರು ಗೋರಿಯ ದೀಪ, ಹಸಬಿ, ಇನ್ನೂ ಕಥಾ ಸಂಕಲನಗಳು: ಊರ ...

READ MORE

Awards & Recognitions

Reviews

ಸುಣ್ಣಕ್ಕೆ ಬೆರೆಸಿದ ತಣ್ಣನೆಯ ನೀರು

ಇಂದಿನ ಬದುಕನ್ನು ಗಾಢವಾಗಿ ಕಲುಕುತ್ತಿರುವ ಅಂಶ ಯಾವುದು? ಬಹುಶಃ ಇದು ಯಾರಿಗೂ ಸ್ಪಷ್ಟವಿರದ ಕಾಲವಿದು. ಎಲ್ಲ ಕ್ಷೇಮವಾಗಿದ್ದಾರೆ, ಸಂಸದೆ - ನಾವು ಮಾತ್ರ ಕನಲುತ್ತಿದ್ದೇವೇನೋ ಎಂದು ನಮ್ಮ ಬಗ್ಗೆ ನಮಗೇ ಸಂಶಯ ಬರುವ ಕಾಲವೂ ಹೌದು. ಶ್ರೀಮಂತರ ಮನೆಯ ಮಕ್ಕಳ ಮದುವೆ ಕಾಗದಕ್ಕೇ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದನ್ನು ಸಂಭ್ರಮಿಸುವವರ ನಡುವೆ ಅದೆಲ್ಲ ಸರಿಯಲ್ಲ ಎಂದೇನಾದರೂ ನಾವುಗಳು ಹೇಳಿದರೆ ಇವರಿಗೆ ಎಲ್ಲದರಲ್ಲೂ ಹುಳುಕೇ ಕಾಣುವುದು ಎಂಬ ಗೊಣಗುವಿಕೆ ಕೇಳಿಸುತ್ತದೆ. ಯಾಕೆಂದರೆ, ಬಡವರೂ ಕೂಡ ಆ ಮದುವೆ ಕಾಗದ ನೋಡಿ 'ಸೂಪರ್' ಎಂದು ಸರ್ಟಿಫಿಕೇಟ್ ಕೊಡುತ್ತಾ ಕಣ್ಣುಗಳಲ್ಲಿ ಕನಸುಗಳನ್ನು ತುಳುಕಿ ಬಿಡುತ್ತಿರುತ್ತಾರೆ. ಅಂದರೆ, ನಮ್ಮ ಕನಸುಗಳನ್ನೇ ಹೈಜಾಕ್ ಮಾಡಲಾಗಿದೆ ಎಂದೇ ಅರ್ಥ. ತರಗತಿಯಲ್ಲೊಮ್ಮೆ ಸರಳ ವಿವಾಹದ ಕುರಿತ ಕವಿತೆಯೊಂದನ್ನು ಓದಿದಾಗ ಒಬ್ಬಳು ಹುಡುಗಿ ಮುಖ ಹುಳ್ಳಗೆ ಮಾಡಿಕೊಂಡಳು. ಯಾಕಮ್ಮಾ? ಎಂದು ಕೇಳಿದಾಗ, 'ಹೋಗಿ ಮೇಡಂ, ನಾನಂಥ ಗ್ರಾಂಡ್ ಆಗಿ ಮದುವೆ ಆಗಬೇಕು' ಅಂದಳು. ಅವಳು ಕೆಳ ಮಧ್ಯಮ ವರ್ಗಕ್ಕೆ ಸೇರಿದ ಹೆಣ್ಣುಮಗಳು. ಈ ರೀತಿ ಕನಸುಗಳನ್ನು ಬದಲಿಸುವಲ್ಲಿ ದೃಶ್ಯ ಮಾಧ್ಯಮಗಳ ಪಾತ್ರ ಬಹಳ ಹಿರಿದು. ನಾವು ದಿನ ಬೆಳಗಾದರೆ ಮನಸ್ಥಿತಿಯ ಬದಲಾವಣೆಯ ಕುರಿತು ಮಾತನಾಡುತ್ತಿದ್ದರೆ, ಇತ್ತ ಇನ್ನೊಂದು ಕಡೆಯಿಂದ ಬಹಳ ವೇಗವಾಗಿ ಮನಸ್ಥಿತಿಗಳನ್ನು ರೂಪಿಸಲಾಗುತ್ತಿದೆ. ವೈಚಾರಿಕತೆಯೆಂಬುದು ನಮ್ಮೊಳಗೆ ಇಳಿದು ಕುಳಿತಾಗ ನಮಗೆ ಸುತ್ತಲಿನ ಈ ಮನಸ್ಥಿತಿಗಳನ್ನು ರೂಪಿಸುತ್ತಿರುವವರು ಯಾರು, ಯಾಕೆ ಎಂಬುದೂ ಎದ್ದು ಕಾಣುವುದರಿಂದಾಗಿ, ಅರಿವು ನಮ್ಮ ಗುರುವಾಗುವ ಬದಲಿಗೆ ನಮ್ಮ ವೇದನೆಯಾಗುತ್ತಿರುವುದು ಈ ಕಾಲದ ದುರಂತವಾಗಿದೆ. ಇಂತಹ ಸ್ಥಿತಿಗಳಿಗೆ ಕನ್ನಡಿ ಹಿಡಿದಂತೆ ವಿನಯಾ ಒಕ್ಕುಂದರ 'ಅನುದಿನದ ದಂದುಗ' ಕೃತಿ ಇದೆ. 

ಇದು ಐವತ್ತೊಂದು ಅಂಕಣ ಬರಹಗಳ ಸಂಕಲನ. ದಿನ ಪತ್ರಿಕೆಗೆ ವಾರಕ್ಕೊಮ್ಮೆ ಬರೆಯುತ್ತಿದ್ದ ಅಂಕಣವು ತನ್ನ ಸುತ್ತಲಿನ ಘಟನೆಗಳನ್ನು, ಸಂಗತಿಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತದೆ. ಆಧುನಿಕತೆ ಎಂಬ ಅಲೆಯು ಹೊಸ ಹೊಸ ಜೀವನೋಪಾಯಗಳನ್ನೂ, ತಂತ್ರಜ್ಞಾನಗಳನ್ನೂ ತಂದು ದಡಕ್ಕೆ ಎಸೆಯುತ್ತಿರುವಂತೆಯೇ ಹೊಸ ಹೊಸ ಶೋಷಣೆಯ ಅಸ್ತ್ರಗಳನ್ನೂ ಶೋಧಿಸಿಕೊಡುತ್ತಿರುತ್ತದೆ. ಗುಜ್ಜರ್ ಮದುವೆ ಎಂಬುದನ್ನೇ ನೋಡಬಹುದು. ಈ ದೇಶದಲ್ಲಿ ಹೆಣ್ಣಿನ ಮದುವೆ ಎಂಬುದು ಅವಳ ಹುಟ್ಟಿನೊಂದಿಗೆ ತಳುಕು ಹಾಕಿಕೊಂಡು ಅವಳ ಭವಿಷ್ಯವನ್ನು ನಿರ್ಧರಿಸುವ ಖಳನಂತೆ ವ್ಯವಹರಿಸುತ್ತದೆ. ಹೀಗಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅವಳ ಹುಟ್ಟನ್ನು ಹೊಸಕಿ ಹಾಕಿದವರಿಗೆ ಅವಳಿಲ್ಲದೇ ಬಾಳುವುದು ಸಾಧ್ಯವಿಲ್ಲ ಎಂಬ ತಿಳುವಳಿಕೆಯೇ ಇರುವುದಿಲ್ಲ. ಹೆಣ್ಣುಮಕ್ಕಳ ತೀವ್ರ ಕೊರತೆ ಅನುಭವಿಸಿದವರು ತಮಗೆ ಬೇಕಾದಂತೆ ಎಲ್ಲ ಸಂಪ್ರದಾಯಗಳನ್ನೂ ತಿರುಚಬಲ್ಲರು. ಉತ್ತರ ಕರ್ನಾಟಕದ ಕಡುಬಡ ಹೆಣ್ಣುಮಕ್ಕಳನ್ನು ಗುಜ್ಜರ್ ಮದುವೆಯ ಹೆಸರಿನಲ್ಲಿ ಅಪಹರಿಸಲಾಗುತ್ತಿದೆ. ಅಲ್ಲಿ ಅವಳನ್ನು ಇಡೀ ಮನೆಗೇ ವಧು ಮಾಡಲಾಗುತ್ತಿದೆ. ವಧು ಎಂಬ ಸುಂದರ ಹೆಸರಿನಲ್ಲಿ ಅವಳನ್ನು ಬಲವಂತದಿಂದ ವೇಶೈಯಾಗಿಸಲಾಗುತ್ತಿದೆ. ಇದನ್ನೆಲ್ಲಾ ಕಾನೂನಿನ ಕುಣಿಕೆಗೆ ಸಿಗದಂತೆ ನಿರ್ವಹಿಸಲಾಗುತ್ತಿದೆ. ಇದಕ್ಕಿಂತ ಕುಡುಕನೋ, ಸಿಡುಕನೋ ಯಾವನೋ ಒಬ್ಬ ಇಲ್ಲಿನವನೇ ಸಿಕ್ಕಿ ಬಿಟ್ಟರೆ ಅದೊಂದು ಪುಣ್ಯಪ್ರಾಪ್ತಿ ಎನಿಸುವ ಈ ವಿದ್ಯಮಾನವನ್ನು ಹೇಗೆಂದು ವಿವರಿಸುವುದು? ಇಂತಹ ಸಂಕಟಗಳಿಗೆ ಕನಿಷ್ಟ ತನ್ನೊಂದು ನಿಟ್ಟುಸಿರನ್ನಾದರೂ ಸೇರಿಸುವ ಪ್ರಯತ್ನದಂತೆ ವಿನಯಾ ಬರೆಯುತ್ತಾರೆ.

ಆಧುನಿಕ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಗೆ ಕಣ್ಣು, ಕಿವಿಗಳು ಇಲ್ಲ. ಹೃದಯವಂತೂ ಇಲ್ಲವೇ ಇಲ್ಲ. ಅದಕ್ಕಿರುವುದು ಬಕಾಸುರನ ಹೊಟ್ಟೆ ಮಾತ್ರ. ಆ ಹೊಟ್ಟೆ ತಾನು ಏನು ಮಾಡಿದರೂ ಸಮರ್ಥಿಸಿಕೊಳ್ಳಬಲ್ಲ ಹೊಸ ಪುರಾಣಗಳನ್ನು ಸೃಷ್ಟಿಸುತ್ತದೆ. ಈ ಹೊಸ ಪುರಾಣಗಳೊಂದಿಗೆ ಸೆಣಸಾಡಲು ಸಾಧ್ಯವಾಗದಂತೆ ಆ ಹಸಿವನ್ನೂ ನಮ್ಮೊಳಗೆ ವರ್ಗಾಯಿಸುವ ಹಲವು ಹತಾರುಗಳನ್ನು ಅದು ಸೃಷ್ಟಿಸಿದೆ. ಸದಾ ಅಭದ್ರತೆಯಲ್ಲೇ ಇರಬೇಕಾದ ಉದ್ಯೋಗ ವ್ಯವಸ್ಥೆಯೊಳಗೆ ಇದು ಸಲೀಸು. ಮಾಧ್ಯಮಗಳೇಕೆ ತನ್ನ ನೈತಿಕತೆಗಳನ್ನು ಮಾರಿಕೊಳ್ಳುತ್ತಿವೆ? ಮತ್ತು ಅದನ್ನು ನೋಡುಗರಿಗೂ, ಓದುಗರಿಗೂ ದಾಟಿಸುತ್ತಿದೆಯೆಂದರೆ ಅದು ಬಕಾಸುರ ಹಸಿವೆಯ ರೋಗವನ್ನು ತಗುಲು ಹಾಕಿಕೊಂಡಿದೆ. ಈ ಕಾರಣದಿಂದಾಗಿ ಇಂದು ಸತ್ಯವು ಸುಳ್ಳಾಗಿಯೂ ಸುಳ್ಳುಗಳು ನಿಜವಾಗಿಯೂ ಗೋಚರವಾಗುವ ಮಾಯಾ ವಿದ್ಯೆಯನ್ನು ಪ್ರಚುರ ಪಡಿಸಲಾಗುತ್ತಿದೆ. ಅದಕ್ಕೆ ಧರ್ಮ, ಸಂಪ್ರದಾಯ, ಭಕ್ತಿ, ದೇಶಭಕ್ತಿ, ಬಹುಸಂಖ್ಯಾತ ಇನ್ನೂ ಏನೇನೋ ಹೆಸರುಗಳನ್ನು ನೀಡಲಾಗುತ್ತಿದೆ. ಇವು ಹೆಸರುಗಳು ಮಾತ್ರ ವಿಷಯಗಳಲ್ಲ. ಈ ಸಂಕಲನದಲ್ಲಿರುವ ಹಲವು ಲೇಖನಗಳು ಈ ಹಿನ್ನೆಲೆಯಲ್ಲಿವೆ. ಮಿಲ್ಲಿ ಎಂಬ ಉದ್ಯೋಗವೂ..., ಮನೆಯ ಅಂಗಳವೀಗ ಮಾಯಾಬಜಾರು, ಸೌಲಭ್ಯವೆಂಬ ಸಂಕೋಲೆಯಲ್ಲಿ, ಮೌಡ್ಯವೆಂಬ ನಿರಂತರ ಉತ್ತಾತ, ಏನಾಗಿದೆ ನನ್ನ ಧಾರವಾಡಕ್ಕೆ?, ಕೂಡು ಬದುಕು ಮತ್ತು ಕಲ್ಪಿತ ವೈರ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?, ಹಣಕ್ಕೆ ಹೀರಿಕೊಳ್ಳುವ ಗುಣವಿದೆ, ಹುಷಾರು, ಊರೂರುಗಳೀಗ ವೃದ್ದಾಶ್ರಮಗಳು, ಆಳುತ್ತಿವೆ ಜಾಹೀರಾತುಗಳು. . . ಹೀಗೆ.

ಸಂಕಲನದಲ್ಲಿ ಅತಿ ಹೆಚ್ಚು ಚರ್ಚೆಯಾಗಿರುವುದು ಹೆಣ್ಣೂಡಲ ಅಳಲುಗಳು, ಮಾತಾಡಿದಷ್ಟೂ ಮುಗಿಯದ, ಮುಳುಗಿದಷ್ಟೂ ಆಳವಾಗಿರುವ ಈ ವಿಚಾರಗಳು ಬಹುಶಃ ಹೇಳುವವರಲ್ಲೇ ಬಳಲಿಕೆ ಉಂಟು ಮಾಡುತ್ತವೆಯೇ - ಹೊರತು, ಸಾಮಾಜಿಕ ಬದಲಾವಣೆಗಳನ್ನು ಸುಮಧುರಗೊಳಿಸುವೆಡೆಗೆ ಹೆಜ್ಜೆ ಹಾಕುತ್ತದೆ ಎಂದು ನಿರೀಕ್ಷಿಸುವುದು ದುಸ್ತರ ಎಂಬಂತಾಗಿದೆ. ಮನೆಯ ಅಂಗಳಕ್ಕೆ ಕಾಲಿಡುವುದೂ ಲಜ್ಜೆಗೇಡಿತನವೆನಿಸಿಕೊಂಡ ಕಾಲದಿಂದ ಸ್ವಲ್ಪ ಮುಂದಕ್ಕೆ ಬಂದಿದ್ದೇವಾದರೂ ಹೆಣ್ಣು ಗದರಿಕೆಗೆ, ಬೆದರಿಕೆಗೆ ಈಡಾಗುವುದು ನಿಂತಿಲ್ಲ. ಬದಲಿಗೆ ಈ ಬೆದರಿಕೆಗಳು ಹೊಸ ರೂಪ ಧರಿಸಿವೆ. ಈ ನಡುವೆ ಹೆಣ್ಣನ್ನು ಬಂಡವಾಳಶಾಹಿ ಮೌಲ್ಯಗಳಿಗೆ ಸಲೀಸಾಗಿ ಬಗ್ಗಿಸಲಾಗುತ್ತಿದೆ. ಈ ಕುರಿತು ವಿನಯಾ ಆತಂಕ ವ್ಯಕ್ತಪಡಿಸುತ್ತಾರೆ. ಕೊಂಡ ಹಾದೂ ಕನಸು ಕಾಣುತ್ತಿದ್ದ ಹೆಣ್ಣಿನ ಪ್ರಜೆಯ ಮೇಲೆ ನಾಗರಿಕ ಸವಲತ್ತುಗಳು ದಾಳಿ ಮಾಡಿ ಗಂಡು ಮಾದರಿಗಳು ಅವಳು ಜೋಲುವ ಅಪಾಯಗಳ ಬಗೆಗೆ ಎಚ್ಚರಿಸುತ್ತಾರೆ. ಸೌಲಭ್ಯದ ಸಂಕೋಲೆಗಳಿಂದ ಅವಳನ್ನು ಬಂಧಿಸುವುದರೆಡೆಗಿನ ಅವಳ ಅವಜ್ಞೆಯೆಡೆಗೆ ಬೆರಳು ತೋರುತ್ತಾರೆ. ಅದೇ ಹೊತ್ತಿಗೆ ಹೆಣ್ಣಿಗೆ ಸೀಮಿತಗೊಳಿಸಿದ ತಾಯಿಪ್ರಜ್ಞೆ ಗಂಡಿಗೂ ವಿಸ್ತರಿಸಿ ಲೋಕಪ್ರಜ್ಞೆಯಾಗಬೇಕೆಂದು ಒತ್ತಾಯಿಸುತ್ತಾರೆ.

ನಿಜ, ಒಂದು ಆಯಾಸ ಇಲ್ಲಿನ ಲೇಖನಗಳನ್ನು ಒಟ್ಟಿಗೇ ಓದಿದಾಗ ಆಗುತ್ತದೆ. ಅದು ಓದಿನದ್ದಲ್ಲ. ಲೋಕದ ದಂದುಗದೆಡೆಗಿನ ಆಯಾಸ, ಬದುಕಿನ ಒಂದು ಮಗ್ಗುಲಿನೆಡೆಗಿನ ಒಳಗುದಿಯ ದರ್ಶನ ಇಲ್ಲಿದೆ. ಇದು ದಿಟವಾದರೂ ಅಲ್ಲಲ್ಲಿ ಇನ್ನೊಂದು ಮಗ್ಗುಲೂ ಮುಖ ತೋರಿದ್ದರೆ ನಮ್ಮೊಳಗೊಂದು ಆಶಾವಾದವನ್ನು ಹುಟ್ಟುಹಾಕಲು ದೀಪವಾಗಿ ಸಹಕರಿಸೀತೇನೋ. ಇಲ್ಲಿ “ಮಾಡುವೆನೆಂಬುದು ಮನದಲಿ ಬಂದಡೆ' ಎಂಬ ಬರಹ ನನಗೆ ಆ ದೃಷ್ಟಿಯಿಂದ ಮುಖ್ಯವೆನಿಸುತ್ತದೆ. ಈ ಲೇಖನದ ಕೊನೆಯ ಪ್ಯಾರಾಗ್ರಾಫ್‌ನ್ನು ಬಿಟ್ಟುಬಿಟ್ಟರೆ ಅದರ ಶಕ್ತಿ ಇನ್ನಷ್ಟು ಹೆಚ್ಚುತ್ತದೆ. ಲೋಕದ ದಾರಿ ತಾನಾಗಿ ಕಾಣುತ್ತದೆ ಅನ್ನಿಸುತ್ತದೆ.

-ಡಾ. ಸಬಿತಾ ಬನ್ನಾಡಿ

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ಪತ್ರಿಕೆ (ಡಿಸೆಂಬರ್‍ 2018)

Related Books