ಕೆ.ಪಿ. ಸುರೇಶ್ ಅವರ ಅಂಕಣ ಬರಹಗಳ ಸಂಕಲನ ’ಅಗೇಡಿ’ಯು ವಿಷಯ ಆಯ್ಕೆ ಮತ್ತು ಪ್ರಸ್ತುತ ಪಡಿಸುವ ವಿಧಾನಗಳಿಂದಾಗಿ ಗಮನ ಸೆಳೆಯುತ್ತದೆ. ಅಗೇಡಿಯ ಬರಹಗಳು ದಿನಪತ್ರಿಕೆಯೊಂದಕ್ಕೆ ಬರೆದ ಅಂಕಣದ ಸಂಕಲನದಲ್ಲಿ ಸಮ್ಮಿಳಿತಗೊಂಡಿವೆ. ಸಾಮಾನ್ಯ ಓದುಗನನ್ನು ಗಮನದಲ್ಲಿಟ್ಟುಕೊಂಡು ಬರೆದರೂ ಆ ಕಾರಣಕ್ಕಾಗಿ ಈ ಸಂಕಲನದ ಲೇಖನಗಳು ತೆಳುವಾಗದೇ ತಮ್ಮ ಗಾಢತೆಯನ್ನು ಉಳಿಸಿಕೊಂಡಿವೆ. ಈ ಸಂಕಲನದಲ್ಲಿ ಇರುವ ೪೫ ಲೇಖನಗಳ ಪೈಕಿ ಬಹುತೇಕ ಬರೆಹಗಳು ಕೃಷಿ ಮತ್ತು ಅದು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಕುರಿತವುಗಳು.
ಕೃಷಿ ಇಲ್ಲಿನ ಬರೆಹಗಳ ಕೇಂದ್ರವಾಗಿದ್ದರೂ ಅವು ಕೇವಲ ಕೃಷಿಗೆ ಮಾತ್ರ ಸೀಮಿತವಾಗದೇ ಅಭಿವೃದ್ಧಿ ಚಿಂತನೆ, ಬದಲಾವಣೆ-ಬೆಳವಣಿಗೆ ಸಾಗಬೇಕಾದ ರೀತಿ, ಕಂಡುಕೊಳ್ಳಬೇಕಾದ ದಾರಿಗಳ ಕುರಿತು ನಡೆಸಿದ ಚಿಂತನೆಯ ಫಲಿತಗಳಾಗಿವೆ. ಆಧುನಿಕತೆಯ ಸವಾಲು ಎದುರಿಸುತ್ತಿರುವ ಕೃಷಿಯ ಬಿಕ್ಕಟ್ಟುಗಳನ್ನು ಕುರಿತು ಬರೆಯುವಾಗ ಲೇಖಕರು ಅದನ್ನು ಕುರಿತು ಗೋಳಿನ ಕತೆಯಾಗಿಸುವುದಿಲ್ಲ. ಕೃಷಿ ಬಗೆಗಿನ ಕಾಳಜಿಯು ಕೇವಲ ತೋರಿಕೆಯ ಸ್ವರೂಪದಲ್ಲಿ ಉಳಿಯದೇ ಅದನ್ನು ಕಾಳಜಿ-ಅಭಿಮಾನ ಹಾಗೂ ವೈಚಾರಿಕ ಸ್ಪಷ್ಟತೆಯಿಂದ ಎದಿರಾಗುತ್ತಾರೆ. ಇಲ್ಲಿನ ಬರಹಗಳು ಬಿಡಿಬೀಸಾದ ಹೇಳಿಕೆಗಳಾಗದೇ ಸೂಕ್ತ-ಸಮಂಜಸ ಅಂಕಿ-ಅಂಶಗಳನ್ನು ಒಳಗೊಂಡು ಮನವರಿಕೆ ಮಾಡುತ್ತವೆ.
ಸುಸ್ಥಿರ ಕೃಷಿ ಮತ್ತು ಸುಸ್ಥಿರ ಬದುಕುಗಳೆರಡೂ ಕೇಂದ್ರ ಕಾಳಜಿಗಳಾಗಿರುವ ಇಲ್ಲಿನ ಬರಹಗಳು ಕಾಳಜಿ- ನೀಡುವ ಒಳನೋಟಗಳಿಂದಾಗಿ ವರ್ತಮಾನದ ಹಂಗಿನೊಳಗೆ ಸಿಲುಕಿಲ್ಲ. ಕೃಷಿಯನ್ನು ತಾಂತ್ರಿಕವಾಗಿ, ಮಾರುಕಟ್ಟೆಯ ದೃಷ್ಟಿಯಿಂದ, ಸರ್ಕಾರಿ ವ್ಯವಸ್ಥೆಯ ದೃಷ್ಟಿಯಿಂದ, ರಾಜಕೀಯ ದೃಷ್ಟಿಕೋನದಿಂದ ನೋಡಿರುವ ಹಲವು ನೆಲೆಯ ಮೂಲಕ ಪ್ರವೇಶಿಸುವ ಕ್ರಮ ಇಲ್ಲಿನ ಬರಹಗಳನ್ನು ಗಟ್ಟಿಗೊಳಿಸಿದೆ. ಕವಿ-ಅನುವಾದಕ ಸುರೇಶ್ ಅವರು ತಾವೊಬ್ಬ ಅಪರೂಪದ ಚಿಂತಕ ಎಂಬುದನ್ನು ಈ ಸಂಕಲನದ ಬರಹಗಳ ಮೂಲಕ ಸಾಬೀತು ಪಡಿಸಿದ್ದಾರೆ. ಇದು ಅಪರೂಪದ ವಿಶಿಷ್ಟ ಪುಸ್ತಕ.
©2024 Book Brahma Private Limited.