ಕತೆಗಾರ, ಲೇಖಕ ಟಿ.ಕೆ. ದಯಾನಂದ್ ಅವರು ಹುಟ್ಟಿದ್ದು ತುಮಕೂರಿನ ದೊಡ್ಡಹಟ್ಟಿಯಲ್ಲಿ, ಬಿ.ಎ.ವರೆಗೆ ತುಮಕೂರಿನಲ್ಲಿ ವ್ಯಾಸಂಗ ಮಾಡಿದ ಅವರು ಬೆಂಗಳೂರಿನಲ್ಲಿ ಸಮೂಹ ಸಂವಹನ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ವಾರ್ತಾಭಾರತಿ ದಿನಪತ್ರಿಕೆಯಲ್ಲಿ ವರದಿಗಾರರಾಗಿದ್ದರು. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಸಂಶೋಧಕರಾಗಿ ನಗರದ ಬಡಜನರ ಕುರಿತಂತೆ ಅಧ್ಯಯನ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ, ಚಿತ್ರಕಥೆಗಾರ, ಸಂಭಾಷಣಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣವಾಗಿ ಪ್ರಕಟಗೊಂಡ 'ರಸ್ತೆ ನಕ್ಷತ್ರ' ಇವರ ಮೊದಲ ಕೃತಿ, ಕರ್ನಾಟಕ ರಾಜ್ಯದ ಮಲ ಹೊರುವವರ ಕುರಿತ ಅಧ್ಯಯನ ಮತ್ತು ಮೀಡಿಯಾ ಆಕ್ಟಿವಿಸಂ ಮೂಲಕ ಅದನ್ನು ಜಗತ್ತಿನೆದುರು ಬಯಲಿಗೆಳೆದುದಕ್ಕಾಗಿ ಇತ್ತೀಚೆಗೆ ಪಿ. ಸಾಯಿನಾಥ್ ಅವರು ಸ್ಥಾಪಿಸಿರುವ ಕೌಂಟರ್ ಮೀಡಿಯಾ ಅವಾರ್ಡ್ ಪಡೆದಿದ್ದಾರೆ. ಓದುವುದು, ಸಿನೆಮಾ ಸಂಗ್ರಹಣೆ, ಬರವಣಿಗೆ ಮತ್ತು ಕಾಡು ತಿರುಗುವುದು ಇವರ ಹವ್ಯಾಸ.