ಅಮ್ಮಸಂದ್ರ ಸುರೇಶ್ ಅವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಅಮ್ಮಸಂದ್ರದವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರು ಅಮ್ಮಸಂದ್ರ ಪೂರೈಸಿ, ಪದವಿ (ಪತ್ರಿಕೋದ್ಯಮ,ಮನೋವಿಜ್ಞಾನ ಮತ್ತು ಐಚ್ಛಿಕ ಕನ್ನಡ)-ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು, ತುಮಕೂರಿನಲ್ಲಿ, ಹಾಗೂ ಸ್ನಾತಕೋತ್ತರ ಪದವಿ ಮಾಸ್ಟರ್ ಆಫ್ ಸೈನ್ಸ್ ಇನ್ ಕಮ್ಯುನಿಕೇಷನ್ಸ್, ಬೆಂಗಳೂರು ವಿಶ್ವವಿದ್ಯಾಲ ಪೂರ್ಣಗೊಳಿಸಿದರು.
ಪಿ,ಹೆಚ್ ಡಿಯನ್ನು ಮಾಧ್ಯಮ ತಜ್ಞರಾದ ಪ್ರೊ.ಎನ್ ಉಷಾರಾಣಿಯವರ ಮಾರ್ಗದರ್ಶನದಲ್ಲಿ “ಕನ್ನಡ ದಿನಪತ್ರಿಕೆಗಳಲ್ಲಿ ಕೃಷಿ ವರದಿ ಹಾಗೂ ಇನ್ನಿತರೆ ಬರಹಗಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ” ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸುವ ಮೂಲಕ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ 2013ರಲ್ಲಿ ಪಿ.ಹೆಚ್ ಡಿ ಪಡೆದುಕೊಂಡರು.
ವೃತ್ತಿಯಲ್ಲಿ ಅಂಚೆ ಇಲಾಖೆಯಲ್ಲಿ ಅಂಚೆ ಸಹಾಯಕ. ಪ್ರವೃತ್ತಿಯಲ್ಲಿ ಲೇಖಕ, ಅಂಕಣಕಾರ, ಮಾಧ್ಯಮ ವಿಶ್ಲೇಷಕ, ಹವ್ಯಾಸಿ ಅಭಿವೃದ್ಧಿ ಪತ್ರಕರ್ತ, ಪತ್ರಿಕೋದ್ಯಮ ಮತ್ತು ಕೃಷಿ ಪತ್ರಿಕೋದ್ಯಮ ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿ ಹಾಗೂ ಸಂಘಟಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪತ್ರಿಕೋದ್ಯಮ ಸೇವೆ :
ಪದವಿಯಲ್ಲಿ ಪತ್ರಿಕೋದ್ಯಮವನ್ನು ವ್ಯಾಸಂಗ ಮಾಡುತ್ತಿರುವಾಗಲೇ 1991ರಲ್ಲಿ “ಸುದ್ದಿ ಸವಾಲು” ಎಂಬ ವಾರಪತ್ರಿಕೆಯನ್ನು ಆರಂಭಿಸುವ ಮೂಲಕ ಪತ್ರಿಕಾರಂಗ ಪ್ರವೇಶ. 1990 ರಿಂದ 1993ರವೆಗೂ ತುಮಕೂರು ಜಿಲ್ಲೆಯ ಪ್ರಮುಖ ವಾರಪತ್ರಿಕೆಯಾಗಿದ್ದ ಹಕ್ಕೋತ್ತಾಯ ವಾರಪತ್ರಿಕೆಗೆ ಅಂಕಣಕಾರರಾಗಿ ಸೇವೆ. 1994-1995ರಲ್ಲಿ ಬೆಂಗಳೂರಿನ ಉದಯವಾಣಿ ಪತ್ರಿಕಾ ಕಚೇರಿಯಲ್ಲಿ ಇಂಟರ್ನಿಪ್, 2000 ದಿಂದ 2003ರವರೆಗೂ ಹೆಗ್ಗಡದೇವನಕೋಟೆ ತಾಲ್ಲೂಕಿನ ಪ್ರಜಾವಾಣಿ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಣೆ. 2003 ರಿಂದ 2005ರವರೆಗೂ ರಾಜ್ಯ ಮಟ್ಟದ ದಿನಪತ್ರಿಕೆ ಜನವಾಹಿನಿ ದಿನಪತ್ರಿಕೆಯಲ್ಲಿ ಅಂಕಣಕಾರರಾಗಿ “ಮಾಧ್ಯಮ ವಿಶ್ಲೇಷಣೆ” ಎಂಬ ಶೀರ್ಷಿಕೆಯೊಂದಿಗೆ ಸುಮಾರು ಎರಡು ವರ್ಷಗಳಿಗೂ ಹೆಚ್ಚು ಸಮಯ ಅಂಕಣ ಬರಹ, ಪ್ರಸ್ತುತ ಉದಯಕಾಲ ದಿನಪತ್ರಿಕೆಯಲ್ಲಿ 'ತಿರುಗಾಟ' ಮತ್ತು ಹೈದರಾಬಾದ್ ಮತ್ತು ಕರ್ನಾಟಕದಿಂದ ಪ್ರಕಟವಾಗುವ 'ಶೋಧವಾಣಿ' ದಿನಪತ್ರಿಕೆಯಲ್ಲಿ 'ಹೆಮ್ಮೆಯ ನಾಡು' ಅಂಕಣಗಳನ್ನು ಬರೆಯುತ್ತಿದ್ದಾರೆ.
ಜೊತೆಗೆ ಮಾಧ್ಯಮ, ಕೃಷಿ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಕನ್ನಡದ ರಾಜ್ಯ ಮಟ್ಟದ ದಿನಪತ್ರಿಕೆಗಳಾದ ಪ್ರಜಾವಾಣಿ, ಉದಯವಾಣಿ, ವಿಶ್ವವಾಣಿ, ಉದಯಕಾಲ ಮತ್ತು ವಾರ್ತಾಭಾರತಿ ಪತ್ರಿಕೆಗಳಲ್ಲಿ ಮತ್ತು ವಿವಿಧ ನಿಯತಕಾಲಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದಾರೆ. ಕಳೆದ 32 ವರ್ಷಗಳಿಂದ ರಾಜ್ಯ ಮಟ್ಟದ ಪತ್ರಿಕೆಗಳಿಗೆ ಸತತವಾಗಿ ಲೇಖನಗಳನ್ನು ಬರೆಯುತ್ತಿರುವ ಅಮ್ಮಸಂದ್ರ ಸುರೇಶ್ ಅವರ 1500ಕ್ಕೂ ಹೆಚ್ಚು ಲೇಖನಗಳು ಇದುವರೆಗೂ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮಾಧ್ಯಮ, ಅಭಿವೃದ್ಧಿ, ಸಂಸ್ಕೃತಿ ಮತ್ತು ಕೃಷಿಗೆ ಮೀಸಲಾದ “ಮಾಧ್ಯಮ ಲೋಕ" ಎಂಬ ಯೂ ಟ್ಯೂಬ್ ವಾಹಿನಿಯನ್ನು ಮುನ್ನೆಡೆಸುತ್ತಿದ್ದಾರೆ. ಮುದ್ರಣ ಮಾದ್ಯಮ, ಅಂತರ್ ಜಾಲ ಪತ್ರಿಕೋದ್ಯಮ, ಸಾಮಾಜಿಕ ಮಾಧ್ಯಮ ಹೀಗೆ ಮಾಧ್ಯಮದ ಬಹುತೇಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ದೂರಶಿಕ್ಷಣ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಮತ್ತು ಕೃಷಿ ಪತ್ರಿಕೋದ್ಯಮ ವಿಷಯಗಳನ್ನು ಬೋಧಿಸುವ ಮೂಲಕ 2021ರಿಂದ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃತಿಗಳು :
ಕನ್ನಡ ದಿನಪತ್ರಿಕೆಗಳಲ್ಲಿ ಕೃಷಿ ಸುದ್ದಿ (2013) , ಡಾ.ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ (2020) ,ಕೊರೋನಾ ತಂದ ಅನಿವಾರ್ಯತೆಗಳು (2020) ,ಅಂಬೇಡ್ಕರ್ ಬೆಳಕಿನಲ್ಲಿ ಪತ್ರಿಕೋದ್ಯಮ (2021) ,ಅಭಿವೃದ್ಧಿಗಾಗಿ ಸಂವಹನ (2021) ,ದೀಮಂತ ಪತ್ರಕರ್ತ ಡಾ.ಬಿ.ಆರ್.ಅಂಬೇಡ್ಕರ್ (2021) ,ಮಹಾನಾಯಕನ ಮಹಾ ಕೊಡುಗೆಗಳು (2021) ,ನೆಲೆ ಇಲ್ಲದವರು (2022) ಪತ್ರಿಕೋದ್ಯಮದ ಹೊನ್ನಾರು ಎಳೆದವರು (2022) ,ಮಾಧ್ಯಮ : ಹಸಿ ಆಶಯ ಹುಸಿ ನಿರೀಕ್ಷೆ (2022) ,ಮಹಾ ಮಾನವತಾವಾದಿ (2022), ಅಸಮಾನತೆಯ ಉದಾರೀಕರಣ (2022) ,ಸಂವಿಧಾನ : ನಾಡಿಮಿಡಿತ-ಜನಮಿಡಿತ
ಪ್ರಶಸ್ತಿ-ಪುರಸ್ಕಾರಗಳು:
ಸಾಹಿತ್ಯ, ಲೇಖನ, ಹಿಂದುಳಿದ ವರ್ಗಗಳು, ಅಲೆಮಾರಿ ಸಮುದಾಯಗಳು ಸೇರಿದಂತೆ ಶೋಷಿತ ಮತ್ತು ಧಮನಿತ ಸಮುದಾಯಗಳ ಜನರ ಜಾಗೃತಿ, ಮಾಹಿತಿ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದಕ್ಕಾಗಿ ಸಂಘ-ಸಂಸ್ಥೆಗಳು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಅವುಗಳಲ್ಲಿ ಮಖ್ಯವಾದವುಗಳೆಂದರೆ,
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಕೊಡ ಮಾಡುವ 2022ರ "ವಿಶ್ವಮಾನವ ಪ್ರಶಸ್ತಿ. ಕರ್ನಾಟಕ ಹೊಯ್ಸಳ ಸಂಘ ಮತ್ತು ಸವಿಗನ್ನಡ ಪತ್ರಿಕೆಗಳು ಕೊಡಮಾಡುವ "ಹೊಯ್ಸಳ ಪ್ರಶಸ್ತಿ" ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಕೊಡ ಮಾಡುವ “ಸೇವಾ ಭೂಷಣ” ಮತ್ತು "ಕರುನಾಡ ರತ್ನ” ಪ್ರಶಸ್ತಿ. ತುರುವೇಕೆರೆ ನಾಗರಿಕ ವೇದಿಕೆ ಕೊಡ ಮಾಡುವ “ಬರಹಬ್ರಹ್ಮ" ಪ್ರಶಸ್ತಿ.