‘ಯಾವುದೇ ಒಂದು ವಿಷಯದ ಸೀಮಾರೇಖೆಗೆ ಬದ್ಧನಾಗದೆ ಚರಿತ್ರೆ, ಸಮಾಜಶಾಸ್ತ್ರ, ಮನಃಶಾಸ್ತ್ರ ಮತ್ತು ತತ್ವಶಾಸ್ತ್ರಗಳ ಮಿಶ್ರವಲಯದಲ್ಲಿ ಸಂಶೋಧನೆಗಳನ್ನು ನಡೆಸಿದವ ಫುಕೋ. 21ನೇ ಶತಮಾನದ ಮೊದಲ ದಶಕದಲ್ಲಿ ಮಾನವಿಕ ಸಂಶೋಧನೆಯಲ್ಲಿ ಅತಿ ಹೆಚ್ಚು ಉಲ್ಲೇಖಗೊಂಡಿರುವ ಫುಕೊ ‘ಸತ್ಯದ ಅಧ್ಯಯನವನ್ನು ಚರಿತ್ರೆಯ ಅಧ್ಯಯನದಿಂದ ಬೇರ್ಪಡಿಸಲಾಗದು’ ಎನ್ನುವ ನಿಲುವು ಹೊಂದಿದವ. ಅವನು ಅನುಸರಿಸಿದ ಸಂಶೋಧನಾ ವಿಧಾನಗಳು ತುಂಬಾ ಮಹತ್ವದವು ಎಂದು ಗುರುತಿಸಲಾಗುತ್ತದೆ. ಅದನ್ನು ತಾತ್ವಿಕ ಮನೋಧರ್ಮದ ಚಾರಿತ್ರಿಕ ಸಂಶೋಧನೆ ಎನ್ನಬಹುದು’ ಎಂದು ಓ.ಎಲ್. ನಾಗಭೂಷಣಸ್ವಾಮಿ ಅವರು ಮುನ್ನುಡಿಯಲ್ಲಿ ದಾಖಲಿಸಿದ್ದಾರೆ.
ತನ್ನ ಇಡೀ ಕಾರ್ಯವು ಸತ್ಯದ ಉತ್ಪಾದನೆಯ ಚಾರಿತ್ರಿಕ ಅನ್ವೇಷಣೆಯ ಮಹಾನ್ ಪ್ರಾಜೆಕ್ಟು ಎಂದು ಹೇಳಿಕೊಂಡಿದ್ದಾನೆ. ತಾತ್ವಿಕ ವಿಚಾರಗಳೂ ಸೇರಿದಂತೆ ವಿವಿಧ ವಿಚಾರಗಳು ಹೇಗೆ ರೂಪುಗೊಂಡವು ಅನ್ನುವುದರ ಚಾರಿತ್ರಿಕ ವಿವರಣೆ ನೀಡುತ್ತಾನೆ ಅವನು. ಇದು ಚರಿತ್ರೆಯ ಕಾಲಾನುಕ್ರಮ ನಿರೂಪಣೆಯಲ್ಲ, ಈಗ ಇರುವ ಸ್ಥಿತಿಗೆ ಹೇಗೆ ಅನಿವಾರ್ಯವಾಗಿ ತಲುಪಿದೆವು ಎನ್ನು ಕಥನವಲ್ಲ, ಕಾಲಧರ್ಮಕ್ಕೆ ಅನುಸಾರವಾಗಿ ವಿಚಾರಗಳು ರೂಪುಗೊಳ್ಳುತ್ತವೆಂಬ ನಂಬಿಕೆಯ ಚಾರಿತ್ರಿಕ ವಾದವೂ ಅಲ್ಲ. ನಮ್ಮ ವರ್ತಮಾನವನ್ನು ರೂಪಿಸುವ ವಿಚಾರಗಳನ್ನ ಅರ್ಥ ಮಾಡಿಕೊಳ್ಳುವುದು ಮತ್ತು ಚರಿತ್ರೆಯುದ್ದಕ್ಕೂ ಈ ವಿಚಾರಗಳು ನಿರ್ವಹಿಸುವ ಕಾರ್ಯದಲ್ಲಿ ಆದ ಬದಲಾವಣೆಗಳನ್ನು ಗುರುತಿಸುವುದು ಫುಕೋನ ಕ್ರಮ. ಫುಕೋನ ಅಧ್ಯಯನ ಕ್ರಮ 20 ಶತಮಾನದ ಮಾನವಿಕ ವಿಷಯಗಳ ಅಧ್ಯಯನಗಳನ್ನು ಪ್ರಭಾವಿಸಿದೆ.
ಜೀವನ ಹಾಗೂ ಬೌದ್ಧಿಕ ಬೆಳವಣಿಗೆ: ಸಂಕ್ಷಿಪ್ತ ಪರಿಚಯ, ಆರ್ಕಿಯಾಲಜಿ, ಜಿನಿಯಾಲಜಿ, ಸತ್ಯ, ಅಧಿಕಾರ/ಜ್ಞಾನ ಹಾಗೂ ವಾಕ್ ಸ್ವಾತಂತ್ರ್ಯ, ಲೇಖಕ ಅಂದರೇನು? ಸಾಹಿತ್ಯ, ವಿಮರ್ಶೆ, ಮತ್ತು ಕೆಲವು ಲೇಖಕರ ಬರೆಹಗಳ ವಿಶ್ಲೇಷಣೆ, ಫುಕೋ ಏಕೆ? ವೈಯಕ್ತಿಕ ಅನುಭವಗಳ ಹಿನ್ನೆಲೆಯಲ್ಲಿ ಫುಕೋನ ಪ್ರಸ್ತುತತೆ ಅಧ್ಯಾಯಗಳಲ್ಲಿ ಫುಕೋನ ಬದುಕು- ಬರಹ-ಚಿಂತನೆಗಳನ್ನು ಪರಿಚಯಿಸಲಾಗಿದೆ.
©2024 Book Brahma Private Limited.