ಡಾ|| ಎಚ್. ತಿಪ್ಪೇರುದ್ರಸ್ವಾಮಿ ವಚನಗಳಲ್ಲಿ ವೀರಶೈವಧರ್ಮ ಭಾರತೀಯ ಧರ್ಮ ಪರಂಪರೆ ಶಕ್ತಿವಿಶಿಷ್ಟಾದೈತ ಸಿದ್ಧಾಂತ ಷಟ್‌ಸ್ಥಲ ಮಾರ್ಗ ಅಷ್ಟಾವರಣ ಪಂಚಾಚಾರ ಶರಣಧರ್ಮ ಸಂದೇಶ ವಚನಸಾಹಿತ್ಯ ಅಪಾರವಾದ ಒಂದು ಸಾಗರ, ಕನ್ನಡ ಸಾರಸ್ವತ ಭಂಡಾರವನ್ನು ಶ್ರೀಮಂತವೂ ವೈವಿಧ್ಯಪೂರ್ಣವೂ ವಿಚಾರಸಮನ್ವಿತವೂ ಆಗುವಂತೆ ಬೆಳೆಸಿದ ಒಂದು ವಿಶಿಷ್ಟ ಸಾಹಿತ್ಯಪ್ರಕಾರ ಅದು. ಮುಖ್ಯವಾಗಿ ಅದು ಯಾವುದೇ ಒಂದು ಧರ್ಮ ಸಿದ್ಧಾಂತದ ಪ್ರತಿಷ್ಠಾಪನೆಯ ದೃಷ್ಟಿಯಿಂದ ಪ್ರವೃತ್ತವಾದದ್ದಲ್ಲ; ಜನ ಜೀವನವನ್ನು ಹಸನುಗೊಳಿಸುವ ಮಾನವೀಯ ಧರ್ಮಭಾವನೆಯಿಂದ ಪ್ರೇರಿತ ವಾದದ್ದು. ಆದರೆ ಅದು ಹಬ್ಬಿ ಹರಡಿ ಕುಡಿಯೊಡೆದು ಬೆಳೆಯುವುದಕ್ಕೆ ವೀರಶೈವ ಧರ್ಮವನ್ನು ಅವಲಂಬಿಸಿತು. ಶರಣರ ಸಾಧನೆಯಿಂದ ಈ ಧರ್ಮ ಅತಿ ವ್ಯಾಪಕ ವಾದ ದೃಷ್ಟಿಯನ್ನು ಪಡೆಯಿತು. ಬಸವಣ್ಣ ಅಲ್ಲಮಪ್ರಭು ಅಕ್ಕಮಹಾದೇವಿ ಮೊದಲಾದ ಅನೇಕ ಶರಣರು ತಮ್ಮ ನಡೆನುಡಿಗಳಿಂದ ಧರ್ಮದ ಪರಿಧಿಯನ್ನು ಹಿಗ್ಗಿಸಿದರು. ವೀರಶೈವಧರ್ಮ, ಶರಣರ ಆಚಾರ ವಿಚಾರಗಳಿಂದ ಮಾನವತೆಯ ಉದ್ದಾರಕ ಶಕ್ತಿಯಾಯಿತು. ಧರ್ಮದ ತತ್ವಗಳನ್ನು ಅವರು ವಿಚಾರದ ಮೂಸೆಯಲ್ಲಿ ಕರಗಿಸಿ ಎರಕಹೊಯ್ತು ಆಚಾರದಿಂದ ನವಚೈತನ್ಯವನ್ನಿತ್ತು ಜೀವಂತಗೊಳಿಸಿದರು; ಚಿರಂತನಗೊಳಿಸಿದರು. ಸಿದ್ದಾಂತದ ಶಾಸ್ತ್ರೀಯವಾದ ಪ್ರತಿಪಾದನೆಗಿಂತ ಹೆಚ್ಚಿನ ಶಕ್ತಿಯನ್ನು ಧರ್ಮ ಇದರಿಂದ ಪಡೆಯಿತು. ಈ ಅರ್ಥದಲ್ಲಿ ವಚನಗಳು ವೀರಶೈವ ಧರ್ಮದ ಆಧಾರ ಗ್ರಂಥಗಳಾಗಿ ಪರಿಣಮಿಸಿದುವು. ವೀರಶೈವಧರ್ಮದ ಮೂಲಭೂತವಾದ ಎಲ್ಲ ತತ್ವಗಳ ವಿವೇಚನೆಯೂ ಇಲ್ಲಿ ಬಂದಿದೆ. ಆದರೆ ಶಾಸ್ತ್ರಪರಿಣತರಿಗೆ ಕೆಲವು ಕಡೆ ಇನ್ನೂ ಹೆಚ್ಚಿನ ವಿವರಗಳು ಬೇಕೆನ್ನಿಸಬಹುದು; ಶಾಸ್ತ್ರೀಯ ಸಿದ್ದಾಂತ ದೃಷ್ಟಿಯ ಕೊರತೆ ಕಾಣಬಹುದು. ಅದಕ್ಕೆ ಕಾರಣ ಇಲ್ಲಿನ ಉದ್ದೇಶವೇ ಬೇರೆಯಾಗಿರುವುದು, ಪ್ರೌಢ ಸಿದ್ದಾಂತ ಪ್ರತಿ ಪಾದನೆಯ ಮಾರ್ಗಕ್ಕೆ ಇಲ್ಲಿ ಕೈಹಾಕದೆ, ಶರಣರ ಸ್ವತಂತ್ರ ವಿಚಾರ ಮನೋ ಧರ್ಮದ ವಿವೇಚನೆಯನ್ನು ಮಾತ್ರ ಉದ್ದೇಶಿಸಲಾಗಿದೆ. ಆ ಸ್ವತಂತ್ರ ವಿಚಾರ ದರ್ಶನಕ್ಕೆ ಇದೊಂದು ಮುನ್ನುಡಿಯಾಗುವಂತಾದರೆ ಸಾಕು ಇಲ್ಲಿನ ಉದ್ದೇಶ ಸಾರ್ಥಕವಾದಂತೆ.
©2024 Book Brahma Private Limited.