ಚರಿತ್ರೆ ಎಂದಿಗೂ ಉಳ್ಳವರ ಪರ ಎಂಬ ದೃಷ್ಟಿಕೋನವನ್ನು ಹೋಗಲಾಡಿಸುವ ಯತ್ನ ಕಳೆದ ಕಾಲು ಶತಮಾನದಿಂದ ನಡೆಯುತ್ತಿದೆ. ಅಂದರೆ ನಿರ್ಲಕ್ಷಿತರು ಅಥವಾ ಮೂಲೆಗುಂಪಾದವರ ಇತಿಹಾಸವನ್ನು ತಡಕುವ ಮಹತ್ವದ ಕೆಲಸ ಇದು. ಆ ಪ್ರಯತ್ನದ ಭಾಗವೆಂಬಂತೆ ರಚಿತವಾದ ಕೃತಿ ಹಿರಿಯ ಸಂಶೋಧಕ ಷ. ಶೆಟ್ಟರ್ ಅವರು 2019ರಲ್ಲಿ ಹೊರತಂದಿರುವ ’ರೂವಾರಿ’.
ಶಿಲ್ಪವನ್ನು ಅಭ್ಯಸಿಸುವ ಜೊತೆಗೆ ಶಿಲ್ಪಿಯ ಕುರಿತೂ ಅರಿತುಕೊಳ್ಳುವ, ಲಿಪಿಯನ್ನು ಅರಿಯುವ ಜೊತೆಗೆ ಅದರ ಲಿಪಿಕಾರನನ್ನೂ ಗಮನಿಸುವ ಮಹತ್ವದ ವಿಚಾರವನ್ನು ಕೃತಿ ವಿವರಿಸುತ್ತದೆ. ಕಳಿಂಗ, ಕದಂಬ, ಬಾದಾಮಿ ಚಾಳುಕ್ಯರು, ರಾಷ್ಟ್ರಕೂಟರು, ತಲಕಾಡಿನ ಗಂಗರ ಕಾಲದಲ್ಲಿ ಇದ್ದ ಶಿಲ್ಪಿಗಳು, ಲಿಪಿಕಾರರ ಮಾಹಿತಿ ಕೃತಿಯಲ್ಲಿದೆ. ಒಟ್ಟು ಎಂಟು ಅಧ್ಯಾಯಗಳಲ್ಲಿ ಅಶೋಕನ ಕಾಲಾವಧಿಯಿಂದ ಸಣ್ಣಪುಟ್ಟ ಸಂಸ್ಥಾನಗಳಲ್ಲಿದ್ದ ಶಿಲ್ಪಿಗಳವರೆಗಿನ ಮಾಹಿತಿಯನ್ನು ಕೃತಿ ಒಳಗೊಂಡಿದೆ. ಇತಿಹಾಸಕಾರರು, ಸಂಶೋಧಕರು, ಕಲಾಸಕ್ತರು, ಕಲಾ ಇತಿಹಾಸದ ವಿದ್ಯಾರ್ಥಿಗಳು ಓದಲೇಬೇಕಾದ ಕೃತಿ ಇದು.
©2024 Book Brahma Private Limited.