‘ರೆವರೆಂಡ್ ಎಫ್ ಕಿಟೆಲ್’ ಲೇಖಕ ಎಸ್.ಕೆ. ಹಾವನೂರ್ ಯಾವುದಾದರೂ ಕನ್ನಡ ಶಬ್ದದ, ವಿಶೇಷತಃ ಹಳೆಯ ಶಬ್ದಗಳ ಅರ್ಥವನ್ನು ತಿಳಿದುಕೊಳ್ಳಬೇಕಾದರೆ ಕಿಟಲ್ ಕೋಶವನ್ನು ನೋಡಿವುದು ರೂಢಿಯಾಗಿ ಬಿಟ್ಟಿದೆ. ವಿದ್ಯಾರ್ಥಿಗಳಿಂದ ಮೊದಲುಗೊಂಡು ದೊಡ್ಡ ದೊಡ್ಡ ಪಂಡಿತರವರೆಗೂ ಕಿಟೆಲ್ ಕೋಶವೇ ಆಧಾರ. ಕನ್ನಡೇತರಿಗೂ ಈ ಮಹಾನ್ ಶಬ್ದ ಕೋಶವು ನೆರವಾಗಬಲ್ಲದು. ಯಾರು ಈ ಕಿಟೆಲ್, ಯಾವುದೊ ಪಂಡಿತ ಮನೆತನದಲ್ಲಿ ಜನಿಸಿದವವ, ಇಲ್ಲವೇ ನಮ್ಮ ವಿಶ್ವವಿದ್ಯಾನಿಲಯವೊಂದರಲ್ಲಿ ಕನ್ನಡದ ಹಿರಿಯ ಪ್ರೊಫೆಸರ್ ಇದ್ದನೇನು? ಆತ ಕನ್ನಡ ದೇಶದವನೇ ಅಲ್ಲ. ಅವನು ದೂರದ ಜರ್ಮನ್ ದೇಶದವನು. ಕಳೆದ ಶತಮಾನದಲ್ಲಿ ಕನ್ನಡನಾಡಿಗೆ ಬಂದು ಮಂಗಳೂರು, ಧಾರವಾಡ, ಮಡಿಕೇರಿಗಳಲ್ಲಿ ನೆಲೆಸಿದನು. ಕ್ರಿಸ್ತಮತ ಪ್ರಚಾರ ಮಾಡುವ ಸಲುವಾಗಿ ಆತ ಇಲ್ಲಿಗೆ ಬಂದನು. ಆದರೆ ಕನ್ನಡವನ್ನು ವಿಶೇಷವಾಗಿ ಕಲಿಯಬಯಸಿದನು. ಮುಂದೆ ಆ ಒಂದು ಶತಮಾನದಲ್ಲಿ ಯಾವ ಕನ್ನಡ ವಿದ್ವಾಂಸನಿಗೂ ಕಡಿಮೆಯಲ್ಲದಷ್ಟು ಆಳವಾಗಿ ಅಭ್ಯಾಸ ಮಾಡಿದನು. ಅನೇಕ ಕನ್ನಡ ಗ್ರಂಥಗಳನ್ನು ರಚಿಸಿದನು. ಅವುಗಳಲ್ಲೆಲ್ಲ ಎದ್ದು ಕಾಣುವಂತಹುದು ಈ ಕನ್ನಡ ಕೋಶ. ಕನ್ನಡ ಭಾಷೆ ಜೀವಂತವಿರುವವರೆಗೂ ಉಳಿಯಬಲ್ಲ ಗ್ರಂಥವಿದು. ಇಂಥ ಕಿಟಲ್ ಅವರ ಬದುಕು ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಕೃತಿಯಿದು.
ಕನ್ನಡ ಸಾಹಿತ್ಯಸಂಶೋಧನೆ ಮಾಡಲು ಮೊತ್ತಮೊದಲು ಕಂಪ್ಯೂಟರ್ ಬಳಸಿದವರು ಡಾ. ಶ್ರೀನಿವಾಸ ಹಾವನೂರರು (1928-2010). ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು, ವೈವಿಧ್ಯಮಯವಾದುದು. ಸಣ್ಣ ಕಥೆ, ಲಲಿತ ಪ್ರಬಂಧ, ಜೀವನ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ನಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಹಿಂದೆ ಮುಂಬಯಿಯ ಟಾಟಾ ಮೂಲಭೂತ ವಿಜ್ಞಾನ ಸಂಸ್ಥೆಯ ಗ್ರಂಥಪಾಲಕರಾಗಿದ್ದರು. ಮುಂದೆ ಮಂಗಳೂರು ಮತ್ತು ಮುಂಬಯಿ ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದರು. ಆಮೇಲೆ ಪುಣೆಯಲ್ಲಿ ಮರಾಠಿ ಕನ್ನಡ ಸ್ನೇಹ ಸಂವರ್ಧನೆಯಲ್ಲಿ ಪಾತ್ರವಹಿಸಿದರು.. ಕೊನೆಗೆ ಕರ್ನಾಟಕ ಸರಕಾರದ ಸಮಗ್ರ ದಾಸ ಸಾಹಿತ್ಯ ಸಂಪಾದಕರಾಗಿ ೫೦ ಸಂಪುಟಗಳ ಪ್ರಕಟಣೆಯ ನೇತೃತ್ವ ವಹಿಸಿದರು. ಕನ್ನಡದ ನಾಡೋಜರೆಂದು ಹೆಸರಾದರು. ...
READ MORE