ರಾಜರ್ಷಿ ಶಾಹು ಛತ್ರಪತಿ

Author : ಹನುಮಂತ

Pages 898

₹ 400.00




Year of Publication: 2018
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560174
Phone: 198 - 23183311, 23183312

Synopsys

ಅಸ್ಪೃಶ್ಯರ ಪ್ರಗತಿಗಾಗಿ ಅವರ ಚಳವಳಿ ವಿಸ್ತೃತಗೊಳಿಸಲು ಪ್ರಯತ್ನಿಸಿದವರಲ್ಲಿ ರಾಜರ್ಷಿ ಛತ್ರಪತಿ ಶಾಹೂ ಮಹಾರಾಜರು ಒಬ್ಬರು. ಇವರ ಸಂಘರ್ಷದ, ಹೋರಾಟದ ಹಾಗೂ ಜಾತೀರಹಿತ ಮನಸ್ಥಿತಿ, ಇವರು ತಂದ ಸುಧಾರಣೆಗಳ ಬಗ್ಗೆ ಈ ಕೃತಿಯು ವಿವರಿಸುತ್ತದೆ. ಅಂಬೇಡ್ಕರ್‌ ಅವರು ಓದಲು, ದಲಿತರು ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟ ಇವರು ಮಹಿಳೆಯರನ್ನು ಕ್ರೂರವಾಗಿ ನಡೆಸಿಕೊಳ್ಳಬಾರದು ಎಂದು ಕಾಯ್ದೆಯನ್ನು ಜಾರಿ ಮಾಡಿದರು. ಹೀಗೆ ಶಾಹೂ ಮಹಾರಾಜರ ಕಾಲದಲ್ಲಿ ಆದ ಸಾಮಾಜಿಕ ಬದಲಾವಣೆಗಳನ್ನು ಕೃತಿಯಲ್ಲಿ ವಿವರಿಸಿದ್ದಾರೆ. 

Reviews

ರಾಜರ್ಷಿ ಶಾಹು ಮಹರಾಜ್

ಕ್ರಾಂತಿಕಾರಿ ದೊರೆಯೊಬ್ಬರ ಸಾರ್ಥಕ ಸ್ಮರಣೆ

ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದೊಂದಿಗೆ ಆರಂಭವಾದ ಕಟು ಬ್ರಾಹ್ಮಣವಾದದಿಂದ ಸಂತ್ರಸ್ತವಾದ ಸಮಾಜದಲ್ಲಿ ಸಾಮಾಜಿಕ ಪರಿವರ್ತನೆಯ ಬಿರುಗಾಳಿ ಎಬ್ಬಿಸಿದವರಲ್ಲಿ ಕೊಲ್ಲಾಪುರದ ಶಾಹು ಛತ್ರಪತಿ ಮಹಾರಾಜರು (೨೪.೬.೧೮೭೪-೬.೫, ೧೯೨೨) ಚರಿತ್ರೆಯಲ್ಲಿ ಎದ್ದು ಕಾಣುವ ಹೆಸರು. ಮೂಢ ಆದರೆ ದುರಹಂಕಾರಿಯಾಗಿದ್ದ ಬ್ರಾಹ್ಮಣಶಾಹಿಯಿಂದ ಮಾನಸಿಕವಾಗಿ ಜರ್ಝರಿತಾದ ಎರಡು ಪ್ರಸಂಗಗಳಿಂದಾಗಿ ಹಿಂದೂ ಸಮಾಜದ ಜಾತಿ ಪದ್ಧತಿಯ ವಿರುದ್ಧ ನಡೆಸಿದ, ಈಗ ಓದಿದರೂ ನಿಜವಾಗಿಯೂ ರೋಮಾಂಚನವನ್ನುಂಟು ಮಾಡುವಂತಹ ಹಲವು ನೆಲೆಗಳ ಮಹಾ ಹೋರಾಟದ ಕಥೆಯನ್ನು ಈ ಬೃಹತ್ ಗ್ರಂಥ ತನ್ನೆಲ್ಲ ವಿವರಗಳೊಂದಿಗೆ, ಆದರೆ ಯಾವುದೇ ಭಾವಾವೇಶಕ್ಕೆ ಒಳಗಾಗದೆ ನಮ್ಮ ಮುಂದೆ ಇಡುತ್ತದೆ.

ಅಸ್ವೃಶ್ಯರೂ, ಮಹಿಳೆಯರೂ ಸೇರಿದಂತೆ ಸರ್ವ ಜಾತಿ, ಧರ್ಮಗಳ ಜನರಿಗೆ ಶಿಕ್ಷಣವನ್ನು ಮುಕ್ತಗೊಳಿಸಿದ, ಪ್ರಾಥಮಿಕ ಶಿಕ್ಷಣವನ್ನು ಉಚಿತಗೊಳಿಸಿದ, ಬ್ರಾಹ್ಮಣ ಪ್ರಧಾನವಾಗಿದ್ದ ಆಡಳಿತ ವ್ಯವಸ್ಥೆಯಲ್ಲಿ ಆದ್ಯತೆಯ ಮೇಲೆ ಶೂದ್ರರ, ಅಸ್ಪೃಶ್ಯರ ಪ್ರವೇಶ ನೀಡಿದ, ಅಸ್ಪೃಶ್ಯ ಜಾತಿಗಳನ್ನು ಕಡ್ಡಾಯ ಚಾಕರಿಗಳಿಂದ ಬಿಡುಗಡೆಗೊಳಿಸಿದ, ಹಿಂದುಳಿದ ಮತ್ತು ಅಸ್ಪೃಶ್ಯ ಜಾತಿಗಳಲ್ಲಿ ಸ್ವಾಭಿಮಾನ ಬೆಳೆಸಲು ಜಾತಿ ಸಮ್ಮೇಳನಗಳನ್ನು ಪ್ರೋತ್ಸಾಹಿಸಿದ, ಅಸ್ಪೃಶ್ಯರಿಂದ ಸಾರ್ವಜನಿಕವಾಗಿ ತಾವು ಮತ್ತು ತಮ್ಮ ರಾಜಪರಿವಾರ ಆಹಾರ ಸ್ವೀಕರಿಸುವ ವ್ಯವಸ್ಥೆ ಮಾಡಿದ ಮಹಿಳೆಯರಿಗೆ ಆಸ್ತಿ ಹಕ್ಕನ್ನು ನೀಡಿದ, ಅಂತರ್ಜಾತಿ ವಿವಾಹಗಳಿಗೆ ಕಾನೂನೂ ಮಾನ್ಯತೆ ನೀಡಿದ, ಹಿಂದೂ-ಮುಸ್ಲಿಂ ಐಕ್ಯತೆಗಾಗಿ ಎರಡೂ ಮತಗಳ ಪೂಜಾಸ್ಥಳಗಳ ನಿರ್ಮಾಣಕ್ಕಾಗಿ ಪರಸ್ಪರರ ಹಣದ ವಿನಿಯೋಗದ ವ್ಯವಸ್ಥೆ-ಹೀಗೆ ಇಂದಿನ ಆಧುನಿಕ ಸರ್ಕಾರ ಕೂಡ ಕಲ್ಪಿಸಿಕೊಳ್ಳಲಾಗದ ಕ್ರಾಂತಿಕಾರಿ ಕ್ರಮಗಳನ್ನು ಅವರು ಒಂದೇ ಸಮನೇ ಕೈಗೊಳ್ಳುತ್ತಾ ಹೋದರು. ಶಾಹು ಅವರ ಈ ಸಾಮಾಜಿಕ ಕ್ರಾಂತಿಯ ಆಂದೋಲನದ ಹಿಂದೆ ಇದ್ದುದು ಆರ್ಯ ಸಮಾಜ, ಅನಿಬೆಸಂಟರ ಥಿಯೋಸಾಫಿಕಲ್ ಸೊಸೈಟಿ, ಮಹಾತ್ಮ ಫುಲೆ ಅವರ ಸತ್ಯಶೋಧಕ ಸಮಾಜ ಮತ್ತು ಅಮೆರಿಕನ್ ಕ್ರಿಶ್ಚಿಯನ್ ಮಿಷನರಿಯೊಂದರ ಸ್ಪೂರ್ತಿ.

ಇದಕ್ಕಾಗಿ ಬಾಲಗಂಗಾಧರ ತಿಲಕರೂ ಸೇರಿದಂತೆ ಮಹಾರಾಷ್ಟ್ರದ ಕಟ್ಟಾ ಬ್ರಾಹ್ಮಣವಾದಿಗಳ ಗುಂಪಿನಿಂದ ಹಲವಾರು ಟೀಕಾ ಪ್ರಹಾರಗಳನ್ನೂ, ಚಾರಿತ್ರ್ಯ ಹನನದ ಪ್ರಯತ್ನಗಳನ್ನು ಮತ್ತು ಕೆಲವೊಮ್ಮೆ ಬ್ರಿಟಿಷ್ ಸಾಮ್ರಾಜ್ಯದ ವಿರೋಧವನ್ನೂ ಛತ್ರಪತಿಗಳು ಎದುರಿಸಬೇಕಾಯಿತು. ಆದರೆ ಅವರು ತಮ್ಮ ಪ್ರಯತ್ನಗಳಿಂದ ಹಿಮ್ಮೆಟ್ಟಲಿಲ್ಲ. ಅವರಿಗೆ ಅಗರ್ಕರ್, ರಾನಡೆ ಮುಂತಾದ ಪ್ರಗತಿಪರ ಬ್ರಾಹ್ಮಣ ನಾಯಕರ, ಮಹರ್ಷಿ ಶಿಂಧೆಯವರಂತಹ ಮರಾಠ ನಾಯಕರ ಮತ್ತು ಆಗಿನ್ನೂ ದಲಿತ ನಾಯಕರಾಗಿ ಉದಯವಾಗುತ್ತಿದ್ದ ಬಿ.ಆರ್. ಅಂಬೇಡ್ಕರ್ ಅವರ ನೈತಿಕ ಬೆಂಬಲ ಇತ್ತು.

ಶಾಹು, ತಿಲಕರ ಸಾಮಾಜಿಕ ನೀತಿಯನ್ನು ಒಪ್ಪುತ್ತಿರಲಿಲ್ಲವಾದರೂ ಅವರ ಬಗ್ಗೆ ವೈಯಕ್ತಿಕ ಗೌರವ ತೋರುತ್ತಾ ರಾಷ್ಟ್ರೀಯ ಹೋರಾಟಕ್ಕೆ ತಮ್ಮ ಕೈಲಾದ ನೆರವನ್ನೂ ನೀಡುತ್ತಿದ್ದರು. ಜೊತೆಗೇ ಬ್ರಾಹ್ಮಣ ಗುಂಪುಗಳ ಅಪಪ್ರಚಾರವನ್ನೆದುರಿಸಲು ಬ್ರಾಹ್ಮಣೇತರರಿಗೆ ಪತ್ರಿಕೆಗಳನ್ನು ಶುರು ಮಾಡಲು ನೆರವು ನೀಡಿದರು. ಆದರೆ ಅವರೆಂದಿಗೂ ಜಾತಿವಾದವನ್ನು ಬೆಂಬಲಿಸಲಿಲ್ಲ. ಜಾತಿ ಸಮ್ಮೇಳನಗಳನ್ನು ಆತ್ಮಗೌರವದ ಸಂಘಟನೆಗಾಗಿ ಆಯೋಜಿಸಬೇಕೇ ಹೊರತು ಒಟ್ಟು ಸಮಾಜದ ಕ್ಯತೆಯನ್ನು ಒಡೆಯಲು ಅಲ್ಲ ಎಂದು ಅವರು ಎಚ್ಚರಿಸುತ್ತಿದ್ದರು. ಆಧುನಿಕ ಶಿಕ್ಷಣ ಎತ್ತು ಪಾರಂಪರಿಕ ಜ್ಞಾನಗಳೆರಡರಲ್ಲೂ ನುರಿತವರಾಗಿದ್ದ ಶಾಹು ಸಾಮಾಜಿಕ ಧಾರಣೆಗಳನ್ನಲ್ಲದೆ ರಾಜ್ಯದ ಒಟ್ಟು ಲೌಕಿಕ ಮತ್ತು ಸಾಂಸ್ಕೃತಿಕ ವಿಕಾಸದೆಡೆಗೂ ಮನ ಹರಿಸಿ ಜನಮೆಚ್ಚುಗೆ ಪಡೆದು ರಾಜರ್ಷಿ ಎನಿಸಿದರು. ಇಂತಹ ಅಪರೂಪದ ಪರೆಯೊಬ್ಬರ ಜೀವನಗಾಥೆ ಮತ್ತು ಇದಕ್ಕೆ ಪೂರಕವಾದ ಹಲವು ಲೇಖನಗಳ ಸಂಯುಕ್ತ ಸಂಪುಟದ ಕನ್ನಡಾನುವಾದವನ್ನು ಸಾಕಷ್ಟು ಯಶಸ್ವಿಯಾಗಿ ರ್ವಹಿಸಿರುವ ಪ್ರೊ. ಹನುಮಂತ ಮತ್ತು ಇದರ ಪ್ರಕಾಶಕರಾದ ಕುವೆಂಪು ಭಾಷಾಭಾರತಿ ಇಬ್ಬರೂ ಕನ್ನಡಿಗರ ಅಭಿನಂದನೆಗಳಿಗೆ ಪಾತ್ರರಾಗಿದ್ದಾರೆ.

-ಡಿಎಸ್ಸೆನ್

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ಪತ್ರಿಕೆ (ಏಪ್ರಿಲ್ 2019)

 

 

Related Books