‘ನೊಳಂಬರ ಶಾಸನಗಳು’ ನೊಳಂಬ ಅರಸು ಮನೆತನಕ್ಕೆ ಸಂಬಂಧಿಸಿದ ಶಾಸನಗಳ ಸಂಕಲನ. ಕರ್ನಾಟಕದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ನೊಳಂಬ ಅರಸು ಮನೆತನವು ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದೆ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸುಮಾರು 350 ವರ್ಷಗಳಿಗೂ ಅಧಿಕ ಆಡಳಿತ ನಡೆಸಿದ್ದ ನೊಳಂಬ ಮನೆತನದ ಅಧ್ಯಯನಕ್ಕೆ ಈ ರಾಜ್ಯಗಳಲ್ಲಿ ದೊರೆಯುವ ಶಾಸನಗಳೇ ಪ್ರಮುಖ ಆಕರಗಳಾಗಿವೆ.
ಪ್ರಸಿದ್ಧ ಅರಸುಮನೆತನಗಳಾದ ಗಂಗರು, ರಾಷ್ಟ್ರಕೂಟರು ಮತ್ತು ಕಲ್ಯಾಣ ಚಾಳುಕ್ಯರ ಸಾಮಂತರಾಗಿದ್ದರೂ ಅನೇಕ ಲೋಕೋಪಯೋಗಿ ಕಾರ್ಯಗಳನ್ನು ಕೈಗೊಂಡು ಇತರೆ ಅರಸುಮನೆತನಗಳಿಗೆ ಮಾದರಿಯಾದರು. ಈ ಕಾರಣದಿಂದ ಸಾಮಂತದೊರೆಗಳೆಂಬ ಚೌಕಟ್ಟನ್ನೂ ಮೀರಿ ಕರ್ನಾಟಕದ ಆತ್ಮಾಭಿಮಾನವನ್ನು ಮತ್ತು ಕನ್ನಡತನವನ್ನು ಉಳಿಸಿ ಬೆಳೆಸಿದ ಕೀರ್ತಿ ನೊಳಂಬರಿಗೆ ಸಲ್ಲುತ್ತದೆ.
ಇವರ ಕಾಲದ ಎಲ್ಲ ಶಾಸನಗಳನ್ನು ಒಟ್ಟು ರೂಪದಲ್ಲಿ ವ್ಯವಸ್ಥಿತವಾಗಿ ಪ್ರಕಟಿಸುವ ಕಾರ್ಯ ಈವರೆಗೆ ಆಗಿರಲಿಲ್ಲ. ಆ ಕೊರತೆಯನ್ನು ನೀಗಿಸಿದವರು ವಿದ್ವಾಂಸ ಡಾ. ಡಿ.ವಿ. ಪರಮಶಿವಮೂರ್ತಿ ಮತ್ತು ಡಿ. ಸಿದ್ದಗಂಗಯ್ಯ .ಈ ಸಂಪಾದನೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ.
©2024 Book Brahma Private Limited.