ಪದ್ಮಭೂಷಣ ಎಚ್. ನರಸಿಂಹಯ್ಯನವರ ಕುರಿತಾದ ಬದುಕು ಬರಹ, ಮತ್ತು ಜೀವನ ಚಿತ್ರಣದ ಬಗ್ಗೆ ಪ್ರೊ. ಬಿ. ಗಂಗಾಧರಮೂರ್ತಿ ಅವರು ತಮ್ಮ ’ ಮೌಢ್ಯ ವಿರೊಧಿ ಹೋರಾಟಗಾರ ಎಚ್ಚೆನ್” ಕೃತಿಯಲ್ಲಿ ಚಿತ್ರಿಸಿದ್ದಾರೆ.
ಸ್ವಾತಂತ್ಯ್ರ ಹೋರಾಟಗಾರ, ಎಚ್. ನರಸಿಂಹಯ್ಯ ಅವರು ನಂಬಿದ ತತ್ವಕ್ಕಾಗಿ ಕುಲಪತಿ ಹುದ್ದೆಯನ್ನೇ ಬಿಟ್ಟು ನ್ಯಾಷನಲ್ ಕಾಲೇಜಿಗೆ ಹಿಂದಿರುಗಿದ ಧೀರೋದಾತ್ತ ವ್ಯಕ್ತಿತ್ವ ಹೊಂದಿದ್ದವರು. ತಮ್ಮ ಬದುಕಿನಲ್ಲಿ ನ್ಯಾಯವಾದ ಆಯ್ಕೆಯ ಪ್ರಶ್ನೆ ಎದುರಾದಾಗಲೂ ಅಂಜದೆ ಅಳುಕದೆ ಸ್ಪಷ್ಟ ದಾರಿಯಲ್ಲಿ ನಡೆಯಬಲ್ಲ ದೃಢವಾದ ಮನಸ್ಸು ಅವರಿಗಿತ್ತು. ಅವರು ದೇವರ ಇರುವಿಕೆಯ ಬಗೆಗೆ ನಂಬಿಕೆ ಕಳೆದುಕೊಂಡಿರಲಿಲ್ಲ. ಆದರೆ ಸಾಂಸ್ಥಿಕವಾಗಿರುವ ಧರ್ಮ, ಜಾತಿಗಳ ಬಗೆಗೆ ಅವರಿಗೆ ಸಂದೇಹವಿತ್ತು. ಜಾತಿ, ಧರ್ಮಗಳು ಬದುಕನ್ನು ಸ್ಥಗಿತಗೊಳಿಸುತ್ತಿವೆಯೆಂಬ ನೋವು ಅವರಿಗಿತ್ತು.
“ಜಾತೀಯತೆ ಇದ್ದ ಕಡೆ ಧರ್ಮವಿಲ್ಲ; ಪೂಜಾರಿಯಿದ್ದ ಕಡೆ ದೇವರಿಲ್ಲ” ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಧರ್ಮವು ನಿಂತ ನೀರಾಗಿದ್ದರೆ, ವಿಜ್ಞಾನ ಹರಿಯುವ ನದಿ ಎಂದು ತಿಳಿದಿದ್ದ ಅವರು, ಯಾವುದನ್ನೂ ಯಾರನ್ನೂ ಪ್ರಶ್ನಿಸುವ ಹಕ್ಕನ್ನು ಪರಮ ಪವಿತ್ರವಾದ ಹಕ್ಕೆಂದು ಪ್ರತಿಪಾದಿಸುತ್ತಿದ್ದರು. ಕಚೇರಿಯಲ್ಲಿ ತಾವು ಕುಳಿತಿರುತ್ತಿದ್ದ ಕುರ್ಚಿಯ ಎದುರಿಗೇ ಪ್ರಶ್ನಾರ್ಥಕ ಚಿನ್ನೆಯ ಚಿತ್ರವನ್ನು ತೂಗುಹಾಕಿದ್ದರು. ಸ್ವತಃ ಗಾಂಧಿವಾದಿಯಾಗಿದ್ದ ಅವರು ವಿಚಾರವಾದಕ್ಕೆ ಅಡ್ಡಿಯಾಗುವುದಿದ್ದರೆ, ಗಾಂಧೀಜಿಯನ್ನು ಬದಿಗೆ ಸರಿಸಿ ಮುನ್ನಡೆಯುವ ಬದ್ಧತೆ ತೋರಿಸುತ್ತಿದ್ದರು.
©2024 Book Brahma Private Limited.