ಮೂಕ ಸಹ್ಯಾದ್ರಿಗೆ ಮಾತು ಕೊಟ್ಟವಳು - ಡಾ. ಕುಸುಮಾ ಸೊರಬ

Author : ಶಾರದಾ ಗೋಪಾಲ

Pages 224

₹ 180.00




Year of Publication: 2018
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಹಿರಿಯ ಪರಿಸರವಾದಿ ಕುಸುಮಾ ಸೊರಬ ಅವರು ತಮ್ಮ ಇಡೀ ಜೀವನವನ್ನು ಪಶ್ಚಿಮ ಘಟ್ಟಗಳ ಉಳಿಸಲು ಮುಡುಪಾಗಿಟ್ಟವರು. ಪ್ರಪಂಚದ 18 ಮಹತ್ವದ ಜೀವಜಾಲ ತಾಣಗಳಲ್ಲಿ ಒಂದಾಗಿರುವ ಕರ್ನಾಟಕದ ಸಹ್ಯಾದ್ರಿಯನ್ನು ಉಳಿಸಿಕೊಳ್ಳುವಲ್ಲಿ ಸತತವಾಗಿ ಹೋರಾಡಿ ಜೀವ ಸವೆಸಿದ ಕುಸುಮಾ ಸೊರಬರವರ ಜೀವನಗಾಥೆ ಈ ಕೃತಿ.

About the Author

ಶಾರದಾ ಗೋಪಾಲ

ಲೇಖಕಿ, ಅಂಕಣಗಾರ್ತಿ ಶಾರದಾ ಗೋಪಾಲ್ ಅವರು ಬಿ.ಎಸ್ಸಿ., ಡಿಪ್ಲೊಮಾ (ಪತ್ರಿಕೋದ್ಯಮ) ಪದವೀಧರೆ.  ಜನನ 28 ಜೂನ್ 1960, ಬಕ್ಕೆಮನೆಯಲ್ಲಿ. ತಂದೆ - ನಾರಾಯಣ ಹೆಗ್ಗಡೆ, ತಾಯಿ- ಪಾರ್ವತಿ.  ಅವರ ಅಭ್ಯುದಯದ ಹಾದಿಯಲ್ಲಿ (ಕಥಾಸಂಕಲನ), ಸಾಮಾಜಿಕ ಅರಣ್ಯ , ಔಷಧಿ ಮತ್ತು ನಾವು, ನಿಷೇಧಿತ ಔಷಧಗಳು (ವೈದ್ಯಕೀಯ ಬರಹಗಳು-1991) ಕೃತಿಗಳು ಪ್ರಕಟವಾಗಿವೆ. `ಔಷಧಿ ಮತ್ತು ನಾವು' ಕೃತಿಗೆ ರಾಷ್ಟೋತ್ಥಾನ ಪರಿಷತ್ತಿನ ಎಂ.ಎಸ್.ಎನ್. ಅಯ್ಯಂಗಾರ್ ಪ್ರಶಸ್ತಿ ಲಭಿಸಿದೆ. ...

READ MORE

Reviews

ಮೂಕ ಸಹ್ಯಾದ್ರಿಗೆ ಮಾತು ಕೊಟ್ಟವಳು ಕೃತಿಯ ಪುಸ್ತಕ ವಿಮರ್ಶೆ

ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆಗಾಗಿ ಜೀವಸವೆಸಿದ ಕುಸುಮಾ ಸೊರಬ ಅವರ ಜೀವನಗಾಥೆಯನ್ನು ನಿರೂಪಿಸುವ ಈ ಕೃತಿ ಕೆ.ವಿ. ಸುಬ್ಬಣ್ಣ ಅವರ ಲೇಖನವೊಂದನ್ನು ಪೀಠಿಕೆಯನ್ನಾಗಿ ಬಳಸಿಕೊಂಡು, ಉ.ಕ. ಜಿಲ್ಲೆಯ ಪರಿಸರ ಹೋರಾಟ ಕುರಿತ ಒಬ್ಬ ಮಹಿಳೆಯ ಸಾಧನೆಯನ್ನು ದಾಖಲಿಸುತ್ತದೆ.

ಉ.ಕ.ದ ಕೆರವಳ್ಳಿಯಲ್ಲಿ ತನ್ನ ಬೇರುಹೊಂದಿದ ಕುಸುಮಾ ಹುಟ್ಟಿದ್ದು ಹುಬ್ಬಳ್ಳಿಯಲ್ಲಿ. ಬಾಲ್ಯದಲ್ಲೇ ಕೆರವಳ್ಳಿಯ ಪರಿಸರವನ್ನುತಮ್ಮ ಕರ್ಮಭೂಮಿ ಎಂದು ಗುರುತಿಸಿಕೊಂಡಿದ್ದರು. ನರ್ಸಿಂಗ್ ಮತ್ತು ವೈದ್ಯಕೀಯ ಶಿಕ್ಷಣವೆರಡನ್ನೂ ಪಡೆದಿದ್ದರು. ಕುಸುಮಾ ಬಿಜಾಪುರದಲ್ಲಿ ನರ್ಸ್ ಆಗಿದ್ದಾಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸ್ವಾತಂತ್ರ್ಯ ಸೇನಾನಿ ವೀರ ಸಾವರ್‌ಕರ್, ನೈಟಿಂಗೇಲಳ ಜೀವನಚರಿತ್ರೆಯ ಪುಸ್ತಕವಲ್ಲದೆ, ಗಾಂಧೀಜಿಯವರ ಹಿಂದ್ ಸ್ವರಾಜ್ ಮತ್ತು ರವೀಂದ್ರನಾಥ ಠಾಗೋರರ ಪುಸ್ತಕಗಳನ್ನು ಕುಸುಮಾಗೆ ನೀಡಿರುವುದನ್ನು ಶಾರದಾ ಗೋಪಾಲ ಉಲ್ಲೇಖಿಸಿದ್ದಾರೆ.

ಕುಸುಮಾ ಅವರು 'ಸ್ನೇಹಕುಂಜ' ಎಂಬ ಟ್ರಸ್ಟ್ ಸ್ಥಾಪಿಸಿ, ಹೊನ್ನಾವರ ಸಮೀಪದ ಕಾಸರಕೋಡು ಎಂಬಲ್ಲಿ ಆಸ್ಪತ್ರೆಯನ್ನು ಪ್ರಾರಂಭಿಸುವ ಹಂತದಲ್ಲಿ ಎದುರಿಸಿದ ಅಡ್ಡಿ-ಆತಂಕಗಳು, ಅಕೆಗೆ ಮುಂದಿನ ಸಂಕಷ್ಟಗಳನ್ನು ಎದುರಿಸಲು ಪ್ರಥಮ ಪಾಠಗಳಾದವು. ಶಿಕ್ಷಿತವರ್ಗ ಹಳ್ಳಿಗಳ ಕಡೆ ಮುಖ ಮಾಡದೆ, ಪಟ್ಟಣಗಳೆಡೆಗೆ ಆಕರ್ಷಿತವಾಗಿದ್ದರೆ ಕುಸುಮಾ ಅವರ ಗುರಿ ಹಳ್ಳಿಯಲ್ಲಿಯೇ ಆಸ್ಪತ್ರೆ ಕಟ್ಟಿಸಿ, ಬಡರೋಗಿಗಳಿಗೆ ಚಿಕಿತ್ಸೆ ನೀಡುವುದಾಗಿತ್ತು. ಈ ಮಧ್ಯೆ, ಆಕೆ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡರು. ಕುಸುಮಾ ಅವರ ಆಸ್ಪತ್ರೆಗೆ ಬೇಕಾದ  20ಎಕರೆ ಜಾಗಕ್ಕಾಗಿ, ಆಗಿನ ಮುಖ್ಯಮಂತ್ರಿ ಗುಂಡೂರಾವ್ ಅವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿ, ಜಾಗ ಮಂಜೂರಾದರೂ, ಮರುದಿನವೇ ಸ್ಥಳೀಯರು ಉಚ್ಚ ನ್ಯಾಯಾಲಯದಿಂದ ತಂದ ತಡೆಯಾಜ್ಞೆಯು ಪ್ರಸ್ತುತ ಸಮಾಜವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

ದಾದಿಯರ ತರಬೇತಿಯನ್ನೂ ಪ್ರಾರಂಭಿಸಿದ ಕುಸುಮಾ ಅವರು, ಸಂಸ್ಥೆಯನ್ನು ಗಾಂಧೀಜಿಯವರ ವಾರ್ಧಾ ಸೇವಾಗ್ರಾಮದಂತೆ ಮಾಡುವ ಕನಸು ಹೊತ್ತು, ಅಲ್ಲಿ ದೇಶಭಕ್ತಿಗೀತೆ ಹಾಡುವುದು, ಯೋಗ, ವ್ಯಾಯಾಮ, ಶೌಚಾಲಯ ತೊಳೆಯುವುದು ಇತ್ಯಾದಿ ಕೆಲಸಗಳಲ್ಲಿ ಭೇದಭಾವವಿಲ್ಲದೆ ತೊಡಗಿಸಿಕೊಳ್ಳುವುದನ್ನು ನಿಯಮಿತಗೊಳಿಸಿದರು. ರೋಗಗಳ ಮೂಲ ಹುಡುಕಲು ಹೊರಟ ಕುಸುಮಾ ಹಳ್ಳಿಗಳಿಗೆ ಭೇಟಿ ನೀಡಿ, ಕುಡಿತದ ಸಮಸ್ಯೆ, ಅನಕ್ಷರತೆ, ಸ್ವಚ್ಛತೆಯ ಬಗ್ಗೆ ಅಜ್ಞಾನ ಇತ್ಯಾದಿಗಳನ್ನು ಮನಗಂಡು, ರೋಗಮೂಲಕ್ಕೆ ಔಷಧ ಎಂಬಂತೆ, 'ಗ್ರಾಮ ವಿಕಾಸ ಯೋಜನೆಯನ್ನು ರೂಪುಗೊಳಿಸಿದರು. “ಅಪ್ಪಿಕೋ ಚಳುವಳಿ' ಮತ್ತು 'ಪಶ್ಚಿಮ ಘಟ್ಟ ಉಳಿಸಿ' ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಪಾನಪ್ರತಿರೋಧ ಮತ್ತು, ಕೈಗಾ ಅಣುಸ್ಥಾವರ ವಿರೋಧಿಸಿ ಚಳುವಳಿ ನಡೆಸಿದರು.

ಶರಾವತಿ ಟೇಲ್ ರೇಸ್ ಯೋಜನೆಯನ್ನು ವಿರೋಧಿಸುವ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಲು ಬೆಂಗಳೂರಿಗೆ ವಕೀಲರೊಂದಿಗೆ ಚರ್ಚಿಸಲು ಬಂದ ಕುಸುಮಾ, ಗಾಂಧೀಭವನದ ಸತ್ಯವತ ಅವರೊಂದಿಗೆ, ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಬೇಕಾದ ಪೂರ್ವಸಿದ್ಧತೆಗಳ ಬಗ್ಗೆ ಪ್ರಸ್ತಾಪಿಸಿ, ಇನ್ನೂ ಈ ಬಗ್ಗೆ ಚರ್ಚಿಸಬೇಕೆಂದು ಹೇಳಿ ಹಿಂದಿರುಗುವ ಸಂದರ್ಭದಲ್ಲಿ ರಾತ್ರಿ ಮಾರ್ಗಮಧ್ಯದಲ್ಲಿಯೇ ಅಪಘಾತಕ್ಕೀಡಾದರು. ಒಬ್ಬ ಮಹಿಳೆಯ ಸಾಹಸಗಾಥೆ ಅಲ್ಲಿಗೇ ನಿಂತಿತು.

ವೈಯಕ್ತಿಕ ಉದ್ದಾರವೇ ಮಂತ್ರವಾದ ಈ ಕಾಲಘಟ್ಟದಲ್ಲಿ, ಪರಿಸರ, ಪ್ರಾಣಿಪಕ್ಷಿಗಳು, ದುರ್ಬಲರಪರ ಕಾಳಜಿ ಹೊಂದಿ ಹೋರಾಟದ ಬದುಕು ಸವೆಸಿದ ಕುಸುಮಾ ಅವರ ಜೀವನಗಾಥೆ ಕೆಲವರಿಗಾದರೂ ಮಾರ್ಗದರ್ಶಿಯಾಗಲೆಂಬ ಆಶಯವುಳ್ಳ ಈ ಹೊತ್ತಿಗೆಯನ್ನು ನೀಡಿದ ಶಾರದಾ ಗೋಪಾಲ ಅವರ ಪ್ರಯತ್ನ ಸ್ತುತ್ಯರ್ಹ. ಘಟನಾವಳಿಗಳಿಗೆ ಕಥಾನಕದ ದಿರಿಸು ತೊಡಿಸಿ ಬರೆದಿರುವುದರಿಂದ ಓದುವ ಓಟಕ್ಕೆ ಮುದ ನೀಡಿದರೂ ಕೆಲವೊಮ್ಮೆ ಮುಖ್ಯವಿಷಯಗಳು ಬದಿಗೆ ಸರಿಯುತ್ತವೆ. ಪುಸ್ತಕದಲ್ಲಿ ಕುಸುಮಾ ಅವರ ಒಂದೇ ಒಂದು ಭಾವಚಿತ್ರ ಇಲ್ಲದಿರುವುದು ಕೊರತೆಯಾಗಿ ಕಾಣಿಸುತ್ತದೆ.

ಪರಿಸರ ಸಂರಕ್ಷಣೆ, ಗ್ರಾಮ ವಿಕಾಸ ಇತ್ಯಾದಿ ವಿಷಯಗಳು ಹಿನ್ನೆಲೆಗೆ ಸರಿದಿರುವ ಈ ಸಂದರ್ಭದಲ್ಲಿ ಈ ಪುಸ್ತಕದ ಓದು ಹೊಸ ಪೀಳಿಗೆಯವರಿಗೆ ಪ್ರೇರೇಪಣೆ ನೀಡುವುದು ಎಂದು ಆಶಿಸಬಹುದು.

(ಕೃಪೆ; ಹೊಸ ಮನುಷ್ಯ ಡಿಸೆಂಬರ್‌ 2020, ಬರಹ- ಕೆ. ಶ್ರೀದೇವಿ)

Related Books