ಗಾಲಿಬ್ ಒಬ್ಬ ಗಜಲ್ ಮಾಂತ್ರಿಕ, ಅನುಭಾವಿಕ, ನಿಷ್ಕಲ್ಮಶ ಜೀವ ಪ್ರೇಮಿ, ಕಡು ಕಾವ್ಯ ವ್ಯಸನಿ. ಈ ಕೃತಿಯಲ್ಲಿ7 ಅಧ್ಯಾಯಗಳಿವೆ. ಗಾಲಿಬ್ ಗುಂಗಿನಲ್ಲಿ ಮೀಯುವ ಪ್ರಸಂಗದ ಔಚಿತ್ಯಪೂರ್ಣ ವಿವರಣೆಯನ್ನು ಲೇಖಕರು ಮೊದಲ 2 ಪುಟಗಳಲ್ಲಿ ಬರೆದುಕೊಂಡಿದ್ದಾರೆ. ಟಿ.ಪಿ.ಇಸ್ಸಾರ್ ರ ಗಾಲಿಬ್ ಕವಿತೆಗಳ ಅನುವಾದಿತ ಪುಸ್ತಕ ಹಾಗು ಕೆ. ವರ್ಮಾರ ಗಾಲಿಬ್ ಬದುಕು ಕುರಿತ ಕೃತಿಗಳ ಒಂದಷ್ಟು ಟಿಪ್ಪಣಿ ಹಾಗೂ ವಿಸ್ತರಣೆ ಈ ಮಿರ್ಜಾ ಗಾಲಿಬ್ ಕೃತಿ. ಗಾಲಿಬ್ ನ ತಿಳಿಯಲು ಕನ್ನಡದಲ್ಲಿ ಉತ್ತಮ ಪ್ರವೇಶಿಕೆಯುಳ್ಳ ಪುಸ್ತಕ.
ಮಿರ್ಜಾ ಗಾಲುಬ್ ಕಥನ ಭಾಗದಲ್ಲಿ ಟರ್ಕಿಯಿಂದ ಬಂದ ಇವರ ಪೂರ್ವಜರ ಕುರಿತು ವಿವರಣೆ ಕೊಟ್ಟು ಗಾಲಿಬ್ ಗೆ ಸಾಹಿತ್ಯದ ಆಸಕ್ತಿ ಜನ್ಮಜಾತವಾಗಿತ್ತು ಎಂಬ ಅಂಶದಿಂದ ಹಿಡಿದು ಕೊನೆಯ ಮೊಘಲ್ ರಾಜ ಬಹದ್ದೂರ್ ಷಾ ನ ಆಸ್ಥಾನ ಕವಿಯಾಗುವವರೆಗಿನ ವಿವರ ಆಸಕ್ತಿಕರವಾಗಿದೆ. ಗಾಲಿಬ್ ನ ಸಂಕಷ್ಟದ ದಿನಗಳು ಭಾಗದಲ್ಲಿ ಅವರ ಶಿಸ್ತಿಲ್ಲದ ಜೀವನ ಶೈಲಿ ನಿತ್ಯ ಮದ್ಯದ ಹವ್ಯಾಸ, ಶ್ರೀಮಂತಿಕೆಯ ಜೀವನ ಅವನನ್ನ ಕಷ್ಟಕ್ಕೀಡು ಮಾಡಿದ್ದ ಪರಿಯನ್ನ ವಿವರಿಸಿದ್ದಾರೆ. ಸಾಲ ತೀರಿಸಲಾಗದೆ ಸೆರಮನೆಯಲ್ಲಿ ಕಾಲ ಕಳೆದ ವಿಚಾರಗಳು ಸಂಕಟ ತರುತ್ತವೆ ಸ್ನೇಹಿತರ ಸಹಕಾರಗಳು ಅಂತಃಕರಣ ತುಂಬುತ್ತವೆ. ಸಿಪಾಯಿ ದಂಗೆ ಯ ಪ್ರತ್ಯಕ್ಷ ಕಂಡು ದಾಖಲಿಸಿದ ಮೊದಲ ಕವಿ ಗಾಲಿಬ್. ತನ್ನ ದಸ್ತುಂಬಾ ದಿನಚರಿಯಲ್ಲಿ ಹಾಗು ಗೆಳೆಯರಿಗೆ ಬರೆದ ಪತ್ರಗಳಲ್ಲಿ ಆ ವಿವರಣೆಗಳಿವೆ.
ಸಿಪಾಯಿಗಳ ಮೊದಲ ಹೋರಾಟ ನಂತರದ ಬ್ರಿಟೀಷ್ ಪಡೆಯವರಿಂದ ನಡೆದ ಭಾರತೀಯರ ಮಾರಣಹೋಮ ವಿವರ ಎದೆ ಝಲ್ಲೆನಿಸುತ್ತದೆ. ಕೊನೆಯ ದಿನಗಳು ಗಾಲಿಬ್ ಗೆ ಸುಖವಿರಲಿಲ್ಲ. ದೊರೆಯಿಂದ ದೊರಕುತ್ತಿದ್ದ ಗೌರವ ಧನವೂ ಬ್ರಿಟೀಷರ ವಂಶಪಾರಂಪರ್ಯ ಪಿಂಚಣಿ ಸಿಪಾಯಿದಂಗೆ ನಂತರ ನಿಂತು ಹೋದ ನಿಲ್ಲಿಸಿದ ಘಟನೆಗಳು ಮನೆಯ ವಸ್ತ್ರ ಪೀಠೋಪಕರಣ ಮಾರಿ ಜೀವನ ನಡೆಸಿದ ಕಾಲದ ಚಿತ್ರಣ ಈ ಎಲ್ಲವನ್ನೂ ’ಮಿರ್ಜಾ ಗಾಲಿಬ್ ಕಥನ ಮತ್ತು ಕಾವ್ಯ’ ಕೃತಿ ಒಳಗೊಂಡಿದೆ.
ಲೇಖಕರೆ ಹೇಳುವಂತೆ ಗಾಲಿಬ್ ಕಾವ್ಯದಿ ಗಜಲ್ ಗಳಲ್ಲು ಏನುಂಟು ಏನಿಲ್ಲ. ಸೂಫಿ ಸಂತರ ದಾರ್ಶನಿಕ ಒಳನೋಟವಿದೆ. ತುಂಟ ಪ್ರೇಮಿಯ ಕುಹಕ ನೋಟವಿದೆ. ಪ್ರಾಮಾಣಿಕವಾಗಿ ಪ್ರೀತಿಸಿದ ಪ್ರೇಮಿಯೊಬ್ಬನ ಆರ್ತನಾದವಿದೆ. ಭಗ್ನಪ್ರೇಮಿಯ ಒಡೆದುಹೊಿದ ಹೃದಯ ಚೂರುಗಳ ಮಿಡಿತದ ಶಬ್ಧವಿದೆ. ಕುಡುಕನೊಬ್ಬನ ರೋಮಾಂಚನವಿದೆ. ಸಮಾಜ ಗೇಲಿ ಮಾಡುವ ವಿದೂಷಕನೊಬ್ಬನ ಹಾಸ್ಯಪ್ರಜ್ಞೆ ಇದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಗಾಲಿಬ್ ನ ಕಾವ್ಯದ ಆಳದಲ್ಲಿ ಅಪ್ಪಟ ಮನುಷ್ಯನೊಬ್ಬನ ತಾಜಾತನದ ತುಡಿತಗಳಿವೆ. ಈ ಕಾರಣಕ್ಕೆ ಗಾಲಿಬ್ ಭಾರತದ ಎಲ್ಲ ಭಾಷೆಗಳ ಕಾವ್ಯ ಪ್ರೇಮಿಗಳ ಪ್ರೀತಿಯ ಕವಿ.
©2024 Book Brahma Private Limited.