ಲೇಖಕ ಡಾ. ಎನ್. ಜಗದೀಶ್ ಕೊಪ್ಪ ಅವರು ರಚಿಸಿರುವ ಕೃತಿ ’ಮಾನವತಾವಾದಿ ಮಧು ದಂಡವತೆ’. ಇದು ಮಧು ದಂಡವತೆಯವರ ಜೀವನ ಚರಿತ್ರೆ. ಪ್ರೊ. ಮಧು ದಂಡವತೆ ಎಂದರೆ, ನೋಂದವರ ನೋವಿಗೆ ಮಧುರವಾದ ಧ್ವನಿ ಹಾಗೂ ಸಾಮಾಜಿಕ ಮೌಲ್ಯಗಳು ಮತ್ತು ಮಾನವ ಹಕ್ಕುಗಳು ಸೇರಿದಂತೆ ಬದುಕಿನ ಘನತೆಗೆ ಮತ್ತೊಂದು ಹೆಸರು.
ಅತ್ಯಂತ ಸರಳ ಜೀವನ ಮತ್ತು ಉನ್ನತ ಚಿಂತನೆಗಳ ಆಗರವಾಗಿದ್ದ ದಂಡವತೆ ಅವರು ವಿದ್ವಾಂಸರು ಮಾತ್ರವಲ್ಲದೆ, ಬರಹಗಾರರಾಗಿದ್ದರು. ಬದುಕಿನುದ್ದಕ್ಕೂ ಸಮಾಜವಾದಿ ಚಿಂತನೆಗಳನ್ನು ಉಸಿರಾಡುತ್ತಾ, ಗಾಂಧೀಜಿಯವರ ಚಿಂತನೆಗಳಿಂದ ಪ್ರೇರಿತರಾಗಿ ದೇಶದ ಮಾದರಿಯ ರಾಜಕಾರಣಿ ಯಾಗಿದ್ದರು. ಅತ್ಯುತ್ತಮ ಸಂಸದೀಯ ಪಟು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ಅತ್ಯುತ್ತಮ ಮನುಷ್ಯರಾಗಿದ್ದ ದಂಡವತೆ ಅವರು ನಾವೆಲ್ಲರೂ ಮೆಚ್ಚುವ ಗುಣಗಳ ಜೊತೆಗೆ ಭವಿಷ್ಯದ ಪೀಳಿಗೆಯನ್ನು ಪೋಷಿಸುತ್ತಿದ್ದ ಅವರು ಭಾರತೀಯ ಸಾರ್ವಜನಿಕ ಜೀವನದಲ್ಲಿ ಅತ್ಯಂತ ವಿಶಿಷ್ಟ ವ್ಯಕ್ತಿಗಳಲ್ಲಿ ಒಬ್ಬರು. ಅವರು ಅಕಾಡೆಮಿ ಜಗತ್ತು ಮತ್ತು ಸಂಸತ್ತು ಈ ಎರಡೂ ವಲಯ ಗಳನ್ನೂ ಅಲಂಕರಿಸಿದ ವ್ಯಕ್ತಿಯಾಗಿದ್ದರು.
ರಾಜಕೀಯ ಮತ್ತು ಪಕ್ಷಗಳ ಗಡಿರೇಖೆಗಳನ್ನು ಮೀರಿ ಅವರು ಎಲ್ಲರಿಂದಲೂ ಪ್ರೀತಿ ಮತ್ತು ಗೌರವ ಪಡೆದ ಕೆಲವು ವ್ಯಕ್ತಿಗಳಲ್ಲಿ ಒಬ್ಬರಾಗಿ ನಿಲ್ಲುತ್ತಾರೆ. ಸಂಸತ್ತಿನ ಹೊರಗೆ ಮತ್ತು ಸಮಾಜದ ಎಲ್ಲಾ ವರ್ಗದ ಜನರ ಗೌರವವನ್ನು ಅವರು ಸಂಪಾದಿಸಿದ್ದರು. ಈ ಗೌರವಕ್ಕೆ ಕಾರಣವೂ ಕೂಡಾ ಸರಳವಾಗಿತ್ತು. ಪ್ರೊ. ದಂಡವತೆ ಅವರು ಸಂವಿಧಾನವು ವಿಧಿಸಿರುವ ಎಲ್ಲಾ ಹಕ್ಕುಗಳನ್ನು ಸಂರಕ್ಷಿಸುವ ಉತ್ಸಾಹ ಮತ್ತು ಎಲ್ಲಾ ಅಡೆತಡೆಗಳ ನಡುವೆಯೂ ಅವರ ರಾಜಿಯಾಗದ ಪರಿಶ್ರಮ ಇದಕ್ಕೆ ಮೂಲ ಕಾರಣವಾಗಿತ್ತು. ಅವರ ಬದುಕಿನ ಮುಖ್ಯಘಟನೆಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.
©2024 Book Brahma Private Limited.