‘ಎಂ.ಎನ್.ಕಾಮತ’ ಸಿವಿಜಿ ಪಬ್ಲಿಕೇಷನ್ಸ್ ನ ಮಕ್ಕಳ ಸಾಹಿತ್ಯ ನಿರ್ಮಾಪಕರು ಮಾಲೆಯಲ್ಲಿ ಪ್ರಕಟವಾದ ಕೃತಿ. ಶಿಶು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಮುಂಡ್ಕೂರು ನರಸಿಂಗ ಕಾಮತ್ರವರು ಹುಟ್ಟಿದ್ದು ಕಾರ್ಕಳದ ಬಳಿಯ ಮುಂಡ್ಕೂರು ಗ್ರಾಮದಲ್ಲಿ. ತಂದೆ ಶ್ರೀನಿವಾಸ ಕಾಮತ್, ತಾಯಿ ತುಂಗಭದ್ರ. ಪ್ರಾಥಮಿಕ ವಿದ್ಯಾಭ್ಯಾಸ ಪಡೆದದ್ದು ಕಾರ್ಕಳದಲ್ಲಿ. ಪ್ರೌಢ ಶಾಲಾ ವಿದ್ಯಾಭ್ಯಾಸಕ್ಕೆ ಸೇರಿದ್ದು ಮಂಗಳೂರಿನ ಕೆನರಾ ಹೈಸ್ಕೂಲು. ಅಲ್ಲಿ ಶ್ರೀ ಗೋವಿಂದ ಪೈಗಳ ಪರಿಚಯವಾಗಿ ಸಾಹಿತ್ಯ ಒಲವಿನಿಂದ ಸ್ನೇಹ ಉಂಟಾಗಿ, ‘ಏಂಜಲ್’ ಎಂಬ ಕೈಬರಹದ ಪತ್ರಿಕೆಯನ್ನೇ ಪ್ರಾರಂಭಿಸಿದರು. ಪ್ರಾರಂಭದಲ್ಲಿ ಇಬ್ಬರೂ ರಚಿಸಿದ್ದು ಇಂಗ್ಲಿಷ್ ಸಾಹಿತ್ಯ. ಕಾಮತರ ಅಂದಿನ ಕಾವ್ಯನಾಮ “ರಾಬಿನ್ ರೆಡ್ ಬ್ರೆಸ್ಟ್”. ಇದೇ ಹೆಸರಿನಲ್ಲಿ ಹಲವಾರು ಸಾಹಿತ್ಯ ರಚನೆಮಾಡಿದ್ದಾರೆ.
ಮುಂದೆ ಇಬ್ಬರೂ ಹೊರಳಿದ್ದು ಕನ್ನಡ ಸಾಹಿತ್ಯದತ್ತ. 1901ರಲ್ಲಿ ಎಫ್.ಎ. ಮುಗಿಸಿದ ಕಾಮತರು ಬಡತನದಿಂದ ಮುಂದೆ ವಿದ್ಯಾಭ್ಯಾಸ ಮುಂದುವರೆಸಲಾಗದೆ ಉದ್ಯೋಗಕ್ಕೆ ಸೇರಿದರು ಕೆಲಸದ ಕಾರಣಕ್ಕೆ ಎರಡು ವರ್ಷ ಮುಂಬಯಿ, ಎಂಟು ವರ್ಷ ಕಲ್ಕತ್ತದಲ್ಲಿ ವಾಸಿಸಿದರು. ಪರಪ್ರಾಂತದಲ್ಲಿದ್ದರ ಪ್ರಯೋಜನ ಮರಾಠಿ ಬಂಗಾಲಿ ಕಲಿತ ಅವರು 1910ರಲ್ಲಿ ತಾಯ್ನಾಡಿಗೆ ಹಿಂದಿರುಗಿದರು. ಪುನಃ ಮದರಾಸಿಗೆ ಹೋಗಿ ಪಡೆದ ಶೈಕ್ಷಣಿಕ ತರಬೇತಿ. ಮೂಲ್ಕಿ, ಬಂಟವಾಳದ ಶ್ರೀ ತಿರುಮಳ ದೇವಾಳದ ಶಾಲೆ ನಂತರ 1918 ಮಂಗಳೂರು ಕೆನರಾ ಹೈಸ್ಕೂಲಿನಲ್ಲಿ ಅಧ್ಯಾಪಕ ವೃತ್ತಿ-ನಿವೃತ್ತರಾಗುವವರೆವಿಗೂ ಸೇವೆ ಸಲ್ಲಿಸಿದರು. ಓದಿದ್ದು ಭೂಗೋಳ ಶಾಸ್ತ್ರವಾದರೂ ರಚಿಸಿದ್ದು ಶಿಶುಸಾಹಿತ್ಯ, ಹರಟೆ, ಕವನ, ಕಥೆ. ಬಾಲಕರ ಮಹಾಭಾರತ, ಯಾದವಕೃಷ್ಣ, ಚಂಡ ಕೌಶಿಕ, ಮುಂತಾದ ಗದ್ಯಕೃತಿಗಳು. ಸಾಹಿತ್ಯರೈಲ್ವೆ, ಬೀಡಿ ಸೇದಬೇಡಿ ಇವರ ಪ್ರಸಿದ್ಧ ಹರಟೆಗಳು.
ಇದಲ್ಲದೆ ಒಂದನೆಯ ತರಗತಿಯಿಂದ ಎಂಟನೆಯ ತರಗತಿಯವರೆವಿಗೂ ಅನೇಕ ಪಠ್ಯಪುಸ್ತಕಗಳ ರಚಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕನ್ನಡ ಕಥೆಗಾರರ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡುತ್ತಲೇ ಹಲವಾರು ಸಣ್ಣ ಕಥೆಗಳನ್ನು ಹೇಳಿ ರಂಜಿಸಿದರಂತೆ. ಪತ್ರಿಕಾ ಕ್ಷೇತ್ರದಲ್ಲಿಯೂ ದುಡಿದಿರುವ ಎಮ್. ಎನ್. ಕಾಮತರು 60ಕ್ಕಿಂತ ಹೆಚ್ಚು ನಾಟಗಳನ್ನೂ, ನೂರಾರು ಕವಿತೆಗಳನ್ನೂ, ನೂರಾರು ಕಥೆಗಳನ್ನೂ, ಹರಟೆಗಳನ್ನೂ ಬರೆದಿದ್ದು ನವೋದಯ ಕನ್ನಡ ಕಾವ್ಯಕ್ಕೆ ಕಾಮತರು ಕೊಟ್ಟ ಕಾಣಿಕೆ ಮೆಚ್ಚಬೇಕಾದುದು. ಇಂಥಹ ಮಹನೀಯರ ಕುರಿತಾಗಿ ಮುಂದಿನ ತಲೆಮಾರಿಗೆ ಅರಿವು ಮೂಡಿಸುವ ಸಲುವಾಗಿ ಲೇಖಕ ಡಾ. ಮಹಾಬಲೇಶ್ವರ ರಾವ್ ಈ ಕೃತಿಯನ್ನು ರಚಿಸಿದ್ದಾರೆ.
©2024 Book Brahma Private Limited.