‘ಜೋನ್ಪುರಿ ಖಯಾಲ್’ ರೂಮಿ ಹರೀಶ್ ಬದುಕಿನ ಪುಟಗಳು ಈ ಕೃತಿಯನ್ನು ಲೇಖಕ ದಾದಾಪೀರ್ ಜೈಮನ್ ಸಂಯೋಜನೆ ಮತ್ತು ನಿರೂಪಣೆ ಮಾಡಿದ್ದಾರೆ. ಈ ಕೃತಿಗೆ ಮಹಿಳಾ ಹಕ್ಕುಗಳ ಹೋರಾಟಗಾರರಾದ ಶಕುನ್ ದೌಂಡಿಯಾಖೇಡ್, ಹಿರಿಯ ವಿಮರ್ಶಕಿ ಎಂ.ಎಸ್. ಆಶಾದೇವಿ, ರಂಗನಿರ್ದೇಶಕ ಕೆ.ಪಿ. ಲಕ್ಷ್ಮನ್ ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ.. ‘ಸುಮತಿ ಹೆಸರಿನ ಯುವತಿ ರೂಮಿ ಹರೀಶ್ ಆಗಿ ಹೊರಹೊಮ್ಮುವ ಪ್ರಯಾಣ ಮೊದಲಿಗೆ ಹಲವು ವರ್ಷಗಳ ಕಾಲ ರಕ್ತ, ಬೆವರು ಮತ್ತು ಕಣ್ಣೀರನ್ನು ಬೇಡಿತು. ರೂಮಿ ಹರೀಶ್ ಕೂಡಾ ಕುಟುಂಬ, ಸ್ನೇಹಿತರು ಮತ್ತು ತನ್ನ ಸಹಪ್ರಯಾಣಿಕರನ್ನು, ತನ್ನನ್ನು ಅವರಂತೆಯೇ ಸ್ವೀಕರಿಸಲು ಸವಾಲು ಹಾಕಿದರು. ನಾನು ಹೆಚ್ಚು ಪ್ರೀತಿಸಿದ, ಮೆಚ್ಚಿದ, ಆರಾಧಿಸಲ್ಪಟ್ಟ ರೂಮಿ ಹರೀಶ್ ಒಬ್ಬ ನಿರಂತರ ಹುಡುಕಾಟದ ಆತ್ಮವಾಗಿ ಉಳಿಯುತ್ತಾನೆ’ ಎನ್ನುತ್ತಾರೆ ಶಕುನ್ ದೌಂಡಿಯಾಖೇಡ್. ಇದು ತನ್ನನ್ನು ಹುಡುಕಿಕೊಳ್ಳುವುದೂ ಹೌದು ಹಾಗೂ ಎಲ್ಲರನ್ನೂ ಒಪ್ಪಿಕೊಳ್ಳುವ, ಒಳಗೊಳ್ಳುವ, ವಿಭಜನೆಯನ್ನು ತಿರಸ್ಕರಿಸುವ, ಭಿನ್ನತೆಯನ್ನು ಸ್ವೀಕರಿಸುವ ಜಗತ್ತಿನ ಹುಡುಕಾಟವೂ ಹೌದು ಎಂದಿದ್ದಾರೆ.
ವಿಮರ್ಶಕಿ ಆಶಾದೇವಿ ಅವರು ಈ ನಿರೂಪಣೆ ಒಡಲ ಜೇಡ ನೇಯುವ ಬದುಕಿನ ಬಟ್ಟೆಯ ವಿನ್ಯಾಸ, ಬಣ್ಣ ಎಲ್ಲದರಲ್ಲೂ ರೂಮಿಯ ಉತ್ಕಟನೆ, ಬೇಗೆಯಷ್ಟೇ ಅಲ್ಲದೇ ನಾನೆಂಬ ನಾನು ಯಾರು, ಅದರ ಒಳಹೊರಗನ್ನು ನಾನಲ್ಲದೇ ಮತ್ತಾರೂ ನಿರ್ಧರಿಸಬಾರದೆನ್ನುವ ಕೆಚ್ಚು, ಆದಿಮ ಹಕ್ಕಿನ ತೀವ್ರತೆಯಲ್ಲಿ ಪ್ರತಿಪಾದನೆಯಾಗಿದೆ ಎಂದಿದ್ದಾರೆ. ಹಾಗೇ ದಾರಿಯಿಲ್ಲದಲ್ಲಿ ದಾರಿಯೊಂದನ್ನು ಕಟ್ಟುವ ಇಲ್ಲಿನ ಪರಿ ನಮ್ಮೊಳಗನ್ನು ಎದೆಯೊಳಗಿಳಿದ ಅಲಗಿನಂತೆ ಕಾಡುತ್ತದೆ ಎಂದಿದ್ದಾರೆ
©2024 Book Brahma Private Limited.