ಮಹೇಶ್ ಕುಮಾರ್ ಸಿ.ಎಸ್ ಅವರ ಸಂಶೋಧನಾ ಕೃತಿ ‘ಈಶ್ವರ ಅಲ್ಲಾ ತೇರೋ ನಾಮ್ ’- ಕೆಲ ದಶಕಗಳಿಂದ ಕರ್ನಾಟಕದ ಗುರು ದತ್ತಾತ್ರೇಯ ಬಾಬಾ ಬುಡನ್ಗಿರಿ ದರ್ಗಾದ ವಿವಾದ ಕಾರಣ ಮತ್ತು ಅದರ ನಿವಾರಣೆಗೆ ಒಂದು ಪರಿಹಾರವನ್ನು ಈ ಕೃತಿಯು ತನ್ನದೇ ನೆಲೆಯಲ್ಲಿ ಮಂಡಿಸುತ್ತದೆ. ಗಿರಿಯ ವಿವಾದವೇ ಈ ಸಂಶೋಧನೆಯ ಕೇಂದ್ರ ಪ್ರಶ್ನೆಯನ್ನು – ದರ್ಗಾಗಳು ಸಿಂಕ್ರಟಿಸಂನ ಪರಿಣಾಮವೇ? – ರೂಪಿಸುವುದು ಮಾತ್ರವಲ್ಲದೆ, ಅದು ಗಿರಿಯ ವಿವಾದವನ್ನು ಬಗೆಹರಿಸಲು ಮತ್ತಷ್ಟು ವಿಶಾಲ ಪರಿಪ್ರೇಕ್ಷ್ಯದಲ್ಲಿ ದರ್ಗಾಗಳನ್ನು ಇಟ್ಟು ನೋಡಬೇಕಾದ ಅಗತ್ಯವನ್ನು ಸೂಚಿಸುತ್ತದೆ.
ಈ ಅಗತ್ಯವನ್ನು ಆಧರಿಸಿ ಮಹೇಶ್, ದರ್ಗಾವನ್ನು ಸಿಂಕ್ರಟಿಸಂ ಎಂದು ಪರಿಕಲ್ಪಿಸುವುದು ಏಕೆ ಸರಿಯಲ್ಲ, ಅದು ಹೇಗೆ ದರ್ಗಾದ ಶ್ರದ್ಧೆಯ ಭಾಗವಾಗಿರುವ ಜನರ ದೃಷ್ಟಿಗೆ ಅನುಗುಣವಾಗಿಲ್ಲ ಎನ್ನುವುದನ್ನು ವಿವರಿಸುತ್ತಾ, ಮುಂದೆ ಹೋಗಿ ದರ್ಗಾ ಸಿಂಕ್ರಟಿಸಂನ ಪರಿಣಾಮವಲ್ಲ ಎಂದು ವಾದಿಸುತ್ತಾರೆ. ಈ ವಾದ ಮಂಡನೆಗೆ, ಸಿಂಕ್ರಟಿಸಂ ಪರಿಭಾಷೆಯ ಪೂರ್ವಗ್ರಹಿಕೆ, ಭಾರತದಲ್ಲಿ ಇದರ ಬಳಕೆಯ ಇತಿಹಾಸವನ್ನು ಪರಿಶೀಲನೆಗೆ ಮತ್ತು ಈ ಪರಿಕಲ್ಪನೆಯ ಬಳಕೆ ಮಾಡುವ ವಿದ್ವಾಂಸರ ತಿಳುವಳಿಕೆಯ ಚೌಕಟ್ಟನ್ನು ಹೊರತೆಗೆದು ತೋರಿಸುತ್ತದೆ. ಇದು ಸಂಶೋಧನೆಯ ಅರ್ಧ ದಾರಿಯ ಪ್ರಯಾಣವಾಗಿದೆ. ಉಳಿದರ್ಧ, ದರ್ಗಾಗಳಿಗೆ ಸಿಂಕ್ರಟಿಸಂಗಿಂತ ಭಿನ್ನವಾದ ವಿವರಣೆಯನ್ನು, ಅದಕ್ಕೆ ನಡೆದುಕೊಳ್ಳುವ ಜನರ ಗ್ರಹಿಕೆಯನ್ನು – ಸಂಶೋಧಕರ ಮಾತಿನಲ್ಲೇ ಹೇಳುವುದಾದರೆ, ವಸ್ತು ಪಾತಳಿಯ ಹಂತದಲ್ಲೇ – ವಿವರಿಸುವ ಸವಾಲನ್ನು ಕೈಗೆತ್ತಿಕೊಳ್ಳುತ್ತದೆ.
©2024 Book Brahma Private Limited.