‘ಹಾಡಿನ ಕಣಜ ಸುಕ್ರಿ ಬೊಮ್ಮಗೌಡ’ ಲೇಖಕಿ ಅಕ್ಷತಾ ಕೃಷ್ಣಮೂರ್ತಿ ಅವರು ರಚಿಸಿರುವ ಸುಕ್ರಿ ಬೊಮ್ಮಗೌಡ ಅವರ ಜೀವನ ಚರಿತ್ರೆ. ಈ ಕೃತಿಗೆ ಲೇಖಕ ಎಂ.ಜಿ. ಚಂದ್ರಶೇಖರಯ್ಯ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ 'ಉತ್ತರ ಕನ್ನಡ ಜಿಲ್ಲೆ ಪ್ರಾಕೃತಿಕ ಪರಿಸರ, ನದಿ, ಕಾಡು, ಕಡಲಿಗೆ ಪ್ರಸಿದ್ಧವಾಗಿರುವಂತೆ ಸಾಂಸ್ಕೃತಿಕ ಬಹುತ್ವದಿಂದಲೂ ಗಮನ ಸೆಳೆಯುತ್ತದೆ. ಹಲವು ಬುಡಕಟ್ಟು ಸಮುದಾಯಗಳು. ಭಾಷೆ, ಜನಪದ ಕಲೆಗೂ ಆ ಜಿಲ್ಲೆ ಖ್ಯಾತಿ ಪಡೆದಿದೆ. ಅಲ್ಲಿನ ವಿಶಿಷ್ಟ ಬುಡಕಟ್ಟು ಸಮುದಾಯವಾಗಿರುವ ಹಾಲಕ್ಕಿ ಒಕ್ಕಲಿಗರು ತಮ್ಮ ವಿಶಿಷ್ಟ ವೇಷಭೂಷಣ, ಜನಪದ ಕಲೆ, ಪರಿಸರ ಪ್ರೀತಿ, ಹಾಡು-ನೃತ್ಯದಿಂದ ಈಚಿನ ವರ್ಷಗಳಲ್ಲಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವರು. ಹಾಡಿನ ಕಣಜ ಎಂದೇ ಖ್ಯಾತರಾಗಿರುವ ಸುಕ್ರಿ ಬೊಮ್ಮಗೌಡರು ಸಾವಿರಾರು ಹಾಡುಗಳನ್ನು ಕಟ್ಟಿ ಹಾಡಿರುವ ಹುಟ್ಟು ಕವಯತ್ರಿ, ಜನಪದ ವೈದ್ಯೆ, ಜನಪರ ಹೋರಾಟಗಾರರು. ತಮ್ಮ ಕಷ್ಟದ ಬದುಕಿನಲ್ಲೂ ಹಾಡುಗಾರಿಕೆಯಿಂದ ಖ್ಯಾತಿ ಪಡೆದಿರುವ ಇವರು ಹತ್ತಾರು ಸಂಘ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿರುವ ಅಪರೂಪದ ಪ್ರತಿಭೆ ಎಂದಿದ್ದಾರೆ ಚಂದ್ರಶೇಖರಯ್ಯ. ಹಾಗೇ ಈ ಪ್ರತಿಭಾವಂತ ಗಾಯಕಿಯನ್ನು ಪದ್ಮಶ್ರೀ ಪ್ರಶಸ್ತಿ ಹುಡುಕಿಕೊಂಡು ಬಂದಿತು. ಅಕ್ಷರ-ಜ್ಞಾನವಿಲ್ಲದ ಬುಡಕಟ್ಟು ಮಹಿಳೆಯೊಬ್ಬರು ಪದ್ಮ ಪ್ರಶಸ್ತಿ ಪಡೆದದ್ದು ಅಪರೂಪದಲ್ಲಿ ಅಪರೂಪದ ಪ್ರಸಂಗ. ಇಳಿವಯಸ್ಸಿನ ಸುಕ್ರಿ ಬೊಮ್ಮಗೌಡರನ್ನು ಕುರಿತು ಕವಯಿತ್ರಿ ಅಕ್ಷತಾ ಕೃಷ್ಣಮೂರ್ತಿ ಹಾಡಿನ ಕಣಜ ಸುಕ್ರಿ ಬೊಮ್ಮಗೌಡ ಜೀವನ ಚರಿತ್ರೆ ರಚಿಸಿದ್ದಾರೆ. ಆಕರ್ಷಕವಾದ ಬರವಣಿಗೆಯ ಲೇಖಕಿ ತಮ್ಮ ಜವಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.