ಫ್ರೆಡರಿಕ್‌ ನೀಷೆ

Author : ಟಿ.ಎನ್. ವಾಸುದೇವ ಮೂರ್ತಿ

Pages 264

₹ 240.00




Year of Publication: 2019
Published by: ವಂಶಿ ಪ್ರಕಾಶನ
Address: ನೆಲಮಂಗಲ, ಬೆಂಗಳೂರು
Phone: 9916595916

Synopsys

ಕನ್ನಡದಲ್ಲಿ ನೀಷೆ ವಿಚಾರಗಳ ಬಗ್ಗೆ ಪ್ರಾಸಂಗಿಕವಾಗಿ ಅಲ್ಲಲ್ಲಿ ಚರ್ಚೆಗಳಾಗಿವೆಯಾದರೂ ನೀಷೆಯನ್ನು ಪರಿಚಯಿಸುವ ಪ್ರತ್ಯೇಕವಾದ ಒಂದು ಪುಸ್ತಕ ಆತನಕ ಪ್ರಕಟವಾಗಿರಲಿಲ್ಲ. ಫ್ರೆಡರಿಕ್ ನೀಷೆಯ ಪ್ರಾತಿನಿಧಿಕ ಬರಹಗಳ ಅನುವಾದವಾಗಿದ್ದ ಆ ಕೃತಿ ಹಲವು ಮಿತಿಗಳನ್ನು ಹೊಂದಿದ್ದವು. ನೀಷೆಯ ಹಿನ್ನೆಲೆ-ಪ್ರೇರಣೆಗಳು, ಧಾರ್ಮಿಕತೆಕ್ರಿಶ್ಚಿಯಾನಿಟಿಯ ಕುರಿತ ಅವನ ವಿದ್ರೋಹಕಾರೀ ವಿಚಾರಗಳು, ಸಂಗೀತದ ಮೇಲಿನ ಅವನ ವ್ಯಾಮೋಹ, ಅವನ ಭಗ್ನಪ್ರೇಮ-ಮನೋವೈಕಲ್ಯ, ದುರಂತಮಯ ಸಾವು ಮತ್ತು ವಿವಾದಗಳು ಹಾಗೂ ಇಂದಿನ ತಲೆಮಾರಿಗೆ ಅವನ ಪ್ರಸ್ತುತತೆ - ಇವೇ ಮುಂತಾದ ವಿಚಾರಗಳ ಮೇಲೆ ಇನ್ನಷ್ಟು ಬೆಳಕು ಚೆಲ್ಲಬೇಕಾದ ಅಗತ್ಯವಿತ್ತು. 20ನೇ ಶತಮಾನದ ಮಹಾ ಕ್ರೂರಿಯಾಗಿದ್ದ ಅಡಾಲ್ಫ್ ಹಿಟ್ಲರ್ ನೀಷೆ ಬರವ ಗೆಗಳಿಂದ ಅಗಾಧವಾಗಿ ಪ್ರೇರೇಪಿತನಾಗಿದ್ದ; ಮುಖ್ಯವಾಗಿ, ನಾಜೀಗಳ ದುರಭಿಮಾನ ಹಾಗೂ ಜನಾಂಗೀಯ ದ್ವೇಷಕ್ಕೆ ಫ್ರೆಡರಿಕ್ ತಾತ್ವಿಕ ಸಮರ್ಥನೆ ಒದಗಿಸಿದ್ದ ಎಂದೇ ನಂಬಲಾಗಿತ್ತು. ಈ ಹಿನ್ನೆಲೆಯಲ್ಲಿ ಡಾ. ಅಂಬೇಡ್ಕರ್‍ಅವರು ಫ್ರೆಡರಿಕ್ ನೀಷೆಯನ್ನು ಒಬ್ಬ ಮನುವಾದಿ ಎಂದು ತೀರ್ಮಾನಿಸಿ ತೀಕ್ಷ್ಣವಾಗಿ ಟೀಕಿಸುತ್ತಾರೆ.ಈ ಟೀಕೆಗೆ ಅನುರೂಪವಾಗಿ ಫ್ರೆಡರಿಕ್ ನೀಷೆ ಸಹ ತನ್ನಒಂದೆರಡು ಕೃತಿಗಳಲ್ಲಿ ಮನುಸ್ಮøತಿಯನ್ನು ವಿಶೇಷವಾಗಿ ಪ್ರಶಂಸಿಸುತ್ತಾನೆ. ಪ್ರಾಯಶಃ ಈ ಕಾರಣಕ್ಕೇ ನಮ್ಮಜನಕ್ಕೆ ಫ್ರೆಡರಿಕ್ ನೀಷೆ ಪಥ್ಯನೆನಿಸಲಿಲ್ಲ ಎಂದುತೋರುತ್ತದೆ.ವಾಸುದೇವಮೂರ್ತಿಯವರು ಈ ವಿವಾದದಕುರಿತು‘ನೀಷೆ ನಿಜಕ್ಕೂ ಮನುವಾದಿಯೇ?’ಎಂಬ ಅಧ್ಯಾಯದಲ್ಲಿ ವಿಶದವಾಗಿ ಚರ್ಚಿಸಿದ್ದಾರೆ. ಅದರಲ್ಲಿ ನೀಷೆಗೆ ಹತ್ತಿರುವ ಕಳಂಕವನ್ನು, ಅವನ ವಿಷಯದಲ್ಲಿ ಹುಟ್ಟಿರುವ ಅಪಕಲ್ಪನೆಗಳನ್ನುಅತ್ಯಂತ ಸಮರ್ಥವಾಗಿ ವಿಶ್ಲೇಷಿಸಿದ್ದಾರೆ.

About the Author

ಟಿ.ಎನ್. ವಾಸುದೇವ ಮೂರ್ತಿ
(30 December 1974)

ಟಿ.ಎನ್.ವಾಸುದೇವ ಮೂರ್ತಿ ಅವರು ಕಿ.ರಂ.ನಾಗರಾಜ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಅಲ್ಲಮ ಪ್ರಭುವಿನ ವಚನಗಳ ದಾರ್ಶನಿಕ ಮರುಚಿಂತನೆಯ ವಿಭಿನ್ನ ಸ್ವರೂಪಗಳು ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಶಸ್ತಿ ಸಂದಿದೆ. ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು ಪಡೆದ ಮೇಲೆ ಬೆಂಗಳೂರಿನ ಹಲವು ಪ್ರಮುಖ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನ್ಯಾಷನಲ್  ಕಾಲೇಜು, ಜೈನ್ ವಿಶ್ವವಿದ್ಯಾಲಯ ಕಾವ್ಯಮಂಡಲ ಮೊದಲಾದ ಕನ್ನಡ ಸ್ನಾತಕೋತ್ತರ ಕೇಂದ್ರಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಎಂ.ಎ. ಹಾಗೂ ಎಂ.ಫಿಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಪ್ರಭಾವದಿಂದ ದೀಕ್ಷೆ ...

READ MORE

Excerpt / E-Books

ಗೆಳೆಯ ಶ್ರೀ ಟಿ.ಎನ್. ವಾಸುದೇವಮೂರ್ತಿಯವರು ಸುಮಾರು ಹತ್ತು ವರ್ಷಗಳ ಹಿಂದೆ ಆಧುನಿಕ ಯುರೋಪಿಯನ್ ತತ್ವಜ್ಞಾನದ ಪಿತಾಮಹನೆನಿಸಿದ ಫ್ರೆಡರಿಕ್ ನೀಷೆ ಕುರಿತು ‘ಹುಚ್ಚುತನವೇ ಅನುಗ್ರಹ’ ಎಂಬ ಕೃತಿಯನ್ನು ಬರೆದಿದ್ದರು. ಕನ್ನಡದಲ್ಲಿ ನೀಷೆ ವಿಚಾರಗಳ ಬಗ್ಗೆ ಪ್ರಾಸಂಗಿಕವಾಗಿ ಅಲ್ಲಲ್ಲಿ ಚರ್ಚೆಗಳಾಗಿವೆಯಾದರೂ ನೀಷೆಯನ್ನು ಪರಿಚಯಿಸುವ ಪ್ರತ್ಯೇಕವಾದ ಒಂದು ಪುಸ್ತಕ ಆತನಕ ಪ್ರಕಟವಾಗಿರಲಿಲ್ಲ. ಫ್ರೆಡರಿಕ್ ನೀಷೆಯ ಪ್ರಾತಿನಿಧಿಕ ಬರಹಗಳ ಅನುವಾದವಾಗಿದ್ದ ಆ ಕೃತಿ ಹಲವು ಮಿತಿಗಳನ್ನು ಹೊಂದಿದ್ದವು. ನೀಷೆಯ ಹಿನ್ನೆಲೆ-ಪ್ರೇರಣೆಗಳು, ಧಾರ್ಮಿಕತೆಕ್ರಿಶ್ಚಿಯಾನಿಟಿಯ ಕುರಿತ ಅವನ ವಿದ್ರೋಹಕಾರೀ ವಿಚಾರಗಳು, ಸಂಗೀತದ ಮೇಲಿನ ಅವನ ವ್ಯಾಮೋಹ, ಅವನ ಭಗ್ನಪ್ರೇಮ-ಮನೋವೈಕಲ್ಯ, ದುರಂತಮಯ ಸಾವು ಮತ್ತು ವಿವಾದಗಳು ಹಾಗೂ ಇಂದಿನ ತಲೆಮಾರಿಗೆ ಅವನ ಪ್ರಸ್ತುತತೆ - ಇವೇ ಮುಂತಾದ ವಿಚಾರಗಳ ಮೇಲೆ ಇನ್ನಷ್ಟು ಬೆಳಕು ಚೆಲ್ಲಬೇಕಾದಅಗತ್ಯವಿತ್ತು.ಈ ಕೃತಿಅಂತಹ ಕೊರತೆಗಳನ್ನೆಲ್ಲ ನೀಗಿಸಿದೆ. 20ನೇ ಶತಮಾನದ ಮಹಾ ಕ್ರೂರಿಯಾಗಿದ್ದ ಅಡಾಲ್ಫ್ ಹಿಟ್ಲರ್ ನೀಷೆ ಬರವಣ ಗೆಗಳಿಂದ ಅಗಾಧವಾಗಿ ಪ್ರೇರೇಪಿತನಾಗಿದ್ದ; ಮುಖ್ಯವಾಗಿ, ನಾಜೀಗಳ ದುರಭಿಮಾನ ಹಾಗೂ ಜನಾಂಗೀಯ ದ್ವೇಷಕ್ಕೆ ಫ್ರೆಡರಿಕ್ ತಾತ್ವಿಕ ಸಮರ್ಥನೆ ಒದಗಿಸಿದ್ದ ಎಂದೇ ನಂಬಲಾಗಿತ್ತು. ಈ ಹಿನ್ನೆಲೆಯಲ್ಲಿ ಡಾ. ಅಂಬೇಡ್ಕರ್‍ಅವರು ಫ್ರೆಡರಿಕ್ ನೀಷೆಯನ್ನು ಒಬ್ಬ ಮನುವಾದಿ ಎಂದು ತೀರ್ಮಾನಿಸಿ ತೀಕ್ಷ್ಣವಾಗಿ ಟೀಕಿಸುತ್ತಾರೆ.ಈ ಟೀಕೆಗೆ ಅನುರೂಪವಾಗಿ ಫ್ರೆಡರಿಕ್ ನೀಷೆ ಸಹ ತನ್ನಒಂದೆರಡು ಕೃತಿಗಳಲ್ಲಿ ಮನುಸ್ಮøತಿಯನ್ನು ವಿಶೇಷವಾಗಿ ಪ್ರಶಂಸಿಸುತ್ತಾನೆ. ಪ್ರಾಯಶಃ ಈ ಕಾರಣಕ್ಕೇ ನಮ್ಮಜನಕ್ಕೆ ಫ್ರೆಡರಿಕ್ ನೀಷೆ ಪಥ್ಯನೆನಿಸಲಿಲ್ಲ ಎಂದುತೋರುತ್ತದೆ.ವಾಸುದೇವಮೂರ್ತಿಯವರು ಈ ವಿವಾದದಕುರಿತು‘ನೀಷೆ ನಿಜಕ್ಕೂ ಮನುವಾದಿಯೇ?’ಎಂಬ ಅಧ್ಯಾಯದಲ್ಲಿಬಹ¼ ವಿಶದವಾಗಿ ಚರ್ಚಿಸಿದ್ದಾರೆ. ಅದರಲ್ಲಿ ನೀಷೆಗೆ ಹತ್ತಿರುವ ಕಳಂಕವನ್ನು, ಅವನ ವಿಷಯದಲ್ಲಿ ಹುಟ್ಟಿರುವ ಅಪಕಲ್ಪನೆಗಳನ್ನುಅತ್ಯಂತ ಸಮರ್ಥವಾಗಿ ವಿಶ್ಲೇಷಿಸಿದ್ದಾರೆ. ಸಾಮಾನ್ಯವಾಗಿ ಯಾವುದೇ ಮಹತ್ವದ ಚಿಂತಕನ ಕುರಿತು ಬರೆವಾಗ ಬದುಕು- ಬರೆಹ ಎಂಬ ಕ್ಲೀಷೆಯನ್ನು ಬಳಸಲಾಗುತ್ತದೆ. ಆದರೆ ಒಬ್ಬ ಸಾಹಿತಿಯ ಬದುಕು- ಬರೆಹಗಳು ಪ್ರತ್ಯೇಕವಾದುದಲ್ಲ. ಅವೆರಡರ ನಡುವೆ ಒಂದು ಸಾವಯವ ಸಂಬಂಧವಿರುತ್ತದೆ. ಅವನ ಬರೆಹ ಅವನ ಬದುಕಿನ ಘಟನೆಗಳು ಹಾಗೂ ಅನುಭವಗಳ ಪ್ರತಿಫಲನವೇ ಆಗಿರುತ್ತದೆ. ಈ ಕೃತಿಯಲ್ಲಿ ನೀಷೆಯ ಬರೆಹಗಳನ್ನು ಪರಿಚಯಿಸುವುದರ ಜೊತೆಗೆ ಅವನ ಬದುಕಿನ ಕೆಲವು ಪ್ರಮುಖ ವಿವರಗಳನ್ನು ದಾಖಲಿಸಿದ್ದಾರೆ. ಅವನ ಬದುಕಿನ ಆಗು ಹೋಗುಗಳು ಅವನ ಬರವಣ ಗೆಯ ಮೇಲೆ ಉಂಟು ಮಾಡುತ್ತಿದ್ದ ಪ್ರಭಾವವನ್ನು ಓದುಗರು ಇದರಲ್ಲಿ ಗುರುತಿಸಬಹುದು. ಈ ಜೀವನ ಚರಿತ್ರೆಯನ್ನು ಓದುತ್ತ ಹೋದರೆ ಲೇಖಕರು ನೀಷೆಯ ಬಗ್ಗೆ ಅಪಾರ ಸೆಳೆತ ಹೊಂದಿದ್ದಾರೆಂಬುದು ಸುಲಭವಾಗಿಯೇ ಸ್ಪಷ್ಟವಾಗುತ್ತದೆ. ಈ ತರಹದ ಸೆಳೆತ, ವ್ಯಾಮೋಹಗಳು ಕೆಲವು ಸಲ ಒಬ್ಬ ಲೇಖಕನನ್ನು ಪೂರ್ವಗ್ರಹ ಪೀಡಿತನನ್ನಾಗಿಸುವ ಅಪಾಯ ಇಲ್ಲದಿಲ್ಲ. ಒಬ್ಬ ಚಿಂತಕನನ್ನು ಯಥಾರ್ಥವಾಗಿ ಅವಲೋಕಿಸಲು ಈ ತರಹದ ಸೆಳೆತ ತೊಡಕಾಗಲೂ ಬಹುದು. ಆದರೆ ವಾಸುದೇವ ಮೂರ್ತಿಯವರು ಕೃತಿಯುದ್ದಕ್ಕೂ ನೀಷೆಯನ್ನು ಬಹಳ ವಸ್ತುನಿಷ್ಠವಾಗಿ, ಆದರೆ ಅತ್ಯಂತ ಸಹಾನುಭೂತಿಯಿಂದ ವಿಮರ್ಶಿಸುತ್ತ, ಪರಿಚಯಿಸುತ್ತ ಹೋಗುತ್ತಾರೆ. ಇದರ ಹಿನ್ನುಡಿಯಂತೂ ರತ್ನಕ್ಕೆ ಕುಂದಣವಿಟ್ಟಂತೆ ಕೃತಿಯ ಬೆಲೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಶತಮಾನದ ಅತ್ಯಂತ ವಿವಾದಾತ್ಮಕ ಅನುಭಾವಿ ಎನಿಸಿದ ಓಶೋ ಭಾರತೀಯ ಹಿನ್ನೆಲೆಯಲ್ಲಿ ಫ್ರೆಡರಿಕ್ ನೀಷೆಯನ್ನು ಕುರಿತು ವಿವೇಚಿಸುತ್ತಾರೆ. ಫ್ರೆಡರಿಕ್ ನೀಷೆಯ ಬಗ್ಗೆ ಓಶೋರಷ್ಟು ವಿಸ್ತಾರವಾಗಿ, ಹಲವು ಒಳನೋಟಗಳಿಂದ ಕೂಡಿದ ಮಾತುಗಳನ್ನಾಡಿದ ಮತ್ತೊಬ್ಬ ಚಿಂತಕ ನಮಗೆ ಸಿಗುವುದಿಲ್ಲ. ಹಿನ್ನುಡಿಯ ರೂಪದಲ್ಲಿರುವ ಓಶೋ ವಿಚಾರಗಳು ಮತ್ತು ನೀಷೆಯ ಹುಚ್ಚನ್ನು ಓಶೋ ವ್ಯಾಖ್ಯಾನಿಸುವ ಬಗೆ ನಮಗೆ ನೀಷೆಯನ್ನು ಇನ್ನಷ್ಟು ಆಪ್ತನನ್ನಾಗಿಸುತ್ತದೆ. ಇದರ ಒಂದೊಂದು ಪುಟದಲ್ಲೂ ವಾಸುದೇವಮೂರ್ತಿಯವರ ಶ್ರಮ ಮತ್ತು ಪರಿಶ್ರಮ ಎದ್ದುಕಾಣ ಸುತ್ತದೆ. ಆಧುನಿಕ ಚಿಂತನೆಯನ್ನು ಪ್ರಭಾವಿಸಿದ ಇಂತಹ ಇನ್ನೂ ಹಲವು ದೈತ್ಯ ಪ್ರತಿಭೆಗಳು ಇವರ ಲೇಖನಿಯಿಂದ ಕನ್ನಡಿಗರಿಗೆ ಪರಿಚಯವಾಗಲಿ ಎಂದು ನಿರೀಕ್ಷಿಸುತ್ತೇನೆ. ಇಂತಹ ಒಳ್ಳೆಯ ಕೃತಿಯನ್ನು ನೀಡಿದ ಗೆಳೆಯ-ಸಹೋದ್ಯೋಗಿ ಶ್ರೀ ಟಿ. ಎನ್. ವಾಸುದೇವಮೂರ್ತಿಯವರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ಅವರಿಗೆ ಭವಿಷ್ಯದಲ್ಲಿ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. -ಡಾ. ಗೂಳಪ್ಪ ವಕ್ಕುಂದ ದಾನವ ಗುರು ನೀಷೆ* ಕಳೆದ ನೂರೈವತ್ತು ವರ್ಷಗಳಲ್ಲಿ ಜನಿಸಿದ ಮಹಾ ಮೇಧಾವಿಗಳಲ್ಲಿ ಒಬ್ಬನಾದ ಫ್ರೆಡರಿಕ್ ನೀಷೆಯ ಬದುಕು ಸಹ ಅವನ ತತ್ವಜ್ಞಾನದಷ್ಟೇ ವಿಚಿತ್ರ ವಿರೋಧಾಭಾಸಗಳಿಂದ ಕೂಡಿದೆ. ಚರ್ಚಿನ ಪಾದ್ರಿಗಳ ವಂಶದಲ್ಲಿ ಜನಿಸಿದ ಈ ವ್ಯಕ್ತಿ ದೇವರ ಸಾವನ್ನು ಘೋಷಿಸಿದ. ಸತ್ಯ ಮತ್ತು ಸ್ವಾತಂತ್ರ್ಯಗಳನ್ನು ಆರಾಧಿಸಿದ ಒಬ್ಬ ತತ್ವಜ್ಞಾನಿ ನಾಜೀವಾದದ ಹರಿಕಾರನೆನಿಸಿದ (ಇದಕ್ಕೆ ಅವನ ತಂಗಿಗೆ ಧನ್ಯವಾದ ಹೇಳಬೇಕು!). ‘ಹೊಸ ಮನುಷ್ಯ’ನ ಅವತರಣವನ್ನು ಸಾರಿದ ಪ್ರವಾದಿ ಕೊನೆಗೆ ಮಾನಸಿಕವಾಗಿ ಅಸ್ವಸ್ಥನಾದ ತನ್ನ ಬದುಕಿನ ಕೊನೆಯ ದಿನಗಳನ್ನು ಕತ್ತಲೆಯಲ್ಲಿ ಕಳೆದ. ಆಧುನಿಕ ಪಾಶ್ಚಿಮಾತ್ಯ ಚಿಂತನೆಯ ಪಿತಾಮಹನಾದ ಫ್ರೆಡರಿಕ್ ನೀಷೆಯ ಪ್ರತಿಭೆ ಏಕಮುಖಿಯಾದದ್ದಲ್ಲ. ಅವನ ಬರವಣ ಗೆಗಳನ್ನು ಪರಿಶೀಲಿಸಿದರೆ ಆತ ಬರೀ ಬುದ್ಧಿಜೀವಿ ಮಾತ್ರವಲ್ಲ; ಒಬ್ಬ ಸ್ವತಂತ್ರ ಚಿಂತಕ, ನೈತಿಕವಾದಿ, ವಿಜ್ಞಾನಿ, ವಿಜ್ಞಾನ ವಿರೋಧಿ, ಧಾರ್ಮಿಕ ವ್ಯಕ್ತಿ, ಬಂಡಾಯಗಾರ, ಪ್ರವಾದಿ, ಸಂಗೀತ ಶಾಸ್ತ್ರಜ್ಞ, ಅಭಿಜಾತ ಕವಿ, ಒಬ್ಬ ತಿಕ್ಕಲು ಮನುಷ್ಯ ಎಲ್ಲವೂ ಆಗಿದ್ದನೆಂದು ತೋರುತ್ತದೆ. ಅವನು ಸ್ವತಃ ತನ್ನ ಬಗ್ಗೆ - ಮನುಷ್ಯನ ಮನಸ್ಸಿನ * ನೀಷೆಯ ಪ್ರಾತಿನಿಧಿಕ ಲೇಖನಗಳ ಅನುವಾದ ಕೃತಿ ‘ಹುಚ್ಚುತನವೇ ಅನುಗ್ರಹ’(2010)ಕ್ಕೆ ಬರೆದಿದ್ದ ಬೆನ್ನುಡಿಯಲ್ಲಿ ಶ್ರೀ ಯು.ಆರ್. ಅನಂತಮೂರ್ತಿಯವರು ಈ ಪದ ಬಳಸಿದ್ದರು. “ಕನ್ನಡ ಸಾಹಿತ್ಯ ಲೋಕಕ್ಕೂ ವೈಚಾರಿಕ ಲೋಕಕ್ಕೂ ಅತ್ಯಂತ ಅಗತ್ಯವಾಗಿದ್ದ ನೀಷೆಯ ಬಗೆಗಿನ ಒಂದು ಒಳ್ಳೆಯ ಕೃತಿಯನ್ನು ವಾಸುದೇವಮೂರ್ತಿ ಕೊಟ್ಟಿದ್ದಾರೆ. ಕ್ರೈಸ್ತಧರ್ಮಕ್ಕೆ ವಿರೋಧವಾಗಿ ನಿಂತ ಈ ನೀಷೆ ಪಾಶ್ಚಾತ್ಯ ಪ್ರಪಂಚದಲ್ಲಿ ಒಂದು ಹೊಸ ವೈಚಾರಿಕತೆ ಹುಟ್ಟಿಸಿದವನು. ನಮ್ಮ ಎಲ್ಲ ಭಾವುಕ ಸುಳ್ಳುಗಳಿಂದ, ಅನುಭಾವದ ವಂಚನೆಗಳಿಂದ, ಆಧ್ಯಾತ್ಮಿಕ ಕಲ್ಪನೆಗಳಿಂದ ಹೊರಬಂದವನು. ನಮ್ಮನ್ನು ಬೆಚ್ಚಿಸಿ ನಮ್ಮ ಒಳಗನ್ನು ಕನಿಕರವಿಲ್ಲದಂತೆ ಕಾಣ ಸುವ ಈ ದೃಷ್ಟಾರ ನಮ್ಮನ್ನು ಬಿಡುಗಡೆಗೆ ಹುಡುಕುವಂತೆ ಎಲ್ಲ ಧರ್ಮಗಳನ್ನು ಪರೀಕ್ಷಿಸಬಲ್ಲವನು. ಕೆಲವೊಮ್ಮೆ ಇವನನ್ನು ಓದಿದವರು ತಮ್ಮ ಮನಸ್ಸಿನಲ್ಲೇ ನಿಜವೆಂದುಕೊಂಡರೂ ಹೊರಗೆ ಅದನ್ನು ಒಪ್ಪಿಕೊಳ್ಳದವರಾಗಿರುತ್ತಾರೆ. ಹೀಗೆ ನಮಗೆ ನಮ್ಮಿಂದಲೇ ಗುಪ್ತವಾದ ಲೋಕಕ್ಕೆ ಪ್ರವೇಶ ಕೊಡಬಲ್ಲ ದಾನವ ಗುರು ಈ ನೀಷೆ” - ಯು.ಆರ್. ಅನಂತಮೂರ್ತಿ ಪೂರ್ತಿ ಸಾಮಥ್ರ್ಯವೇನು ಎಂಬುದು ಇನ್ನೂ ಯಾರ ಅಳವಿಗೂ ಸಿಕ್ಕಿಲ್ಲವಾದ ಕಾರಣ - ‘ನಾನು ಮನೋಲೋಕದ ಕೊಲಂಬಸ್’ ಎಂದು ಹೇಳಿಕೊಳ್ಳುತ್ತಾನೆ. ಈ ಮಾತುಗಳಿಗೆ ಪೂರಕವೆಂಬಂತೆ ಖ್ಯಾತ ಜರ್ಮನ್ ಸಾಹಿತಿ ಕರ್ಟ್ ಟುಕೋಲ್‍ಸ್ಕಿ “ನೀವು ಯಾವ ವಿಷಯ ಪ್ರಸ್ತಾಪಿಸಲಿದ್ದೀರೋ ಹೇಳಿ, ನಾನು ಅದಕ್ಕೆ ಅನುರೂಪವಾದ ನೀಷೆಯ ಸಾಲುಗಳನ್ನು ಉದ್ಧರಿಸಬಲ್ಲೆ” ಎನ್ನುತ್ತಾನೆ. ಫ್ರೆಡರಿಕ್ ನೀಷೆ ವಿಜ್ಞಾನಿಗಳಿಂದ, ವಿಶ್ವವಿದ್ಯಾಲಯದ ಪ್ರೊಫೆಸರುಗಳಿಂದ ಹಿಡಿದು ಸಾಮಾನ್ಯ ಓದುಗನವರೆಗೆ ಎಲ್ಲರಿಗೂ ಹಿಡಿಸುವ, ಮಾತ್ರವಲ್ಲ, ಎಲ್ಲರಿಗೂ ಪರಮಾಪ್ತನೆನಿಸುವ ಬರಹಗಾರನಾಗಿದ್ದಾನೆ. ಒಬ್ಬ ನೀಷೆ ಓದುಗ ಅವನ ಬರವಣ ಗೆಯಲ್ಲಿ ಯಾವುದೋ ಹೊಸದಾದ ವಿಷಯದ ಕುರಿತು ತಿಳಿಯುತ್ತಿರುವುದಿಲ್ಲ. ಬದಲಾಗಿ ತನ್ನದೇ ಅಂತರಂಗವನ್ನು, ತನ್ನದೇ ಒಳನೋಟವನ್ನು ಅವನ ಬರವಣ ಗೆಗಳಲ್ಲಿ ಇನ್ನೂ ನಿಚ್ಚಳವಾಗಿ ಕಂಡುಕೊಳ್ಳುತ್ತಿರುತ್ತಾನೆ. ಇಲ್ಲವೇ ತನ್ನ ಆ ಅಂತರಂಗದೊಂದಿಗೆ ಹೊಸದಾಗಿ ಕಾದಾಟ ಪ್ರಾರಂಭಿಸಿರುತ್ತಾನೆ. 19ನೇ ಶತಮಾನದ ಉತ್ತರಾರ್ಧದಲ್ಲಿ ಬದುಕಿದ್ದ ನೀಷೆ ಸಾವಿರಾರು ಪುಟಗಳನ್ನು ಬರೆದಿಟ್ಟು ಹೋಗಿದ್ದಾನೆ. ಅವುಗಳ ಪೈಕಿ ಕಳೆದ ನೂರೈವತ್ತು ವರ್ಷಗಳಲ್ಲಿ ಜಗತ್ತಿನ ನಾನಾ ವಿಮರ್ಶಕರು ಮತ್ತು ವಿದ್ವಾಂಸರು ತಮಗೆ ಬೇಕಾದುದನ್ನು ಹೆಕ್ಕಿಕೊಳ್ಳುತ್ತ, ತಮಗೆ ದಕ್ಕಿದಷ್ಟನ್ನು ವಿಶ್ಲೇಷಿಸುತ್ತ ‘ಇದುವೆ ನೀಷೆಯ ಚಿಂತನೆ’ ಎನ್ನುತ್ತ ನೀಷೆಯನ್ನು ಅಸಮಗ್ರವಾಗಿ (ಕೊನೆಯ ಪಕ್ಷ ಅಸಮಗ್ರವಾಗಿಯಾದರೂ) ಪರಿಚಯಿಸುತ್ತ ಬಂದಿದ್ದಾರೆ. ಸಾಲದ್ದಕ್ಕೆ ನೀಷೆ ಕಾಲವಾದ ಮೇಲೆ ಆತನ ತಂಗಿಯ ಉಪಟಳಗಳು ಬೇರೆ. ನನಗೆ ನೀಷೆ ವಿಚಾರಗಳ ಪರಿಚಯ ಮಾಡಿಸಿದ ಕಾವ್ಯ ಗುರು ಕಿರಂ ನಾಗರಾಜ ಒಮ್ಮೆ “ಬೇಂದ್ರೆ ಕಾವ್ಯದ ಪಾಲಿಗೆ ಅವರ ಕುಟುಂಬ ವರ್ಗವೇ ನಿಜವಾದ ಶತ್ರುವಾಗಿ ಪರಿಣಮಿಸಿದೆ” ಎಂದಿದ್ದರು. ಈ ಮಾತುಗಳು ಹೆಚ್ಚು ಕಡಿಮೆ ಫ್ರೆಡರಿಕ್ ನೀಷೆಯ ಬರವಣ ಗೆಗೂ ಅನ್ವಯವಾಗುತ್ತದೆ. ನೀಷೆ ಬರವಣ ಗೆಗಳ ಕಾನೂನಾತ್ಮಕ ಉತ್ತರಾಧಿಕಾರಿಣ ಯಾಗಿದ್ದ ಅವನ ತಂಗಿ ಎಲಿಜûಬೆತ್ ಫೋಸ್ರ್ಟರ್, ಅವನ ಬರವಣ ಗೆಗಳನ್ನು ಬೇಕಾಬಿಟ್ಟಿಯಾಗಿ ತಿದ್ದಿದ್ದಳು, ತನಗೆ ಪಥ್ಯವೆನಿಸದ ಎಷ್ಟೋ ಬರವಣ ಗೆಗಳನ್ನು ನಾಶಪಡಿಸಿದಳು ಇಲ್ಲವೆ ತನ್ನ ಸ್ವಹಿತಾಸಕ್ತಿಗಾಗಿ ಪ್ರಕಟಿಸದೆ ಗುಪ್ತವಾಗಿ ತನ್ನ ಸುಪರ್ದಿನಲ್ಲಿ ಇರಿಸಿಕೊಂಡಳು. 20ನೇ ಶತಮಾನದುದ್ದಕ್ಕೂ ಆಕೆಯ ಮೇಲುಸ್ತುವಾರಿಯಲ್ಲಿ ಸಂಗ್ರಹಿಸಲಾದ ಆವೃತ್ತಿಗಳೇ ಅಧಿಕೃತ ಆವೃತ್ತಿಯೆಂಬಂತೆ ಪ್ರಸಾರವಾಯಿತು. ನೀಷೆ ಸತ್ತ ಮೇಲೆ ಅವನ ಬರವಣ ಗೆಗಳು ಅವನ ತಂಗಿಯಿಂದಲೇ ಹೇಗೆಲ್ಲ ಹದಗೆಟ್ಟು ಹಳ್ಳ ಹಿಡಿದವು ಎಂಬುದನ್ನು ಎಚ್‍ಎಫ್ ಪೀಟರ್‍ರ ‘ಝರತುಷ್ಟ್ರನ ತಂಗಿ’ (1985) ಕೃತಿ ತುಂಬ ಮಾರ್ಮಿಕವಾಗಿ ನಿರೂಪಿಸುತ್ತದೆ. ತನ್ನ ಆತ್ಮಕಥನ ರೂಪದ ‘ಎಕ್‍ಹೋಮೋ’ ಕೃತಿಯಲ್ಲಿ ಸ್ವತಃ ನೀಷೆ ತನ್ನ ತಾಯಿ ಹಾಗೂ ತಂಗಿಯರ ಈ ತರಹದ ಹಸ್ತಕ್ಷೇಪಗಳನ್ನು ತೀಕ್ಷ್ಣವಾಗಿ ಖಂಡಿಸುತ್ತಾನೆ. ಅವರಿಬ್ಬರನ್ನೂ ನರಕದ್ವಾರಗಳು, ಕ್ಷುದ್ರಜೀವಿಗಳು ಎಂದೆಲ್ಲ ವಣ ್ಸುತ್ತಾನೆ. ನೀಷೆಯ ತಂಗಿ ಎಲಿಜûಬೆತ್ ತನ್ನ ಅಣ್ಣನ ಈ ಬಗೆಯ ಆಪಾದನೆಗಳಿಗೆ ಪ್ರತಿಕ್ರಿಯಿಸುತ್ತ “ಅವೆಲ್ಲ ಅವನು ತಲೆಕೆಟ್ಟ ಸ್ಥಿತಿಯಲ್ಲಿ ಬರೆದ ಸಾಲುಗಳು” ಎಂದು ಹೇಳಿ ಅವನ ಆಪಾದನೆಗಳನ್ನು ಸಾರಾಸಗಟಾಗಿ ತಳ್ಳಿಹಾಕುತ್ತಾಳಲ್ಲದೆ ನನ್ನ ಅಣ್ಣ ನನ್ನನ್ನು ಅಪಾರವಾಗಿ ಪ್ರೀತಿಸುತ್ತಿದ್ದ, ಭಾವನಾತ್ಮಕವಾಗಿ ಕೊನೆತನಕ ನನ್ನನ್ನೇ ಅವಲಂಬಿಸಿದ್ದ ಎಂದೆಲ್ಲ ಬರೆದುಕೊಂಡಿದ್ದಾಳೆ. ಹೀಗೆ ಇವಳು ಸಂಕಲಿಸಿರುವ ನೀಷೆ ಬರವಣ ಗೆಗಳ ಸುತ್ತ ಈ ತರಹದ ಸಾಕಷ್ಟು ವಿವಾದಗಳಿವೆ, ಆಕ್ಷೇಪಣೆಗಳಿವೆ. ಹಾಗಾಗಿ ಎಲಿಜûಬೆತ್‍ಳ ಸಂಕಲನಗಳನ್ನು ಈ ಕೃತಿ ರಚನೆಗೆ ಬಳಸಿಕೊಳ್ಳಲಾಗಿಲ್ಲ. ಆದಾಗ್ಯೂ ಮರಣೋತ್ತರವಾಗಿ ನೀಷೆಯ ಆಪ್ತ ಸಂಗಡಿಗ ಪೀಟರ್ ಗಾಸ್ಟ್ ಸಹಯೋಗದೊಂದಿಗೆ ಎಲಿಜûಬೆತ್‍ಳಿಂದ ಸಂಕಲನಗೊಂಡ ನೀಷೆಯ ಕನಸಿನ ಕೃತಿ ‘ದಿ ವಿಲ್ ಟು ಪವರ್’ ಪುಸ್ತಕದ ಕೆಲವು ಭಾಗಗಳನ್ನು ಬಳಸಿಕೊಂಡಿದ್ದೇನೆ. ಈ ಕೃತಿಯು ಪ್ರಧಾನವಾಗಿ ರೊನಾಲ್ಡ್ ಹೇಮನ್‍ನ ‘ನೀಷೆ: ಎ ಕ್ರಿಟಿಕಲ್ ಲೈಫ್’ (ಆಕ್ಸ್‍ಫರ್ಡ್ ಯೂನಿವರ್ಸಿಟಿ ಪ್ರೆಸ್, ನ್ಯೂಯಾರ್ಕ್, 1980), ವಾಲ್ಟರ್ ಕಾಫ್‍ಮನ್‍ನ ‘ನೀಷೆ: ಫಿಲಾಸಫರ್, ಸೈಕಾಲಜಿಸ್ಟ್, ಆಂಟಿಕ್ರೈಸ್ಟ್’ (ಪ್ರಿನ್ಸ್‍ಟನ್ ಕ್ಲಾಸಿಕ್ಸ್, ನಾಲ್ಕನೆಯ ಆವೃತ್ತಿ 1974) ಕರ್ಟಿಸ್ ಕೇಟ್‍ರ ‘ಫ್ರೆಡರಿಕ್ ನೀಷೆ’ (ಓವರ್‍ಲುಕ್ ಬುಕ್ಸ್, 2002) ಎಂಬ ಜೀವನ ಚರಿತ್ರೆಗಳನ್ನು ಆಧರಿಸಿವೆ. ಸೃಜನಶೀಲ ನಾಟಕಕಾರನಾದ ಹೇಮನ್‍ನ ಆಕರ್ಷಕ ನಿರೂಪಣಾ ವಿಧಾನ, ಕಾಫ್‍ಮನ್‍ನ ಗಹನವಾದ ತಾತ್ವಿಕ ವಿಶ್ಲೇಷಣೆ ಮತ್ತು ಕರ್ಟಿಸ್ ಕೇಟ್ ಪುಸ್ತಕದ ಕೆಲವು ಪೂರಕ ಮಾಹಿತಿಗಳು ಈ ಕೃತಿಗೆ ಜೀವ ತುಂಬಿವೆ. ಇವಲ್ಲದೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ನೀಷೆ ಬರಹ, ಚಿಂತನೆಗಳ ಕುರಿತ ಆವೃತ್ತಿಗಳು ಹಾಗೂ ವಿಶೇಷವಾಗಿ ಆರ್.ಜೆ. ಹಾಲಿಂಗ್‍ಡೇಲ್‍ರ ನೀಷೆ ಕೃತಿಗಳ ಅನುವಾದಗಳನ್ನು ನಾನು ಕೃತಜ್ಞತಾಪೂರ್ವಕವಾಗಿ ಬಳಸಿಕೊಂಡಿದ್ದೇನೆ. ಮನುಷ್ಯ ತನ್ನ ಬುದ್ಧಿ, ಭಾವ, ಚಿಂತನೆ ಮತ್ತು ಸ್ವಭಾವಗಳನ್ನು ನಿರಂತರವಾಗಿ ಮೀರುತ್ತಿರಬೇಕು ಎಂದು ಕರೆಕೊಟ್ಟ ನೀಷೆ ‘ಹೊಸ ಮನುಷ್ಯ’ (ಉಬರ್‍ಮೆನ್ಷ್)* ಎಂಬ ಪರಿಕಲ್ಪನೆ ನೀಡಿದ. ಭಾರತೀಯ ಹಿನ್ನೆಲೆಯಲ್ಲಿ ಹೇಳುವುದಾದರೆ ನೀಷೆಯ ‘ಹೊಸ ಮನುಷ್ಯ’ ಒಬ್ಬ ಸಿದ್ಧ ಪುರುಷನಲ್ಲ. ಯಾವ ಪರಂಪರೆಯ ಹಂಗಿಗೂ ಒಳಗಾಗದೆ ತನ್ನ ಕೊನೆಯಿರದ ಹುಡುಕಾಟದ ಮೂಲಕವೆ ಅಂತರಂಗದ ಅರಿವಿಗೆ ಕೊನೆಯೆಂಬುದಿಲ್ಲ ಎಂದು ಕಂಡುಕೊಂಡವನು. ತನ್ನ ಕಲ್ಪನೆಯ ‘ಹೊಸ ಮನುಷ್ಯ’ನಿಗೆ ಪರಂಪರೆಯ ಸೂತಕ ತಗುಲಬಾರದೆಂದೇ ಅವನು - ಇತಿಹಾಸ ಪೂರ್ವದ, ಯಾರೂ ಅರಿಯದ ಇರಾನೀ ಅನುಭಾವಿ - ಝರತುಷ್ಟ್ರನ ಮೂಲಕ ‘ಹೊಸ ಮನುಷ್ಯ’ನನ್ನು ನಿರ್ವಚಿಸುತ್ತಾನೆ ಮತ್ತು ತನ್ನ ಮಹತ್ಕøತಿಯಾದ ಝರತುಷ್ಟ್ರನ ವಚನಗಳಲ್ಲಿ “ಹೊಸ ಮಾನವತೆ ಒಂದು ಸಿದ್ಧಿಯಲ್ಲ, ಅದು ಮನುಷ್ಯನ ಎರಡನೆಯ ಸ್ವಭಾವವೇ ಆಗಿದೆ” ಎಂದು ಪ್ರತಿಪಾದಿಸುತ್ತಾನೆ. ಆದರೆ ಮನುಷ್ಯ ತನ್ನ ಮೊದಲ ಸ್ವಭಾವದಿಂದ ಬಿಡುಗಡೆ ಹೊಂದಿ ಎರಡನೆಯ ಸ್ವಭಾವವನ್ನು ತಲುಪಬಲ್ಲನೇ ಎಂಬ ಪ್ರಶ್ನೆಗೆ ಅವನ ಕೃತಿಗಳು ರುಜುವಾತಾದವೇ ವಿನಃ ಅವನ ಬದುಕು ರುಜುವಾತಾಗಿ ನಿಲ್ಲಲಿಲ್ಲ. ಕೊನೆಕೊನೆಗೆ ನೀಷೆ ಹೊಸ ಮನುಷ್ಯತ್ವದ ನೆಲೆಗೇರಲಾರದೆ ಯೋಗಭ್ರಷ್ಟನಾಗುತ್ತಾನೆ, ತನ್ನ ಬದುಕಿನ ಕೊನೆಯ ದಿನಗಳಲ್ಲಿ ಹುಚ್ಚುತನವನ್ನೇ ಒಂದು ಅನುಗ್ರಹವೆಂಬಂತೆ ಬಿಡದೆ ಅಪ್ಪಿಕೊಳ್ಳುತ್ತಾನೆ

Reviews

ವಿವಾದಾಸ್ಪದ ಚಿಂತಕನೊಬ್ಬನ ವಸ್ತುನಿಷ್ಠ ಪ್ರಸ್ತುತಿ

ರಾಕ್ಷಸ ಪ್ರತಿಭೆ ಎಂದು ಚಿಂತಕರಿಂದ ನೀವು ಗುರುತಿಸಲ್ಪಡುವ ಯುರೋಪಿನ್ ಮಹಾನ್ ತತ್ವಶಾಸ್ತ್ರಜ್ಞ ಫ್ರೆಡೆರಿಕ್ ನೀಶೆಯ ಆಯ್ದ ಲೇಖನಗಳನ್ನು “ಹುಚ್ಚುತನವೇ ಅನುಗ್ರಹ” ಹೆಸರಿನಲ್ಲಿ ಪ್ರಕಟಿಸಿದ ಟಿ.ಎನ್ ವಾಸುದೇವಮೂರ್ತಿಯವರು ಈಗ ಆತನ ಜೀವನ ಹಾಗೂ ಚಿಂತನೆಗಳ ಸ್ವರೂಪವನ್ನು ಕುರಿತ ವಿಸ್ತತವಾದ ಗ್ರಂಥವನ್ನು ಕನ್ನಡ ಓದುಗರಿಗೆ ನೀಡಿದ್ದಾರೆ. ಪುಸ್ತಕ ತನ್ನ ಸಹಜತೆಯಿಂದ ಮತ್ತು ಆಳವಾದ ಅಧ್ಯಯನಶೀಲತೆಯ ಗುಣದಿಂದಾಗಿ ಓದುಗರನ್ನು ಸೆಳೆಯುತ್ತದೆ. ಲೇಖಕರಿಗೆ ನೀಶೆ ಕುರಿತು ಎಷ್ಟು ಆಕರ್ಷಣೆ ಇದೆಯೋ ಅಷ್ಟೇ ಆಕರ್ಶಣೆ ಓಷೊ ಬಗ್ಗೆಯೂ ಇರುವುದರಿಂದ 'ಓಷೊ ದರ್ಶನ' ಸಹ ಇಲ್ಲಿ ಧಾರಾಳವಾಗಿ ದೊರೆಯುತ್ತದೆ. 

ಕಳೆದ ಒಂದೆರಡು ದಶಕಗಳಲ್ಲಿ ಪಾಶ್ಚಿಮಾತ್ಯ ಚಿಂತಕರುಗಳು, ತತ್ವಶಾಸ್ತ್ರಜ್ಞರು, ಸಿದ್ಧಾಂತಗಳು ಕನ್ನಡ ಸಂವೇದನೆಗೆ ಅನುವಾದಗಳ ಹಾಗೂ ಅಧ್ಯಯನಪೂರ್ಣ ಬರಹಗಳ ಮೂಲಕ ಬರುತ್ತಿರುವುದು ಸ್ವಾಗತಾರ್ಹ. ಕೇವಲ ಪಶ್ಚಿಮದ ಯಜಮಾನ್ಯದ ತಲೆಯಿಂದ ಈ ಬಗೆಯ ಪ್ರವೇಶಿಕೆಗಳನ್ನು ನೋಡುವ ಅಗತ್ಯವಿಲ್ಲ. ಇಂತವುಗಳು ಕನ್ನಡದ ಅರಿವನ್ನು ವಿಸ್ತರಿಸುವ ಮಹತ್ವದ ಕೆಲಸ ಮಾಡುತ್ತದೆ. ತನ್ನ ವಿಕ್ಷಿಪ್ತತೆ, ಅಸಮಾನ್ಯ ಚಿಂತನೆಗಳ ಮೂಲಕ ನಮ್ಮ ತಿಳುವಳಿಕೆಯನ್ನು ಅಲ್ಲಾಡಿಸುವ ನೀಶೆ ಕುರಿತ ಈ ಬರವಣಿಗೆ ಕೂಡ ಮತ್ತೊಂದು ಸ್ವಾಗತಾರ್ಹ ಜೋಡಣೆ ಎಂದು ತಿಳಿಯಬಹುದು. ಕೇವಲ ತತ್ವಶಾಸ್ತ್ರೀಯ ನೆಲೆಯಿಂದ ಮಾತ್ರವಲ್ಲ, ಸಾಹಿತ್ಯದಲ್ಲಿ ಆಸಕ್ತಿ ಇರುವರಿಗೂ ಕೂಡ ಇದೊಂದು ಆಸಕ್ತಪೂರ್ಣ ಓದನ್ನು ಒದಗಿಸಿದೆ.

ಲೇಖಕರುಗಳನ್ನು ಅವರ ವೈಯಕ್ತಿಕ ಜೀವನದ ವಿವರಗಳ ಮೂಲಕ ಕಟ್ಟಿಕೊಡುವುದನ್ನು ನವ್ಯ ವಿಮರ್ಶೆಯ ಕಾಲಘಟ್ಟದಲ್ಲಿ ನಿರಾಕರಿಸಲಾಗುತ್ತಿತ್ತು. ಈ ನವ್ಯೋತ್ತರ ಸಂದರ್ಭದಲ್ಲಿ ಈ ಬಗೆಯ ತಿಳುವಳಿಕೆಯನ್ನು ನಿರಾಕರಿಸಿ, ಅವರ ಜೀವನ, ಕೃತಿ ಹಾಗೂ ಇತರ ಚಿಂತಕರುಗಳ ವ್ಯಾಖ್ಯಾನದ ಮೂಲಕ ನಿರೂಪಿಸಲಾಗುತ್ತಿದೆ. ನೀಶೆ ಕುರಿತ ಈ ಪುಸ್ತಕವೂ ಈ ಬಗೆಯ ವೈಧಾನಿಕತೆಯನ್ನು ಹೊಂದಿರುವುದನ್ನು ನಾವು ಗಮನಿಸಬಹುದು. - “ದೇವರು ಸತ್ತ” ಎಂದು ಕ್ರಾಂತಿಕಾರಕವಾಗಿ ಘೋಷಿಸಿದ ನೀಶೆಯ ಕುರಿತಾಗಿರುವ ಕೆಲವು ಅಪಕಲ್ಪನೆಗಳ ಬಗ್ಗೆ ಲೇಖಕರು ಇಲ್ಲಿ ವಿಸ್ತ್ರತವಾಗಿ ಚರ್ಚಿಸಿದ್ದಾರೆ. ಉದಾಹರಣೆಗೆ ಬಲಪಂಥಿಯರಿಗೆ ಮತ್ತು ಹಿಟ್ಲರ್‌ಗೆ ನೀಶೆ ಕುರಿತಾಗಿ ಇರುವ ಒಲವಿನ ಬಗ್ಗೆ ಪ್ರಸ್ತಾಪಿಸುತ್ತಾ, ನೀಶೆ ವಿಕ್ಷಿಪ್ತ ಸ್ಥಿತಿಯಲ್ಲಿದ್ದಾಗ ಅವನ ಸಹೋದರಿ ಅನೇಕ ಬಾರಿ ಅನಗತ್ಯವಾಗಿ ಲೇಖನಗಳಲ್ಲಿ ಮಧ್ಯಪ್ರದೇಶ ಮಾಡಿದ ಬಗ್ಗೆ ತಿಳಿಸಿಕೊಡುತ್ತಾ ಇದು ಹಸ್ತಕ್ಷೇಪದ ಪರಿಣಾಮ ಹೌದು ಎಂದು ವಿವರಿಸುತ್ತಾರೆ. ಹಾಗೆಯೇ ಅಂಬೇಡ್ಕರ್ ನೀಶೆಯನ್ನು ಮನುಸೃತಿಯ ಸಮರ್ಥಕ ಎಂದು ನಿರಾಕರಿಸಿದ್ದರ ಬಗ್ಗೆ ಪ್ರಸ್ತಾಪಿಸುತ್ತಾ ನೀಶೆ ಮನುಸೃತಿಯಲ್ಲಿರುವ ಹಲವು ವಿಷಯಗಳ ಬಗ್ಗೆ ನಿರಾಕರಣೆಯ ಧೋರಣೆ ಹೊಂದಿರುವುದನ್ನು ಎತ್ತಿ ತೋರಿಸಿ ಆತ ಏಕಮುಖೀ ಆರಾಧಕನಲ್ಲ ಎಂದು ವಾದಿಸುತ್ತಾರೆ. ಅದರಂತೆಯೇ ಆತ ಕೇವಲ 24 ವರ್ಷಕ್ಕೆ ವಿಶ್ವವಿದ್ಯಾಲಯದಲ್ಲಿ ಬೋಧಕನಾಗಿದ್ದಾಗ ರಚಿಸಿದ ಕೆಲವು ಗ್ರಂಥಗಳನ್ನು ಆಗಿನ ವಿಮರ್ಶಕರು 'ಅತಿರೇಕ' ಎಂದು ತಿರಸ್ಕರಿಸಿದ್ದನ್ನು ಮತ್ತು ಮುಂದೆ ಅದೇ ಗ್ರಂಥಗಳು ಮನ್ನಣೆ ಗಳಿಸಿದ ಅಂಶಗಳನ್ನು ಕೂಡ ವಿವರವಾಗಿ ಚರ್ಚಿಸಿದ್ದಾರೆ. ನೀಶೆಯ ಬೌದ್ಧಿಕತೆ ಮತ್ತು ಆತನ ವೈಯಕ್ತಿಕ ಜೀವನದ ವಿವರಗಳು ಇಲ್ಲಿ ಮಿಳಿತವಾಗಿರುವುದರಿಂದ ಈ ಪುಸ್ತಕ ಹೆಚ್ಚು ಪರಿಣಾಮಕಾರಿಯಾಗಿದೆ. ಆತನ ಈ ಏಕಾಂಗಿತನ, ತಬ್ಬಲಿತನ, ವ್ಯಗ್ರತೆ, ಅಲೆಮಾರಿ ಬದುಕು, ಆತ ಸೃಷ್ಟಿಸಿದ ಪರಂಪರೆ, ಅರಾಜಕತೆ, ಆತನ ಕೃತಿಗಳ ವೈಶಿಷ್ಟತೆ ಇವೆಲ್ಲವುಗಳನ್ನೂ ಒಟ್ಟೋಟ್ಟಿಗೆ ನೋಡಲಾಗಿದೆ. ಹೀಗೆ ವಿವರಗಳ ಮೂಲಕ ಬುದ್ದಿಜೀವಿಯೊಬ್ಬನನ್ನು ನಿರೂಪಿಸುವಾಗ ಆತನೊಬ್ಬ ಭಗ್ನಪ್ರೇಮಿಯಾಗಿದ್ದ ಎಂಬ ಅಂಶವನ್ನು ಒಂದು ಅಧ್ಯಾಯದಲ್ಲಿ ಚರ್ಚಿಸಿ ಆತ ಬರೆದ ಪ್ರೇಮ ಪತ್ರವನ್ನು ಸಹ ದಾಖಲಿಸಿರುವುದು ಕುತೂಹಲಕಾರಿಯಾಗಿದೆ.

ಒಟ್ಟಾರೆಯಾಗಿ, ನೀಶೆಯ ಬಹುಶೃತತೆಯನ್ನು, ಆದ್ಯತೆಗಳನ್ನು ಆತನ ತಾತ್ವಿಕ ತಳಹದಿಯನ್ನು ಕನ್ನಡ ಸಂವೇದನೆಗೆ ಜೋಡಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ನೀಶೆ ಜೊತೆಗೆ ಓಷೋನ ವಿಚಾರಗಳನ್ನು, ಒಲವುಗಳನ್ನು ಜೋಡಿಸಿರುವುದು ಚರ್ಚಾರ್ಹ ವಿಚಾರವೇ ಸರಿ. ಹಾಗೆಯೇ ನೀಶೆಯ ವಿಚಾರಗಳು ಜಗತ್ತಿನ ಬೇರೆ ಬೇರೆ ಲೇಖಕರುಗಳನ್ನು ಪ್ರಭಾವಿಸಿರುವಂತೆ, ಯುರೋಪಿನ ಆಧುನಿಕೋತ್ತರವಾದಿಗಳನ್ನು ತೀವ್ರವಾಗಿ ಪ್ರಭಾವಿಸಿದೆ. ಸತ್ಯ, ವಾಸ್ತವ, ಚರಿತ್ರೆ ಇವೆಲ್ಲವುಗಳನ್ನು ಒಂದು `ಕತೆ'ಯಾಗಿ ಮಾತ್ರ ನೋಡುವ ಆಧುನಿಕೋತ್ತರವಾದಿಗಳಿಗೆ ಯಾವುದೇ ವಿಷಯದ ಬಹು ಆಯಾಮಗಳನ್ನು ವ್ಯಾಖ್ಯಾನಿಸುವ ನೀಶೆ ವಿಶಿಷ್ಟವಾಗಿ ಕಂಡಿದ್ದ. ಈ ಅಂಶವನ್ನು ಇಲ್ಲಿ ಸೇರಿಸಿಕೊಂಡೇ ನಾವು ಪುಸ್ತಕವನ್ನು ಓದಬಹುದು.

ಈ ಪುಸ್ತಕವು ಹಲವು ಬಗೆಯ ಜಿಜ್ಞಾಸು ಸ್ವರೂಪಿ ಪ್ರಶ್ನೆಗಳ ಮೂಲಕ ನೀಶೆಯ ವ್ಯಕ್ತಿತ್ವ ಮತ್ತು ತಾತ್ವಿಕತೆಯನ್ನು ನಿರೂಪಿಸುವ ಕೆಲಸ ಮಾಡಿದೆ. ನೀಶೆಯ ಹಿಂದಿನ ಕಾಲದ ತಾತ್ವಿಕ ದರ್ಶನ, ಸಮಕಾಲೀನರ ಪ್ರತಿಕ್ರಿಯೆ ಮತ್ತು ಆತನ ಒಳಗಿನ ತುರ್ತು ಇವೆಲ್ಲವುಗಳ ಕುರಿತ ಚರ್ಚೆಯೂ ಇಲ್ಲಿದೆ. ಆತ್ಮವಲೋಕನದ ಜೊತೆಗೆ ನೀಶೆಗೆ ಅವನ ಕೃತಿಗಳ ಕುರಿತು ಕೆಲ ದೊಡ್ಡ ಹೆಸರಿನ ವಿಮರ್ಶಕರ ದಿವ್ಯ ತಾತ್ಸರವೂ ತೀವ್ರವಾಗಿ ಕಾಡಿತ್ತಂತೆ. ಇಂತಹ ಹಲವು ಭಿನ್ನ ಆಯಾಮಗಳು ಇಲ್ಲಿ ದಾಖಲಾಗಿವೆ.

ನೀಶೆ ಯಾವ ಪಂಥಕ್ಕೆ ಸೇರಿದವನು ಎಂಬ ಪ್ರಶ್ನೆಗಿಂತ ಹೆಚ್ಚಾಗಿ ಬಲಪಂಥೀಯರು ಈತನ 'ದೈತ್ಯಮನುಷ್ಯ' ಪರಿಕಲ್ಪನೆಯನ್ನು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಯೂ ಸಹ ಉದ್ಭವಿಸುತ್ತದೆ. ದಾಸೋವಸ್ತಿಯ ಒಂದು ಬೃಹತ್ ಕಾದಂಬರಿಯಲ್ಲಿ ಅದರ ನಾಯಕ ತನ್ನನ್ನು ತಾನು “ಅತಿಮನುಷ್ಯ” ಎಂದು ತಿಳಿದುಕೊಂಡು ಸಮಾಜದ ಓರೆಕೋರೆಗಳನ್ನು ತಿದ್ದಲು ಹೋಗುತ್ತಾನೆ. ಆದರೆ ಈ ಬಗೆಯ ನೈತಿಕತೆ ಇಲ್ಲದ ಜನ ಹಠಕ್ಕಾಗಿ, ದ್ವೇಷಕ್ಕಾಗಿ ಹಿಂಸೆಯ ಸರಪಳಿಯನ್ನು ಸೃಷ್ಟಿಸುತ್ತಾರೆ ಮತ್ತು ನೀಶೆ ತರಹದ ವ್ಯಕ್ತಿತ್ವದಿಂದ ಸ್ಫೂರ್ತಿ ಪಡೆಯುತ್ತಾರೆ ಎಂಬುದೇ ವ್ಯಂಗ್ಯವಾಗಿದೆ. ಈ ಪುಸ್ತಕದ ದಟ್ಟ ವಿವರಗಳು ಈತನನ್ನು ಒಂದೇ ದೃಷ್ಟಿಕೋನದಿಂದ ನೋಡದಂತೆ ಒತ್ತಾಯಿಸುತ್ತವೆ. ಕೊನೆಯದಾಗಿ, ಬೌದ್ಧಿಕತೆಯನ್ನೆ ನಿರಾಕರಿಸುತ್ತಿರುವ ಮತ್ತು ಮಾತು ಸೋಲುತ್ತಿರುವ ಈ ಸಮಕಾಲೀನ ಸಂದರ್ಭದಲ್ಲಿ ನೀಶೆಯ ತಾತ್ವಿಕ ಮತ್ತು ಬೌದ್ಧಿಕ ಜಗತ್ತನ್ನು ಈ ಪುಸ್ತಕ ಪರಿಣಾಮಕಾರಿಯಾಗಿ ತೆರೆದಿಟ್ಟಿದೆ. 

-ಅವಿನಾಶ್ ಟಿ.

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಫೆಬ್ರುವರಿ 2020)

Related Books