‘ಬಸವಣ್ಣನವರ ವಚನಗಳ ವರ್ಣನಾತ್ಮಕ ವ್ಯಾಕರಣ' ಡಾ.ನಾಗರಾಜ ದೊರೆ ಅವರ ಸಂಶೋಧನ ಪ್ರಬಂಧ. ಈ ಕೃತಿಗೆ ಡಾ. ಸಂಗಮೇಶ ಸವದತ್ತಿಮಠ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಆಧುನಿಕ ಭಾಷಾವಿಜ್ಞಾನದ ತತ್ವಗಳನ್ನು ಅನುಸರಿಸಿ ರಚಿಸಲ್ಪಟ್ಟ ಒಂದು ಉತ್ತಮ ಕೃತಿಯಾಗಿದೆ. ವರ್ಣನಾತ್ಮಕ ಭಾಷಾವಿಜ್ಞಾನದ ಶಾಖೆಯಲ್ಲಿ ಪ್ರಮುಖವಾಗಿ ಭಾಷಾ ರಚನೆಯ ಮೂಲಭೂತ ಅಂಶಗಳನ್ನು ಹೊಸ ಶೋಧಗಳ ಮೂಲಕ ಅನಾವರಣಗೊಳಿಸುವ ಪ್ರಕ್ರಿಯೆ ಇಲ್ಲಿ ಇರುತ್ತದೆ.
ಪ್ರಾಯಃ ಈ ಶಾಖೆ ಭಾಷಾವಿಜ್ಞಾನದ ಮಾತೃಶಾಖೆ ಎನ್ನಬಹುದು. ಉಳಿದ ಯಾವುದೇ ಶಾಖೆ ಕೇವಲ ಭಾಷೆಯ ಒಂದೊಂದು ಮಗ್ಗುಲನ್ನು ಪರಿಶೋಧಿಸಿದರೆ ವರ್ಣನಾತ್ಮಕ ಶಾಖೆಯು ಧ್ವನಿಯಿಂದ ಆರಂಭಿಸಿ ವಾಕ್ಯದವರೆಗೆ ಎಲ್ಲವನ್ನೂ ಸಮಗ್ರವಾಗಿ ವಿವೇಚಿಸುತ್ತದೆ ಎಂದಿದ್ದಾರೆ. 1916ರಲ್ಲಿ ವರ್ಣನಾತ್ಮಕ ಭಾಷಾವಿಜ್ಞಾನದ ಪಿತಾಮಹ ಫರ್ಡಿನಾಂಡ ಸಸೂರ್, ಅವರ ನಂತರ ಲಿಯೋನಾರ್ಡ ಬ್ಲೂಮ್‌ಫೀಲ್ಡ ಅವರಿಂದ ಆರಂಭಗೊಂಡ ಈ ಶಾಖೆ ಜಗತ್ತಿನಲ್ಲಿ ಇಂದು ಸಾಕಷ್ಟು ಹೊಸ ಆಯಾಮಗಳನ್ನು ಪಡೆದು ಮುಂದುವರೆದಿದೆ.
ಕನ್ನಡದಲ್ಲಿ ಈ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಅಧ್ಯಯನವೇ ನಡೆದಿಲ್ಲ. ಇಂಥದರಲ್ಲಿ ಡಾ. ನಾಗರಾಜ ದೊರೆ ಅವರು ಬಸವಣ್ಣನವರ ವಚನಗಳ ಭಾಷೆಯನ್ನು ಅಧ್ಯಯನಕ್ಕೆ ಆಯ್ದುಕೊಂಡದ್ದು ಸಾಹಸದ ಮಾತೇ ಸರಿ; ಯಾಕೆಂದರೆ ವಚನಗಳ ಭಾಷೆಯಲ್ಲಿ ಅನೇಕ ವೈರುಧ್ಯ ವೈಶಿಷ್ಟ್ಯಗಳಿವೆ. ಅದು ಒಂದು ರೀತಿ ಮಿಲ್ಟನ್ ಕವಿಯು ಇಂಗ್ಲಿಶ್ ಭಾಷೆಯನ್ನು ಲ್ಯಾಟಿನೈಸ್ ಮಾಡಿದಂತೆ ಆಗಿ ವಚನಗಳ ಭಾಷೆ ಜಗತ್ತಿನಲ್ಲಿ ವಿಶಿಷ್ಟ ಮತ್ತು ಅಪರೂಪದ ಭಾಷೆಯಾಗಿ ಹೊಮ್ಮಿದೆ. ಡಾ. ನಾಗರಾಜ ಅವರ ಶ್ರಮ, ವಸ್ತು ನಿಷ್ಠತೆ, ವಿಶ್ಲೇಷಣಾ ರೀತಿಗಳು ಇಲ್ಲಿ ಎದ್ದು ಕಾಣುತ್ತವೆ. ಅದಕ್ಕಾಗಿ ಅವರು ಅಭಿನಂದನಾರ್ಹರು. ಅವರಿಗೆ ಉತ್ತರೋತ್ತರ ಶ್ರೇಯಸ್ಸು ಸಿಗಲಿ ಎಂದು ಹಾರೈಸಿದ್ದಾರೆ.
©2024 Book Brahma Private Limited.