ಬಂಕಿಮಚಂದ್ರ

Author : ಎ.ಆರ್.  ಕೃಷ್ಣಶಾಸ್ತ್ರಿ

Pages 525

₹ 400.00




Year of Publication: 2018
Published by: ಹೇಮಂತ ಸಾಹಿತ್ಯ

Synopsys

ಬೆಂಗಾಲಿ ಲೇಖಕ ಬಂಕಿಮಚಂದ್ರ ಚಟರ್ಜಿ ಅವರನ್ನು ಕುರಿತ ಪ್ರಮುಖ ಕೃತಿಯಿದು. ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರಾಗಿರುವ ಎ.ಆರ್‌. ಕೃಷ್ಣಶಾಸ್ತ್ರಿ ಅವರ ಪ್ರಮುಖ ಕೊಡುಗೆಗಳಲ್ಲಿ ಒಂದು. ಎ.ಆರ್‌.ಕೃ. ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಕೃತಿ. ’ಆನಂದಮಠ’ ಕಾದಂಬರಿ ಹಾಗೂ ವಂದೇ ಮಾತರಂ ಮೂಲಕ ಸ್ವಾತಂತ್ರ ಹೋರಾಟಕ್ಕೆ ಚಳುವಳಿಯ ಕಾವು ತಂದು ಕೊಟ್ಟವರು ಬಂಕಿಮಚಂದ್ರ. ಬಂಕಿಮ ಬದುಕು ಬರಹ- ಸಾಧನೆಯನ್ನು ಈ ಕೃತಿ ಕಟ್ಟಿಕೊಡುತ್ತದೆ.

About the Author

ಎ.ಆರ್.  ಕೃಷ್ಣಶಾಸ್ತ್ರಿ
(12 February 1890 - 01 February 1968)

ಮಹಾಭಾರತವನ್ನು ಸರಳಗನ್ನಡದಲ್ಲಿ ಹೇಳುವ ವಚನ ಭಾರತದ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರಿರುವ ಎ.ಆರ್. ಕೃಷ್ಣಶಾಸ್ತ್ರಿಗಳು ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸ್ಥಾಪಕರಾಗಿ, ಸಂಪಾದಕರಾಗಿ ನೀಡಿದ ಕೊಡುಗೆ ಅಮೂಲ್ಯ. 1890ರ ಫೆಬ್ರುವರಿ 12ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಅಂಬಳೆ ರಾಮಕೃಷ್ಣಶಾಸ್ತ್ರಿ ತಾಯಿ ವೆಂಕಮ್ಮ. ತಂದೆಯಿಂದ ಸಂಸ್ಕೃತ ವ್ಯಾಸಂಗ ಮಾಡಿದ ಶಾಸ್ತ್ರಿಗಳು ವೆಸ್ಲಿಯನ್ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಗಿದ ಮೇಲೆ ಬಿ.ಎ. ಪದವಿ (1913)  ಮತ್ತು ಮದರಾಸಿನಲ್ಲಿ ಕನ್ನಡ ಎಂ.ಎ. (1915) ಪದವಿ ಪಡೆದರು. ಪ್ರಾರಂಭದಲ್ಲಿ ಡೆಪ್ಯೂಟಿ ಕಮೀಷನರ್ ಆಫೀಸಿನಲ್ಲಿ ಅನಂತರ ಓರಿಯಂಟಲ್ ಲೈಬ್ರರಿಯಲ್ಲಿ ಕೆಲಸ ಮಾಡಿದ ಅವರು ನಂತರ 1916ರಲ್ಲಿ ಸೆಂಟ್ರಲ್ ...

READ MORE

Awards & Recognitions

Reviews

ಬಂಕಿಮಚಂದ್ರ 

ಈ ಕೃತಿಯ ರಚನೆಗೆ ಮೂಲ ಪ್ರೇರಣೆಯನ್ನು ಡಾ. ಎ. ಆರ್. ಕೃ. ಅವರು ಹೀಗೆ ಹೇಳುತ್ತಾರೆ “ಕನ್ನಡ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿರುವಾಗಲೆ ಬಂಕಿಮರ "ಆನಂದಮಠ” (ಶ್ರೀ ಬಿ. ವೆಂಕಟಾಚಾರ್ಯರ ಅನುವಾದ) ನನ್ನ ಮನಸ್ಸನ್ನು ಸೂರೆಗೊಂಡಿತು. ಕಾಲೇಜಿನಲ್ಲಿ ಪಾಠ ಹೇಳುವಾಗ ಮೂಲ ಬಂಕಿಮರ ಕೃತಿಗಳ ಮತ್ತು ಅವಕ್ಕೆ ಸಂಬಂಧಪಟ್ಟ ಗ್ರಂಥಗಳ ಅವಲೋಕನ ಸಾವಧಾನವಾಗಿ ನಡೆಯಿತು. ಹೀಗೆ ನಲವತ್ತು ವರ್ಷಗಳು ಡಾ. ಎ. ಆರ್. ಕೃ. ಅವರು ಕ್ಷೇತ್ರವನ್ನು ಸಿದ್ಧಪಡಿಸಿಕೊಂಡರು. ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾದ ಮೇಲೆ ಎಂಟು ವರ್ಷಗಳು ತದೇಕನಿಷ್ಠೆಯಿಂದ ಅವಿಶ್ರಾಂತವಾಗಿ ಶ್ರಮಿಸಿ ಈ ಬೃಹದ್ಗಂಥವನ್ನು ಹೊರತಂದರು. ಸೃಷ್ಟಿ ಸಾಹಿತ್ಯದಲ್ಲಿ ಬಂಕಿಮಚಂದ್ರರು ಸಾಧಿಸಿರುವ ಔನ್ನತ್ಯವನ್ನು ಡಾ. ಎ. ಆರ್. ಕೃ. ಅವರು ತಮ್ಮ ವಿಮರ್ಶಾ ಕೃತಿಯಲ್ಲಿ ಹೊಯ್‌ಕಯ್‌ ಆಗುವಂತೆ ಸಾಧಿಸಿದ್ದಾರೆ.

ಐನೂರು ಪುಟಗಳ ಈ ಬೃಹತ್ಸಂಪುಟದ ಮೊದಲಲ್ಲಿ “ವಂದೇ ಮಾತರಂ” ಗೀತೆ ತುಂಬಾ ಉಚಿತವಾಗಿ ಬಂದಿದೆ. ಈ ಗೀತೆ ಮೊದಲು ಬಂಕಿಮಚಂದ್ರರ 'ಆನಂದಮಠ' ಕಾದಂಬರಿಯ ಭಾಗವಾಗಿ ಬಂದರೂ ಅನಂತರ ಉದ್ದಗಲದಲ್ಲಿ, ಭರತ ಭೂಮಿಯ ನಾಡದೇವಿಯ ದಿವ್ಯ ಕಲ್ಪನೆಯನ್ನು ಜನರಿಗೆ ಉಂಟುಮಾಡುತ್ತಾ ಜನಮನವನ್ನು ಸೆಳೆದ ರಾಷ್ಟ್ರಗೀತೆ. ಅನಂತರ ಬರುವ ರವೀಂದ್ರರ 'ಕವಿಕಾಣಿಕೆ' ಬಂಕಿಮಚಂದ್ರರೆ ಬಗೆಗೆ ಓದುಗರ ಕುತೂಹಲವನ್ನು ಕೆರಳಿಸುತ್ತದೆ. ಆಮೇಲಿನ ಬಂಗಾಳಿ ಸಾಹಿತ್ಯದ ಸಂಕ್ಷಿಪ್ತ ಚರಿತ್ರೆ- ಅದೂ ಬಂಕಿಮರ ಇಂಗ್ಲಿಷ್ ಲೇಖನದ ಅನುವಾದ - ಮತ್ತು ಅದಾದ ಮೇಲೆ ಬರುವ ಬಂಕಿಮಚಂದ್ರನ ಸಂಕ್ಷಿಪ್ತ ಚರಿತ್ರೆ ಓದುಗರಿಗೆ ಬೇಕಾದ ಆವಶ್ಯಕ ಹಿನ್ನೆಲೆಯನ್ನೊದಗಿಸುತ್ತದೆ. ಹಾಗೆಯೇ ಬಂಕಿಮರ ಪ್ರತಿ ಕಾದಂಬರಿಯ ಕಥಾಸಂಗ್ರಹವನ್ನು ಒದಗಿಸಿಕೊಟ್ಟಿರುವುದು ಈ ದಿಸೆಯಲ್ಲಿ ಅತ್ಯಂತ ಉಪಯುಕ್ತವಾಗಿದೆ.

ಈ ಕಥಾ ಸಂಗ್ರಹಗಳನ್ನು ಓದಲು ಮೊದಲು ಮಾಡಿದರೆ ಅವು ಮುಗಿಯುವವರೆಗೂ ಪುಸ್ತಕವನ್ನು ಕೆಳಗಿಡಲು ಮನಸ್ಸು ಬಾರದು. ಎಂದೂ ಮೂಲಗಳನ್ನು ಓದಿಲ್ಲದವರಿಗಂತೂ ಅವುಗಳ ಆವಶ್ಯಕತೆ ಮತ್ತು ಆಕರ್ಷಣೆ ಇನ್ನೂ ಹೆಚ್ಚು. ಶ್ರೀ ಕೃಷ್ಣಶಾಸ್ತ್ರಿಗಳು ಬಂಕಿಮರ ಕೃತಿಗಳ ಇನ್ನೊಂದು ಭಾಷಾಂತರವನ್ನು ಹೊರತರಬೇಕೆಂಬ ಆಸೆ ಇಟ್ಟುಕೊಂಡಿದ್ದರೆಂದೂ, ಕಾರಣಾಂತರಗಳಿಂದ ಅದನ್ನು ಬಿಡಬೇಕಾಯಿತೆಂದೂ ತಿಳಿಸಿದ್ದಾರೆ. ಆ ಭಾಷಾಂತರ ಒಂದು ಕೊರತೆಯನ್ನು ಬಹಳ ಯಶಸ್ವಿಯಾಗಿ ನಿವಾರಿಸುತ್ತಿತ್ತು. ಅದು ಸಾಧ್ಯವಾಗದಿರುವುದು ಕನ್ನಡಿಗರ ದುರದೃಷ್ಟ. ಈಗ ಕಥಾ ಸಂಗ್ರಹಗಳಾದರೂ ಇವೆಯಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕು. ಬಂಕಿಮರು ಸೃಷ್ಟಿಸಿರುವ ಸಾಹಿತ್ಯದಲ್ಲಿ ದೊಡ್ಡ ಕೃತಿಗಳೂ ಸಣ್ಣ ಕೃತಿಗಳೂ ಇವೆ. ಇದು ಗಾತ್ರವನ್ನು ಕುರಿತು ಮಾಡಿದ ವಿಭಾಗ, ವಸ್ತುದೃಷ್ಟಿಯಿಂದ ವಿಭಾಗಿಸಿದರೆ, ’ಕಾದಂಬರಿಗಳು ಮತ್ತು ವಿಡಂಬನೆಗಳು' ಎಂದೂ ’ಧಾರ್ಮಿಕ ಗ್ರಂಥಗಳು ಮತ್ತು ಲೇಖನಗಳು’ ಎಂದೂ ಎರಡು ಗುಂಪಾಗುವುವು. ಅವುಗಳಲ್ಲಿ ಕಾದಂಬರಿಗಳನ್ನು ವಿಮರ್ಶೆಗೆ ತೆಗೆದುಕೊಂಡಿರುವುದರಲ್ಲಿ ಔಚಿತ್ಯವಿದೆ. ಕೇವಲ ಜನಪ್ರಿಯತೆಯೊಂದೇ ಅದಕ್ಕೆ ಕಾರಣವಲ್ಲ; ಸಾಹಿತ್ಯ ಗುಣ ಕಾದಂಬರಿಗಳಲ್ಲಿ ಪ್ರಧಾನವಾಗಿದೆ. ಈ ಕಾದಂಬರಿಗಳ ವಿಮರ್ಶೆಗಾಗಿ ಗ್ರಂಥದ ಅರ್ಧಕ್ಕೂ ಹೆಚ್ಚು ಭಾಗ (೬೦೦ ಪುಟಗಳಲ್ಲಿ ಸುಮಾರು ೩೦೦ ಪುಟಗಳು) ಮೀಸಲಾಗಿರುವುದು ಅರ್ಥಗರ್ಭಿತವಾಗಿದೆ. ಉಪನ್ಯಾಸ (= ಕಾದಂಬರಿಕಾರರಾಗಿಯೇ ಬಂಕಿಮರು ಚಿರಸ್ಮರಣೀಯರಾಗಿ ಉಳಿಯುವರು. ಸಾಹಿತ್ಯ ದೃಷ್ಟಿಯಿಂದ ಕಾದಂಬರಿಗಳಿಗೆ ಅಗ್ರಸ್ಥಾನ ಸಲ್ಲುವುದು ನ್ಯಾಯ.

ಪ್ರತಿ ಕಾದಂಬರಿಗೂ ಪ್ರತ್ಯೇಕ ಅಧ್ಯಾಯವಿದೆ. ಪ್ರತಿ ಅಧ್ಯಾಯದಲ್ಲಿ ಪೀಠಿಕೆ, ಕಥಾಸಾರಾಂಶ ಮತ್ತು ವಿಮರ್ಶೆ ಎಂಬ ಮೂರು ಭಾಗಗಳಿವೆ. ಪೀಠಿಕೆಯಲ್ಲಿ ಮತ್ತು ವಿಮರ್ಶೆಯಲ್ಲಿ ಶ್ರೀ ಶಾಸ್ತ್ರಿಗಳ ಪ್ರತಿಭೆ ಪೂರ್ಣವಾಗಿ ಈ ಎದ್ದು ಕಾಣುತ್ತದೆ. ಅಲ್ಲಿ ಕೇವಲ ಪ್ರಕೃತ ಕೃತಿಗಳಿಗೆ ಸಂಬಂಧಿಸಿದ ಅಂಶ ಮಾತ್ರವಲ್ಲ ವಿಶಾಲ ಸಾಹಿತ್ಯ ಪ್ರಪಂಚಕ್ಕೆ, ಇನ್ನೂ ವಿಶಾಲವಾದ ಜೀವನ - ರಂಗಕ್ಕೆ ಸಂಬಂಧಪಟ್ಟ ವಿಷಯಗಳು ಹದವರಿತು ಬಂದಿರುವುದು ಕೃತಿಗೆ ಇನ್ನಷ್ಟು ಶೋಭೆಯನ್ನುಂಟುಮಾಡಿದೆ.

ಬಂಕಿಮರನ್ನೂ, ಅವರ ಕೃತಿಗಳ ಕನ್ನಡ ಅನುವಾದಕರಾದ ಬಿಂಡಿಗನೆಲೆ ವೆಂಕಟಾಚಾರ್ಯರನ್ನ ಕಂಡರೆ ಶ್ರೀ ಎ.ಆ‌ರ್‌. ಕೃ. ಅವರಿಗೆ ಅಪಾರ ಗೌರವ. ಅದರಿಂದ ಕೃತಿಯನ್ನು ರಚಿಸಿ ಬಂಕಿಮಚಂದ್ರರನ್ನೂ, ಆ ಕೃತಿಯನ್ನು ಅರ್ಪಿಸಿ, ವೆಂಕಟಾಚಾರ್ಯರನ್ನೂ ಎ. ಆರ್. ಕೃ. ಅವರು ವಿನೂತನ ರೀತಿಯಲ್ಲಿ ಗೌರವಿಸಿದ್ದಾರೆ. ಅವರ ಭಾಷೆಯ ಶೈಲಿಯಂತೂ ಉದ್ದಕ್ಕೂ ಮನೋಹರವಾಗಿ ಓದುಗರ ಮನಸ್ಸನ್ನು ಕಥೆ ಕಾದಂಬರಿಗಳ ಹಾಗೆ ಸೆರೆ ಹಿಡಿಯುತ್ತದೆ. ಎಲ್ಲೂ ಬೇಸರವಾಗುವುದಿಲ್ಲ. ಪುಸ್ತಕವನ್ನು ಓದಿ ಮುಗಿಸುವ ತನಕ ನಿಲ್ಲಿಸಬೇಕೆನ್ನಿಸುವುದಿಲ್ಲ. “ತೇಜಸ್ವಿಯಾಗಿರಲಿ ನಾವು ಓದುವ ಓದು" ಎಂಬ ಪ್ರಾರ್ಥನೆಯೊಂದಿಗೆ ಎ. ಆರ್. ಕೃ. ಅವರು ಗ್ರಂಥವನ್ನು ಮುಕ್ತಾಯ ಮಾಡಿದ್ದಾರೆ. ನಾವು ಕನ್ನಡದಲ್ಲಿ ಓದಬಹುದಾದ ಅತ್ಯಂತ "ತೇಜಸ್ವಿಗಳಾದ ಗ್ರಂಥಗಳಲ್ಲಿ ಡಾ. ಎ. ಆರ್. ಕೃಷ್ಣಶಾಸ್ತ್ರಿ ಅವರ ’ಬಂಕಿಮಚಂದ್ರ'ವೂ ಒಂದೆಂದು ಸ್ವಲ್ಪವೂ ಅನುಮಾನಿಸದೆ ಘೋಷಿಸಬಹುದು. 

-ಪ. ವಿ. ಚಂದ್ರಶೇಖರ

ಬಂಗಾಳಿ ಕಾದಂಬರಿಕಾರ ಬಂಕಿಮಚಂದ್ರ

ಮೊದಲನೆಯ ಆವೃತ್ತಿ 1957 ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ ಮೈಸೂರು 570012

ಡೆಮ್ಮಿ ಅಷ್ಟ 532 ಪುಟಗಳು * ಬೆಲೆ ರೂ 7-00, 8-00 

ಕೃಪೆ: ಗ್ರಂಥಲೋಕ, ಜೂನ್‌ 1981

 

Related Books