‘ಬಹುಜನ ನಾಯಕ ದಾದಾಸಾಹೇಬ್ ಕಾನ್ಷಿರಾಂ’ ಅನಿಲ್ ಸಿ. ಹೊಸಮನಿ ಅವರು ಬರೆದಿರುವ ಕಾನ್ಷಿರಾಂ ಅವರ ಜೀವನಗಾಥೆ. ಈ ಕೃತಿಗೆ ಡಾ.ಆರ್.ಮೋಹನ್‍ರಾಜ್ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ತಿಳಿಸುತ್ತಾ ‘ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆಯು ತುಂಬಾ ಗಟ್ಟಿಯಾಗಿದ್ದು, ಸಮಾಜದ ಎಲ್ಲಾ ವಲಯಗಳಲ್ಲಿಯೂ ಇದು ಬೇರೂರಿದೆ. 21ನೇ ಶತಮಾನದ ಬದಲಾವಣೆಯ ಈ ಕಾಲಘಟ್ಟದಲ್ಲಿಯೂ ‘ಅಚ್ಚೇದಿನ್’, ‘ಸಬ್‍ಕಾ ವಿಕಾಸ್’ನ ಸಂದರ್ಭದಲ್ಲಿಯೂ ಅಸ್ಪೃಶ್ಯರೆ, ಮಹಿಳೆಯರ, ಆದಿವಾಸಿಗಳ ಹಾಗೂ ಧಾರ್ಮಿಕ ಅಲ್ಪ, ಸಂಖ್ಯಾತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ಹಲ್ಲೆ, ದೌರ್ಜನ್ಯಗಳು ಕಡಿಮೆಯಾಗಿಲ್ಲ. ಜಾಗತಿಕ ಮಟ್ಟದಲ್ಲಿ ರಾಜಕೀಯ, ಬೌದ್ಧಿಕ ಬೆಳವಣಿಗೆಗಳು ಯಾವುವು ಸಹ ಅಸ್ಪೃಶ್ಯತೆಯನ್ನು ತೊಡೆದು ಹಾಕುವುದಕ್ಕೆ ಸಾಧ್ಯವಾಗದೇ ಇರುವುದು ಶೋಚನೀಯವಾದುದ್ದು.
ಭಾರತಕ್ಕೆ ಸಂವಿಧಾನ ಜಾರಿಯಾಗಿ 75 ವರ್ಷಗಳು ಕಳೆದಿವೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು 1949 ನವೆಂಬರ್ 25ರಂದು ಸಂವಿಧಾನವನ್ನು ಅರ್ಪಿಸಿ ಹೇಳಿದ ಮಾತುಗಳಿಗೆ ವಿರುದ್ಧವಾದ ಜೀವನಕ್ಕೆ ನಾವು ಕಾಲಿಟ್ಟಿದ್ದೇವೆ. ಇಂದಿನಿಂದ ನಾವುಗಳು ರಾಜಕೀಯ ಸಮಾನರು. ಆದರೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ನಮ್ಮಲ್ಲಿದೆ. ಇದನ್ನು ಆದಷ್ಟು ಬೇಗ ತೊಡೆದು ಹಾಕದಿದ್ದರೆ ಮುಂದೊಂದು ದಿನ ಈ ವ್ಯವಸ್ಥೆ ಬುಡಮೇಲಾಗುತ್ತದೆ ಎಂಬ ಎಚ್ಚರಿಕೆಯನ್ನು ಬಾಬಾಸಾಹೇಬರು ಅಂದೇ ನೀಡಿದ್ದರು. ಅಂದಿನಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ನಮ್ಮಲ್ಲಿ ಓಟಿನ ಮೌಲ್ಯ ತಿಳಿಯದೇ ನಮ್ಮ ಓಟನ್ನು ಮಾರಾಟಕ್ಕಿಟ್ಟಿದ್ದೇವೆ. ಇದರಿಂದ ಇಂದು ಅರಾಜಕತೇ, ಸರ್ವಾಧಿಕಾರ ಆರಂಭಗೊಂಡಿದೆ. ಇದರಿಂದ ಸಂವಿಧಾನವನ್ನೇ ಬದಲಾಯಿಸುವ ಮಾತುಗಳನ್ನಾಡುತ್ತಿದ್ದಾರೆ. ಬಹುಸಂಖ್ಯಾತರಾದ ಎಸ್ಸಿ/ಎಸ್ಟಿ, ಓಬಿಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಅಪನಂಬಿಕೆಗಳಲ್ಲಿ ಬದುಕುತ್ತಿದ್ದಾರೆ. ಇದರ ವಿರುದ್ಧ ಬಾಬಾಸಾಹೇಬ್ ಅಂಬೇಡ್ಕರ್ ಸಿದ್ಧಾಂತದ ಅಡಿಯಲ್ಲಿ ಬಾಬಾಸಾಹೇಬರು ಕೊಟ್ಟ ಓಟಿನ ಹಕ್ಕುನ್ನು ಉಪಯೋಗಿಸಿಕೊಂಡು ಈ ದೇಶದಲ್ಲಿ ನಾವು ಸಹ ಅಧಿಕಾರವನ್ನು ನಡೆಸಬಹುದು. ನಾವು ಸಮ-ಸಮಾಜವನ್ನು ನಿರ್ಮಾಣ ಮಾಡಲು ಸಶಕ್ತರಾಗಿದ್ದೇವೆ. ಎಂಬುದನ್ನು ಮೊಟ್ಟ ಮೊದಲು ತೋರಿಸಿಕೊಟ್ಟಿದ್ದು ಬಹುಜನರ ನಾಯಕರಾದ ಮಾನ್ಯವಾರ್ ಕಾನ್ಸಿರಾಂಜೀಯವರು. ಇವರು ಹುಟ್ಟಿದ್ದು ಪಂಜಾಬ್, ವಿದ್ಯಾಭ್ಯಾಸ ಡೆಹರಾಡೂನ್., ಉದ್ಯೋಗ ಪೂನಾ. ತನ್ನ ರಾಜಕೀಯ ಹೋರಾಟ ಉತ್ತರ ಪ್ರದೇಶ. ತನ್ನ ಬದುಕನ್ನು ಬಹುಜನ ಚಳವಳಿಗೆ ಸಮರ್ಪಿಸಿಕೊಂಡು, ಬಹು ಸಂಖ್ಯಾತರನ್ನು ಸಂಘಟಿಸುವ ಮೂಲಕ ಸಮಾನತೆಯ ಸಮಾಜಕ್ಕಾಗಿ, ಮನುಧರ್ಮದ ನಾಶಕ್ಕಾಗಿ ಮುಂದಾದವರು ಮಾನ್ಯವಾರ್ ಕಾನ್ಸಿರಾಂಜೀ.
ಉತ್ತರ ಭಾರತದಲ್ಲಿ ಬ್ರಾಹ್ಮಣ್ಯದ ವಿರುದ್ಧದ ಆಂದೋಲನಕ್ಕೆ ನಾಯಕತ್ವ ನೀಡಿದವರು, ಶೋಷಿತ ಸಮುದಾಯವನ್ನು ಗುಲಾಮಗಿರಿಯಿಂದ ಸ್ವಾಭಿಮಾನದ ರಾಜಕೀಯಕ್ಕೆ ಹೆಜ್ಜೆ ಹಾಕಿದವರು ಮಾನ್ಯವಾರ್ ಕಾನ್ಸಿರಾಂಜೀಯವರು. ನಮ್ಮ ನಾಯಕತ್ವದಲ್ಲೇ ನಮ್ಮ ಬಿಡುಗಡೆ ಸಾಧ್ಯವೆಂಬುದನ್ನು ಸಾಬೀತು ಮಾಡಿದರು. ನೌಕರರ ಜವಾಬ್ದಾರಿಗಳನ್ನು ಮನದಟ್ಟು ಮಾಡಿಕೊಟ್ಟ, ತನ್ನ ಸಮಾಜಕ್ಕೆ ತಾನು ಋಣಿಯಾಗಿರಬೇಕು. ಮರಳಿ ಸಮಾಜವನ್ನು ಕಟ್ಟುವುದರೊಂದಿಗೆ ಬಾಬಾಸಾಹೇಬರ ಕನಸ್ಸನ್ನು ನನಸ್ಸು ಮಾಡುವ ಹೊಣೆಗಾರಿಕೆಯನ್ನು ತಿಳಿಸಿಕೊಟ್ಟವರು. ಉತ್ತರ ಭಾರತದಲ್ಲಿ ಸಾಂಸ್ಕೃತಿಕವಾಗಿ ಇದ್ದಂತಹ ಸಂಪನ್ಮೂಲಗಳನ್ನು ಕ್ರೂಢೀಕರಿಸಿ ಶೋಷಿತರಲ್ಲಿ ಸ್ವಾಭಿಮಾನ ಮತ್ತು ಏಕತೆಯನ್ನು ಉಂಟುಮಾಡಿದರು. ಬಾಬಾಸಾಹೇಬರ ಸಿದ್ದಾಂತಗಳಿಗೆ ಪೂರಕವಾಗಿ ಜಾಗೃತಿಯನ್ನು ಉಂಟು ಮಾಡಿ, ಮನುವಾದಿಗಳಿಗೆ ಅಂತ್ಯ ಹಾಡಲು ಮುಂದಾದರು. ಮುಖ್ಯವಾಗಿ ಸಾಮಾಜಿಕ ಪರಿವರ್ತನೆಗಾಗಿ, ಮುಂದಿನಾ ಭವಿಷ್ಯ ಕಾಲಕ್ಕೂ ಹೇಗೆ ಇದನ್ನು ತೆಗೆದುಕೊಂಡು ಹೋಗಬೇಕೆಂದು ತಿಳಿಸಿದವರು ಮಾನ್ಯವಾರ್. ಕಾನ್ಸಿರಾಂಜೀ. ವ್ಯಾಪಕವಾದ ಸಮಾಜ ಪರಿವರ್ತನೆಗಾಗಿ, ಯಾವುದೇ ಕುಟುಂಬ ರಾಜಕಾರಣಕ್ಕೆ, ಅಧಿಕಾರಕ್ಕಾಗಿ ತನ್ನನ್ನು ತೊಡಗಿಸಿಕೊಳ್ಳದೇ ಸಮಾಜಕ್ಕಾಗಿ ತೊಡಗಿಸಿಕೊಂಡ ಮಹಾನ್ ನಾಯಕ ಮಾನ್ಯವಾರ್ ಕಾನ್ಸಿರಾಂಜೀ. ಇವರ ಜೀವಾನಾಧಾರಿತ ಪುಸ್ತಕವನ್ನು ಮರುಮುದ್ರಣ ಮಾಡುತ್ತಿರುವ ಗೆಳೆಯ ಸಮಾಜದ ಬಗ್ಗೆ ಸದಾ ಕಳಕಳಿಯನ್ನು ಹೊಂದಿರುವ ಪರಶುರಾಮರ ಶ್ರಮ ಮತ್ತು
ಬದ್ಧತೆಯನ್ನು ಮೆಚ್ಚಲೇಬೇಕು ಈಗಾಗಲೇ ಅಂಬೇಡ್ಕರ್‍ವಾದ ಹಾಗೂ ಇತರೆ ಪುಸ್ತಕಗಳನ್ನು ಮುದ್ರಿಸಿ, ಜನಸಾಮಾನ್ಯರಿಗೆ ತಲುಪುವ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇವರ ದಾರಿ ಯಶಸ್ಸು ಕಾಣಲಿ. ಇವರ ಸೇವೆ ಎಲ್ಲರಿಗೂ ಸಿಗಲಿ ಎಂದು ಆರೈಸುತ್ತಾ, ನಾವೆಲ್ಲರೂ ಈ ದಾರಿಯಲ್ಲಿ ಸಾಗೋಣವೆಂದು ಆಶಿಸುತ್ತೇನೆ’ ಎಂದಿದ್ದಾರೆ
©2024 Book Brahma Private Limited.